
ಮೆಹಬೂಬನಗರ (ತೆಲಂಗಾಣ): ವಿ.ಡಿ. ಸಾವರ್ಕರ್ ಅವರಿಗೆ ಭಾರತ ರತ್ನ ನೀಡಬೇಕೆಂಬ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಬೇಡಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ‘ಗಾಂಧಿಯನ್ನು ಹತ್ಯೆಗೈದ ಗೋಡ್ಸೆಗೂ ಒಂದು ದಿನ ಬಿಜೆಪಿ ಭಾರತ ರತ್ನ ಕೊಡಿಸುತ್ತದೆ’ ಎಂದಿದ್ದಾರೆ.
‘1857ರಲ್ಲಿ ಬ್ರಿಟಿಷರ ವಿರುದ್ಧ ನಡೆದ ಹೋರಾಟದಲ್ಲಿ ಹೈದರಾಬಾದ್‌ನ ಮಕ್ಕಾ ಮಸೀದಿಯ ಮೌಲ್ವಿ ಅಲ್ಲಾವುದ್ದೀನ್ ಅವರು ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಅವರನ್ನು ಔರಂಗಾಬಾದ್‌ನಲ್ಲಿ ಸೆರೆ ಹಿಡಿಯಲಾಯಿತು. ನಿಜಾಮರಿಗೆ ಬ್ರಿಟಿಷರ ರಕ್ಷಣೆ ಇತ್ತು. ಆದರೆ ಮೌಲ್ವಿ ಅಲ್ಲಾವುದ್ದೀನ್ ಅವರನ್ನು ಬ್ರಿಟಿಷರು ಬಂಧಿಸಿದ್ದರು. ಅಂಡಮಾನ್‌ನಲ್ಲಿ ಕರಿ ನೀರಿನ (ಕಾಲಾ ಪಾನಿ) ಶಿಕ್ಷೆಗೆ ಗುರಿಯಾದ ಮೊದಲ ವ್ಯಕ್ತಿ ಇವರು’ ಎಂದಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
'ಮೌಲಾನಾ ಅವರು ಅಲ್ಲಿಯೇ ನಿಧನರಾದರು. ಆದರೆ, ಬ್ರಟಿಷರಿಗೆ ಆರು ಬಾರಿ ಕ್ಷಮಾಪಣಾ ಪತ್ರ ಬರೆದ ವ್ಯಕ್ತಿ ಸಾವರ್ಕರ್‌ಗೆ ‘ಭಾರತ ರತ್ನ’ ನೀಡಲು ಬಿಜೆಪಿ ಮುಂದಾಗಿದೆ. ಹೀಗೇ ಆದರೆ, ಮುಂದೊಂದು ದಿನ ಗೋಡ್ಸೆಗೂ ಭಾರತ ರತ್ನ ಕೊಡಿಸಲು ಬಿಜೆಪಿ ಮುಂದಾಗುವುದರಲ್ಲಿ ಯಾವುದೇ ಅನುಮಾನ ಬೇಡ’ ಎಂದು ಓವೈಸಿ ಹೇಳಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷಗಳು ಸಂದ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಮೊಹನ ಭಾಗವತ್ ಅವರು, ‘ಸಾವರ್ಕರ್ ಅವರಿಗೆ ಭಾರತ ರತ್ನ ನೀಡಿದರೆ, ಪ್ರಶಸ್ತಿಯ ಮೌಲ್ಯ ಇನ್ನಷ್ಟು ಹೆಚ್ಚಲಿದೆ. ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ನಾನಿಲ್ಲ. ಸಮಿತಿಯಲ್ಲಿರುವವರನ್ನು ನಾನು ಭೇಟಿ ಮಾಡಿದರೆ, ಖಂಡಿತಾ ಕೇಳುವೆ. ಒಂದೊಮ್ಮೆ ಸಾವರ್ಕರ್ ಅವರಿಗೆ ಈ ಪ್ರಶಸ್ತಿ ಲಭಿಸದಿದ್ದರೂ, ಕೋಟ್ಯಂತರ ಹೃದಯಗಳ ಸಾಮ್ರಾಟ ಅವರು’ ಎಂದಿದ್ದರು.
ಮಾಣಿಕ್ಕಂ ಟ್ಯಾಗೋರ್ ಅವರು ಭಾಗವತ್ ಅವರ ಬೇಡಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಇದು ಭಾರತ ರತ್ನ ಪ್ರಶಸ್ತಿಗೆ ಮತ್ತು ದೇಶಕ್ಕಾಗಿ ತಮ್ಮ ಪ್ರಾಣವನ್ನು ಮುಡಿಪಾಗಿಟ್ಟ ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್, ಅಂಬೇಡ್ಕರ್ ಅವರಂಥ ಸ್ವಾತಂತ್ರ್ಯ ಯೋಧರಿಗೆ ಮಾಡಿದ ಅವಮಾನ’ ಎಂದಿದ್ದಾರೆ.
ಭಾಗವತ್ ಅವರ ಬೇಡಿಕೆಯನ್ನು ಬಿಜೆಪಿ ಮತ್ತು ಶಿವಸೇನಾ (ಯುಬಿಟಿ) ಸ್ವಾಗತಿಸಿದೆ.
ಬಿಜೆಪಿ ಸಂಸದ ಮದನ್ ರಾಥೋಡ್ ಅವರು ಪ್ರತಿಕ್ರಿಯಿಸಿ, ‘ಇತಿಹಾಸವನ್ನು ಸರಿಯಾಗಿ ಓದದವರು ಮಾತ್ರ ಸಾವರ್ಕರ್ ಅವರನ್ನು ವಿರೋಧಿಸುತ್ತಿದ್ದಾರೆ’ ಎಂದಿದ್ದರು.
ಶಿವಸೇನಾ ಯುಬಿಟಿ ಸಂಸದ ಸಂಜಯ್ ರಾವುತ್ ಅವರು ಪ್ರತಿಕ್ರಿಯಿಸಿ, ‘ಸಾವರ್ಕರ್ ಅವರಿಗೆ ಬಿಜೆಪಿ ಸರ್ಕಾರವು ಭಾರತ ರತ್ನ ನೀಡುತ್ತಿಲ್ಲ. ಮೋಹನ್ ಭಾಗವತ್ ಅವರು ಈ ವಿಷಯವನ್ನು ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನೇ ಕೇಳಬೇಕು’ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.