ದೇವೇಂದ್ರ ಫಡಣವೀಸ್ ಮತ್ತು ಸಂಜಯ್ ರಾವುತ್
ಮುಂಬೈ: ಸ್ಟ್ಯಾಂಡ್ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಅವರ ಕಾರ್ಯಕ್ರಮವನ್ನು ಚಿತ್ರೀಕರಿಸಿದ ಮುಂಬೈನ ಹೋಟೆಲ್‌ಗೆ ಹಾನಿ ಮಾಡಿರುವ ಮಹಾರಾಷ್ಟ್ರ ಡಿಸಿಎಂ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಕಾರ್ಯಕರ್ತರ ನಡೆಯನ್ನು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.
ಕುನಾಲ್ ಕಾಮ್ರಾ ಅವರು ಏಕನಾಥ ಶಿಂದೆ ಅವರನ್ನು ‘ದೇಶದ್ರೋಹಿ’ ಎಂದು ಕರೆದಿದ್ದಾರೆ ಎಂದು ಆರೋಪಿಸಿ ಅವರ ಕಾರ್ಯಕ್ರಮವನ್ನು ಚಿತ್ರೀಕರಿಸಿದ ಮುಂಬೈನ ಹೋಟೆಲ್ ಅನ್ನು ಶಿಂದೆ ನೇತೃತ್ವದ ಶಿವಸೇನಾ ಕಾರ್ಯಕರ್ತರು ಹಾನಿಗೊಳಿಸಿದ್ದರು. ಜತೆಗೆ, ಕುನಾಲ್ ಕಾಮ್ರಾ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಶಿವಸೇನಾ ಪಕ್ಷದ ಸಾಮಾಜಿಕ ಮಾಧ್ಯಮ ಉಸ್ತುವಾರಿ ರಸೂಲ್ ಎನ್. ಕನಾಲ್ ದೂರು ದಾಖಲಿಸಿದ್ದಾರೆ.
ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಶಿವಸೇನಾ (ಯುಬಿಟಿ) ರಾಜ್ಯಸಭಾ ಸದಸ್ಯ ಸಂಜಯ್ ರಾವುತ್, ‘ದೇವೇಂದ್ರ ಜೀ... ನೀವು ದುರ್ಬಲ ಮುಖ್ಯಮಂತ್ರಿ’ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿದ್ದಾರೆ.
‘ಗೃಹಸಚಿವರು ಆಗಿರುವ ದೇವೇಂದ್ರ ಫಡಣವೀಸ್ ಜೀ ಅವರೇ, ನಿಮ್ಮ ಮೈತ್ರಿ ಪಾಲುದಾರರ ಬಗ್ಗೆ ಹೆಮ್ಮೆ ಪಡಬೇಕು’ ಎಂದು ಶಿವಸೇನಾ(ಯುಬಿಟಿ) ಪಕ್ಷದ ನಾಯಕಿ ಪ್ರಿಯಾಂಕಾ ಚತುರ್ವೇದಿ ಕಿಡಿಕಾರಿದ್ದಾರೆ.
‘ಏಕನಾಥ ಶಿಂದೆ ಅವರ ಹೇಡಿಗಳ ಗ್ಯಾಂಗ್ ಹಾಸ್ಯ ಕಾರ್ಯಕ್ರಮ ವೇದಿಕೆಯಲ್ಲಿ ದಾಂಧಲೆ ನಡೆಸಿದೆ. ಶಿಂದೆ ಕುರಿತಂತೆ ಕುನಾಲ್ ಕಮ್ರಾ ಹಾಡೊಂದನ್ನು ಹಾಡಿದ್ದರು. ಅವರು ಹೇಳಿರುವುದು ಶೇ 100ರಷ್ಟು ಸತ್ಯ. ಹೇಡಿ ಮಾತ್ರ ಬೇರೊಬ್ಬರ ಹಾಡಿಗೆ ಪ್ರತಿಕ್ರಿಯಿಸುತ್ತಾನೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹೇಗಿದೆ?, ಏಕನಾಥ ಶಿಂದೆ ಅವರಿಂದ ಸಿಎಂ ಮತ್ತು ಗೃಹ ಸಚಿವರನ್ನು ದುರ್ಬಲಗೊಳಿಸುವ ಮತ್ತೊಂದು ಪ್ರಯತ್ನ ಇದಾಗಿದೆ’ ಎಂದು ಶಾಸಕ ಆದಿತ್ಯ ಠಾಕ್ರೆ ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.