ನಾಗರಕರ್ನೂಲ್(ತೆಲಂಗಾಣ): ಶ್ರೀಶೈಲಂ ಎಡದಂಡೆ ಕಾಲುವೆ (ಎಸ್‌ಎಲ್‌ಬಿಸಿ) ಕುಸಿದು, ಅದರ ಒಳಭಾಗದಲ್ಲಿ ಸಿಲುಕಿರುವ 8 ಕಾರ್ಮಿಕರ ರಕ್ಷಣಾ ಕಾರ್ಯಕ್ಕೆ ರೋಬೊಗಳನ್ನು ನಿಯೋಜಿಸುವಂತೆ ತೆಲಂಗಾಣ ನೀರಾವರಿ ಸಚಿವ ಎನ್. ಉತ್ತಮ್ ಕುಮಾರ್ ರೆಡ್ಡಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲೆಯ ದೋಮಲಪೆಂಟ ಗ್ರಾಮದ ಬಳಿ ನಿರ್ಮಾಣ ಹಂತದಲ್ಲಿರುವ ಸುರಂಗದ ಒಂದು ಭಾಗ ಫೆ.22ರಂದು ಕುಸಿಯಿತು. ಅಂದಿನಿಂದ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಯಂತ್ರದಿಂದ ಸುರಂಗವನ್ನು ಕೊರೆಯುವ ಕಾರ್ಯಾಚರಣೆಯಲ್ಲಿ ರಕ್ಷಣಾ ಸಿಬ್ಬಂದಿ ಅಪಾಯಕ್ಕೆ ಒಳಗಾಗುವ ಕಾರಣ ರೋಬೊಗಳ ನಿಯೋಜನೆಗೆ ಸರ್ಕಾರಕ್ಕೆ ಮುಂದಾಗಿದೆ.
ಸುರಂಗ ಇರುವ ಸ್ಥಳಕ್ಕೆ ಭೇಟಿ ನೀಡಿ, ರಕ್ಷಣಾ ಕಾರ್ಯಾಚರಣೆಯ ಪರಿಶೀಲನೆ ನಡೆಸಿದ ಉತ್ತಮ್ ಕುಮಾರ್, ‘ರೋಬೊ ತಜ್ಞರ ನೆರವಿನೊಂದಿಗೆ (ಹೈದರಾಬಾದ್ ಮೂಲದ ಖಾಸಗಿ ಕಂಪನಿಯೊಂದರ) ರಕ್ಷಣಾ ಕಾರ್ಯಾಚರಣೆ ನಡೆಸಲು ಸರ್ಕಾರವು ₹4 ಕೋಟಿ ಖರ್ಚು ಮಾಡಲಿದೆ’ ಎಂದು ತಿಳಿಸಿದರು.
ಮಾರ್ಚ್ 2ರಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಪರಿಸ್ಥಿತಿ ಪರಿಶೀಲಿಸಿದ್ದರು. ‘ರಕ್ಷಣಾ ಸಿಬ್ಬಂದಿಗೆ ಯಾವುದೇ ಅಪಾಯವಾಗದಂತೆ ಅಗತ್ಯವಿದ್ದರೆ ಸುರಂಗದೊಳಗೆ ರೋಬೊಗಳನ್ನು ಬಳಸಿ ರಕ್ಷಣಾ ಕಾರ್ಯಾಚರಣೆ ಮುಂದುವರಿಸಲು‘ ಅಧಿಕಾರಿಗಳಿಗೆ ರೆಡ್ಡಿ ಸೂಚಿಸಿದ್ದರು.
ಫೆಬ್ರುವರಿ 22ರಂದು ಶ್ರೀಶೈಲಂ ಎಡದಂಡೆ ಕಾಲುವೆ ಯೋಜನೆಯ ಸುರಂಗದ ಒಂದು ಭಾಗ ಕುಸಿದು ಬಿದ್ದ ಪರಿಣಾಮ ಸುಮಾರು 8 ಮಂದಿ ಕಾರ್ಮಿಕರು ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.