ADVERTISEMENT

ನಿಜವಾದ ಶಿವಸೈನಿಕ ಸಂಜಯ್ ರಾವುತ್ ಬಗ್ಗೆ ಹೆಮ್ಮೆ ಇದೆ: ಉದ್ಧವ್‌ ಠಾಕ್ರೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಆಗಸ್ಟ್ 2022, 13:17 IST
Last Updated 1 ಆಗಸ್ಟ್ 2022, 13:17 IST
ಸಂಜಯ್ ರಾವುತ್
ಸಂಜಯ್ ರಾವುತ್   

ಮುಂಬೈ: ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಶಿವಸೇನಾ ನಾಯಕ ಸಂಜಯ್ ರಾವುತ್ ಬಗ್ಗೆ ಹೆಮ್ಮೆಪಡುತ್ತೇನೆ ಎಂದು ತಿಳಿಸಿದ್ದಾರೆ.

ಭೂ ಹಗರಣಕ್ಕೆ ಸಂಬಂಧಿಸಿದಂತೆ ರಾವುತ್‌ ಅವರನ್ನು ಜಾರಿ ನಿರ್ದೇಶನಾಲಯವು ವಶಕ್ಕೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಉದ್ಧವ್‌ ಈ ಮಾತುಗಳನ್ನು ಆಡಿದ್ದಾರೆ.

‘ಯಾವುದೇ ಒತ್ತಡಕ್ಕೆ ಮಣಿಯದಿರುವ ಸಂಜಯ್‌ ರಾವುತ್‌ ಬಗ್ಗೆ ಹೆಮ್ಮೆ ಪಡುತ್ತೇನೆ’ ಎಂದು ಹೇಳಿದ್ದಾರೆ.

ADVERTISEMENT

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಭೂ ಹಗರಣ ಪ್ರಕರಣದಲ್ಲಿ ಬಂಧಿತರಾಗಿರುವ ರಾವುತ್ ಅವರು ಶಿವಸೇನಾ ಸಂಸ್ಥಾಪಕ ದಿವಂಗತ ಬಾಳಾ ಠಾಕ್ರೆ ಅವರ ನಿಜವಾದ ಶಿಷ್ಯ ಮತ್ತು ಶಿವಸೈನಿಕ’ ಎಂದು ಬಣ್ಣಿಸಿದ್ದಾರೆ.

‍‘ಅವರು (ರಾವುತ್‌) ಮಾಡಿದ ಅಪರಾಧವೇನು? ಅವರೊಬ್ಬ ಪತ್ರಕರ್ತ, ಶಿವಸೈನಿಕ ಹಾಗೂ ನಿರ್ಭೀತರು. ಮನಸ್ಸಿಗೆ ಒಪ್ಪಿತವಾಗದಿರುವುದನ್ನು ಅವರು ನೇರವಾಗಿ ಹೇಳುತ್ತಾರೆ. ಈ ವಿಚಾರದಲ್ಲಿ ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ’ ಎಂದು ಠಾಕ್ರೆ ಹರಿಹಾಯ್ದಿದ್ದಾರೆ.

ಭೂ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಶಿವಸೇನಾ ನಾಯಕ ಸಂಜಯ್‌ ರಾವುತ್‌ ನಿವಾಸದಲ್ಲಿ ಭಾನುವಾರ ಬೆಳಿಗ್ಗೆ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಆ ನಂತರ ಅವರನ್ನು ವಶಕ್ಕೆ ಪಡೆದಿದ್ದಾರೆ.

ಇದೇ ವೇಳೆ, ರಾವುತ್‌ ಮನೆಗೆ ಭೇಟಿ ನೀಡಿರುವ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್‌ ಠಾಕ್ರೆ ಅವರು ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದ್ದಾರೆ.

ಮೂಲಗಳ ಪ್ರಕಾರ, ರಾವುತ್‌ ನಿವಾಸದಿಂದ ₹11.50 ಲಕ್ಷ ಅಕ್ರಮ ನಗದು ಹಣವನ್ನು ಇ.ಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

₹1,034 ಕೋಟಿ ಮೊತ್ತದ ಪತ್ರಾ ಚಾಲ್‌ ಭೂ ಹಗರಣದ ಸುಳಿಯಲ್ಲಿ ರಾವುತ್, ಅವರ ಪತ್ನಿ ಹಾಗೂ ಸ್ನೇಹಿತ ಶಾಮೀಲಾಗಿದ್ದಾರೆ ಎನ್ನಲಾಗಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.