ADVERTISEMENT

ಸ್ಪರ್ಧೆಯಿಂದ ಹಿಂದೆ ಸರಿಯಲಾರೆ: ನಾಮಪತ್ರ ಹಿಂಪಡೆಯುವ ಕಡೆಯ ದಿನ ತರೂರ್‌ ಸ್ಪಷ್ಟನೆ

ಪಿಟಿಐ
Published 8 ಅಕ್ಟೋಬರ್ 2022, 10:58 IST
Last Updated 8 ಅಕ್ಟೋಬರ್ 2022, 10:58 IST
ಶಶಿ ತರೂರ್‌
ಶಶಿ ತರೂರ್‌    

ನವದೆಹಲಿ: ಕಾಂಗ್ರೆಸ್‌ನ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ಸಂಸದ ಶಶಿ ತರೂರ್ ಅವರು ಚುನಾವಣೆಯಿಂದ ಹಿಂದೆ ಸರಿಯುವ ಮಾತನ್ನು ಶನಿವಾರ ತಳ್ಳಿಹಾಕಿದ್ದಾರೆ. ‘ಎಂದಿಗೂ ಸವಾಲಿನಿಂದ ಹಿಂದೆ ಸರಿಯುವುದಿಲ್ಲ ಮತ್ತು ಇದು ಅಂತಿಮ ಹೋರಾಟ’ ಎಂದು ಅವರು ಪ್ರತಿಪಾದಿಸಿದ್ದಾರೆ.

ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ತರೂರ್‌, ಪಕ್ಷದೊಳಗೆ ಇದು ‘ಸ್ನೇಹಪರ ಸ್ಪರ್ಧೆ’. ನಾನು ಸ್ಪರ್ಧೆಯಲ್ಲಿ ಉಳಿಯಲಿದ್ದೇನೆ ಎಂದು ಹೇಳಿದರು.

ಚುನಾವಣೆಯಲ್ಲಿ ತರೂರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ.

ADVERTISEMENT

‘ನಾನು ಇಂದು (ಚುನಾವಣೆಯಿಂದ) ಹಿಂದೆ ಸರಿಯುತ್ತಿದ್ದೇನೆ ಎಂದು ವದಂತಿಗಳು ಹರಡುತ್ತಿವೆ. ನಿಮಗೆ ಭರವಸೆ ನೀಡುತ್ತೇನೆ. ನಾನು ಸವಾಲಿನಿಂದ ಹಿಂದೆ ಸರಿಯುವುದಿಲ್ಲ. ನನ್ನ ಜೀವನದುದ್ದಕ್ಕೂ ಎಂದಿಗೂ ಹೋರಾಟದಿಂದ ನಿರ್ಗಮಿಸುವುದಿಲ್ಲ’ ಎಂದು ತಿರುವನಂತಪುರದ ಸಂಸದ ಟ್ವಿಟರ್‌ನಲ್ಲಿ ವಿಡಿಯೊ ಸಂದೇಶ ಬಿಡುಗಡೆ ಮಾಡಿದ್ದಾರೆ.

‘ಇದೊಂದು ಹೋರಾಟ. ಇದು ಪಕ್ಷದೊಳಗಿನ ಸೌಹಾರ್ದ ಸ್ಪರ್ಧೆ. ಇದು ಅಂತಿಮ ಹೋರಾಟ ಮತ್ತು ನಾನು ಸ್ಪರ್ಧೆಯಲ್ಲಿ ಉಳಿಯಲಿದ್ದೇನೆ. ದಯವಿಟ್ಟು ಅಕ್ಟೋಬರ್ 17 ರಂದು ಬಂದು ನನಗೆ ಮತ ಚಲಾಯಿಸಿ. ನಾಳೆ ಬಗ್ಗೆ ಯೋಚಿಸಿ, ತರೂರ್ ಬಗ್ಗೆ ಯೋಚಿಸಿ’ ಎಂದು ಅವರು ಭಾವನಾತ್ಮಕವಾಗಿ ಮಾತನಾಡಿದ್ದಾರೆ.

ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಯ ನಾಮಪತ್ರ ಹಿಂಪಡೆಯಲು ಅಕ್ಟೋಬರ್ 8 ಕಡೇ ದಿನ. ಇಂದು ತರೂರ್‌ ಅವರು ನೀಡಿರುವ ಸ್ಪಷ್ಟನೆ ಮಹತ್ವ ಪಡೆದುಕೊಂಡಿದೆ.

ಕಾಂಗ್ರೆಸ್‌ನ ಅಧ್ಯಕ್ಷೀಯ ಚುನಾವಣೆಗೆ ಸೆಪ್ಟೆಂಬರ್‌ 22 ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಸೆಪ್ಟೆಂಬರ್‌ 24 ರಿಂದ 30ರ ವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಅಕ್ಟೋಬರ್‌ 1ರಂದು ನಾಮಪತ್ರಗಳ ಪರಿಶೀಲನೆ ನಡೆದಿತ್ತು.

ಅಕ್ಟೋಬರ್‌ 17ರಂದು ಚುನಾವಣೆ ನಡೆಯಲಿದ್ದು, 19ರಂದು ಫಲಿತಾಂಶ ಹೊರಬೀಳಲಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.