ADVERTISEMENT

ಕೊರೊನಾಗಾಗಿ ಮುಸ್ಲಿಮರನ್ನು ದೂರಬೇಡಿ: ಆರ್‌ಎಸ್‌ಎಸ್‌ ಮುಖ್ಯಸ್ಥ

ಕಣ್ಣೊರೆಸುವ ಕಾಲದಲ್ಲಿ ತಾರತಮ್ಯ ಸಲ್ಲದು

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2020, 7:32 IST
Last Updated 28 ಏಪ್ರಿಲ್ 2020, 7:32 IST
   

ಮುಂಬೈ:‘ಯಾರೋ ಕೆಲವರು ಮಾಡಿದ ತಪ್ಪನ್ನು ಇಡೀ ಸಮುದಾಯದ ಮೇಲೆ ಹೊರಿಸುವುದು ತಪ್ಪು’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸರಸಂಘಚಾಲಕ (ಮುಖ್ಯಸ್ಥ) ಮೋಹಜ್‌ ಭಾಗವತ್ ಹೇಳಿದ್ದಾರೆ.

ನಾಗಪುರದಲ್ಲಿರುವ ಸಂಘಟನೆಯ ಕೇಂದ್ರ ಕಚೇರಿಯಿಂದ ವೆಬ್‌ಕಾಸ್ಟ್‌ಮೂಲಕ ಮಾತನಾಡಿದ ಅವರು, ‘130 ಕೋಟಿ ಭಾರತೀಯರು ನಮ್ಮ ಕುಟುಂಬದವರೇ. ನಾವೆಲ್ಲ ಒಂದೇ. ಕೆಲವರು ಮಾಡಿದ ತಪ್ಪಿಗೆ ಇಡಿಯಾಗಿ ಒಂದು ಸಮುದಾಯವನ್ನು ದೂರುವುದು ಸರಿಯಲ್ಲ’ ಎಂದು ವಿವರಿಸಿದ್ದಾರೆ.

‘ಪರಿಹಾರ ವಿತರಣೆಯಲ್ಲಿಯಾವುದೇ ತಾರತಮ್ಯ ಮಾಡಬಾರದರು. ಎಲ್ಲಸಂತ್ರಸ್ತರಿಗೆ ನೆರವಾಗಬೇಕು’ ಎಂದು ಮನವಿ ಮಾಡಿದ್ದಾರೆ.

ADVERTISEMENT

ತಬ್ಲೀಗಿಜಮಾತ್‌ ಸಂಘಟನೆಯ ಹೆಸರನ್ನು ಹೇಳದೆ ಮಾತನಾಡಿದ ಭಾಗವತ್‌, ‘ಕೆಲವರುಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ದೂಷಿಸಬಾರದು. ಎರಡೂ ಸಮುದಾಯಗಳಲ್ಲಿನ ಪ್ರಜ್ಞಾವಂತರು ಮುಂದೆ ಬರಬೇಕು. ಜನರ ಮನಸ್ಸಿನಲ್ಲಿರುವ ಪೂರ್ವಗ್ರಹವನ್ನು ತೊಡೆದು ಹಾಕಲು ಸಂವಾದಗಳನ್ನು ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.

ಇದೇ ತಿಂಗಳ ಆರಂಭದಲ್ಲಿ ಮಹಾರಾಷ್ಟ್ರದ ಪಾಲ್ಗರ್‌ನಲ್ಲಿ ಸಂತರ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಪೊಲೀಸರು ಮತ್ತು ದಾಳಿಕೋರರನ್ನು ಟೀಕಿಸಿದ್ದಾರೆ.

‘ಗ್ರಾಮಸ್ಥರು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಬಾರದು. ಮೃತಪಟ್ಟ ಸಂತರಿಬ್ಬರೂ ನಿರಪರಾಧಿಗಳು. ನಾವು ಬೇರೆಲ್ಲವನ್ನು ಬದಿಗಿಟ್ಟು, ಮುಗ್ಧ ಜನರನ್ನು ಕೊಲ್ಲುವುದು ಸರಿಯೇ ಎಂದು ಯೋಚಿಸೋಣ. ಇಂಥ ಘಟನೆ ಸಂಭವಿಸಬೇಕಿತ್ತು ಎಂದೆನಿಸುತ್ತದೆಯೇ? ಆ ಘಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಪೊಲಿಸರು ಏನು ಮಾಡುತ್ತಿದ್ದರು’ ಎಂದು ಪ್ರಶ್ನಿಸಿದ್ದಾರೆ.

‘ಗಲಭೆಗಳಿಗೆ ಪ್ರಚೋದಿಸುವವರ ಸಂಖ್ಯೆಗೇನೂ ಕೊರತೆ ಇಲ್ಲ. ಅವರು ಅದರಲ್ಲಿ ನಿಪುಣರು. ಸಮಾಜವನ್ನು ಒಡೆಯುವುದು ಅವರ ತಂತ್ರ. ನಾವು ಅಂಥವರಿಂದ ದೂರ ಇರಬೇಕು’ ಎಂದು ಕರೆ ನೀಡಿದ್ದಾರೆ.

‘ಕೊರನಾವೈರಸ್ ಹರಡುವುದನ್ನು ತಡೆಯಲು ಎಲ್ಲರೂ ಲಾಕ್‌ಡೌನ್‌ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ನಿಯಮಗಳನ್ನು ಪಾಲಿಸಬೇಕು’ ಎಂದು ಕೋರಿದ ಅವರು, ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು ಶ್ಲಾಘಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.