ನರೇಂದ್ರ ಮೋದಿ
ಪಿಟಿಐ ಚಿತ್ರ
ನವದೆಹಲಿ: ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಸೇನೆ ಮತ್ತು ಉಗ್ರರ ವಿರುದ್ಧ ಕ್ರಮ ಕೈಗೊಳ್ಳಬೇಕೆ ಹೊರತು, ಅಮಾಯಕ ಜನರ ವಿರುದ್ಧ ಅಲ್ಲ ಎಂದು ನಟಿ ಹನಿಯಾ ಆಮಿರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಬೆನ್ನಲ್ಲೇ ಭಾರತದ ಬಗ್ಗೆ 'ಸುಳ್ಳು, ಪ್ರಚೋದನಕಾರಿ ಮತ್ತು ಕೋಮು ಭಾವನೆ ಕೆರಳಿಸುವ' ಸುದ್ದಿಗಳನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಪಾಕಿಸ್ತಾನದ 16 ಯೂಟ್ಯೂಬ್ ಚಾನೆಲ್‌ಗಳನ್ನು ಕೇಂದ್ರ ಸರ್ಕಾರ ಭಾರತದಲ್ಲಿ ನಿಷೇಧಿಸಿತ್ತು. ಜತೆಗೆ, ಪಾಕ್‌ನ ಹೆಸರಾಂತ ಸೆಲೆಬ್ರಿಟಿಗಳಾದ ಮಹಿರಾ ಖಾನ್, ಅಲಿ ಜಫರ್, ನಟಿ ಹನಿಯಾ ಆಮಿರ್ ಸೇರಿದಂತೆ ಅನೇಕರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ತಡೆಹಿಡಿಯಲಾಗಿದೆ.
ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಹನಿಯಾ, ‘ಪಾಕ್‌ನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರು ಕೈಗೊಂಡ ಕ್ರಮಗಳಿಂದಾಗಿ ಭಾರತದಲ್ಲಿ ಇಡೀ ಪಾಕಿಸ್ತಾನಿ ಮನರಂಜನಾ ಉದ್ಯಮವನ್ನು ನಿಷೇಧಿಸಲಾಗಿದೆ. ಇದೀಗ ಸೆಲೆಬ್ರಿಟಿಗಳ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸಹ ನಿರ್ಬಂಧಿಸಲಾಗುತ್ತಿದೆ’ ಎಂದು ಗುಡುಗಿದ್ದಾರೆ.
‘ಚಿತ್ರರಂಗದ ನಟ–ನಟಿಯರು ಸೇರಿದಂತೆ ಪಾಕಿಸ್ತಾನದ ಸಾಮಾನ್ಯ ಜನರು ಭಾರತಕ್ಕೆ ಕೆಟ್ಟದ್ದು ಆಗಬೇಕೆಂದು ಬಯಸಿಲ್ಲ. ಪಹಲ್ಗಾಮ್ ದಾಳಿಯ ಹಿಂದೆ ಪಾಕ್ ಸೈನ್ಯ ಮತ್ತು ಇಸ್ಲಾಮಿಕ್ ಭಯೋತ್ಪಾದಕರು ಇದ್ದಾರೆ. ಆದರೆ, ನೀವು ಪಾಕ್‌ನ ಸಾಮಾನ್ಯ ಜನರನ್ನು ಏಕೆ ಶಿಕ್ಷಿಸುತ್ತಿದ್ದೀರಿ? ದಯವಿಟ್ಟು ಪಾಕ್ ಸೈನ್ಯ ಮತ್ತು ಉಗ್ರರ ವಿರುದ್ಧ ಕ್ರಮ ಕೈಗೊಳ್ಳಿ, ಅಮಾಯಕ ನಾಗರಿಕರ ವಿರುದ್ಧ ಅಲ್ಲ’ ಎಂದು ನಾನು ಭಾರತದ ಪ್ರಧಾನಿ ಮೋದಿ ಅವರಲ್ಲಿ ವಿನಂತಿಸುವುದಾಗಿ ಹನಿಯಾ ತಿಳಿಸಿದ್ದಾರೆ.
‘ನನ್ನ ಮತ್ತು ಇತರ ಪಾಕ್ ಸೆಲೆಬ್ರಿಟಿಗಳ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಭಾರತ ನಿಷೇಧಿಸಿದೆ. ಇದು ನೋವಿನ ಸಂಗತಿಯಾಗಿದೆ. ಆದರೆ, ನಮ್ಮ ಸರ್ಕಾರದ (ಪಾಕ್) ವೈಫಲ್ಯವು ಇದಕ್ಕೆ ಕಾರಣವಾಗಿದೆ. ಭಾರತ ನಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸ್ಥಗಿತಗೊಳಿಸದಿದ್ದರೆ, ಯಾರೂ ಮಾತನಾಡುತ್ತಿರಲಿಲ್ಲ. ಈಗ ನಾವೆಲ್ಲರೂ ನಮ್ಮ ಸರ್ಕಾರದ ಅವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಬೇಕಿದೆ’ ಎಂದು ಹನಿಯಾ ಹೇಳಿದ್ದಾರೆ.
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಬೆನ್ನಲ್ಲೇ ಉಭಯ ರಾಷ್ಟ್ರಗಳ ಮಧ್ಯೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.