ನರೇಂದ್ರ ಮೋದಿ
(ಪಿಟಿಐ ಚಿತ್ರ)
ನವದೆಹಲಿ: 'ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳದಂತೆ ಭಾರತವನ್ನು ಜಗತ್ತಿನ ಯಾವ ದೇಶವೂ ತಡೆ ಹಿಡಿದಿಲ್ಲ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಲೋಕಸಭೆಯಲ್ಲಿ 'ಆಪರೇಷನ್ ಸಿಂಧೂರ' ಕುರಿತು ನಡೆಯುತ್ತಿರುವ ಎರಡು ದಿನಗಳ ವಿಶೇಷ ಚರ್ಚೆಯಲ್ಲಿ ಇಂದು (ಮಂಗಳವಾರ) ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ, 'ಭಯೋತ್ಪಾದನೆಯ ವಿರುದ್ಧ ಭಾರತದ ಸ್ವಯಂ ರಕ್ಷಣೆಯ ಕ್ರಮವನ್ನು ಜಗತ್ತಿನ ಯಾವುದೇ ರಾಷ್ಟ್ರಗಳ ನಾಯಕರು ತಡೆ ಹಿಡಿದಿಲ್ಲ. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಪರವಾಗಿ ಕೇವಲ ಮೂರು ರಾಷ್ಟ್ರಗಳು ಮಾತ್ರ ಧ್ವನಿ ಎತ್ತಿವೆ' ಎಂದು ಹೇಳಿದ್ದಾರೆ.
'ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಜಗತ್ತಿನಾದ್ಯಂತ ಬೆಂಬಲ ಸಿಕ್ಕಿದರೂ ಕಾಂಗ್ರೆಸ್ ಮಾತ್ರ ದೇಶದ ಯೋಧರ ಶೌರ್ಯವನ್ನು ಬೆಂಬಲಿಸದಿರುವುದು ದುರದೃಷ್ಟಕರ. ರಾಜಕೀಯ ಲಾಭಕ್ಕಾಗಿ ನನ್ನನ್ನು ಗುರಿಯಾಗಿಸಿ ಟೀಕೆ ಮಾಡಲಾಯಿತು. ವೀರ ಯೋಧರನ್ನು ನಿರುತ್ಸಾಗೊಳಿಸಲಾಯಿತು' ಎಂದು ಅವರು ಹೇಳಿದ್ದಾರೆ.
'ಭಾರತ ನಡೆಸಿದ ದಾಳಿಯಲ್ಲಿ ಪಾಕಿಸ್ತಾನ ವಾಯುನೆಲೆಗಳು ಇನ್ನೂ 'ಐಸಿಯು'ನಲ್ಲಿದೆ. ಏಪ್ರಿಲ್ 22ರ ಭಯೋತ್ಪಾದಕ ದಾಳಿಯ ಸೂತ್ರಧಾರಿಗಳು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ' ಎಂದು ಹೇಳಿದ್ದಾರೆ.
'ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ಸ್ವಾವಲಂಬಿ ಭಾರತದ ಬಲವನ್ನು ಇಡೀ ಜಗತ್ತೇ ಕಂಡಿತು. ಪಹಲ್ಗಾಮ್ ದಾಳಿಗೆ ಸೇಡು ತೀರಿಸಿಕೊಳ್ಳಲು ನಾವು ಪಾಕಿಸ್ತಾನದೊಳಗಿನ ಭಯೋತ್ಪಾದಕ ತಾಣಗಳನ್ನು ಕೇವಲ 22 ನಿಮಿಷಗಳಲ್ಲಿ ಹೊಡೆದುರುಳಿಸಿದೆವು' ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.