
ಹಿಮಂತ ಬಿಸ್ವಾ ಶರ್ಮಾ ಮತ್ತು ಪ್ರಿಯಾಂಕ್ ಖರ್ಗೆ
ಬೆಂಗಳೂರು: ತಮ್ಮನ್ನು ‘ಮೊದಲ ದರ್ಜೆಯ ಮುಠ್ಠಾಳ’(ಫಸ್ಟ್ ಕ್ಲಾಸ್ ಈಡಿಯಟ್) ಎಂದು ಕರೆದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಒಬ್ಬ ‘ಮೂರನೇ ದರ್ಜೆ ವಂಚಕ’( ಥರ್ಡ್ ಕ್ಲಾಸ್ ಕ್ರೂಕ್) ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಅಸ್ಸಾಂನಲ್ಲಿ ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಅನುಮತಿ ದೊರೆತ ವಿಚಾರವಾಗಿ ಇಬ್ಬರು ನಾಯಕರ ನಡುವೆ ವಾಗ್ವಾದ ನಡೆಯುತ್ತಿದ್ದು, ವೈಯಕ್ತಿಕ ನಿಂದನೆಗೆ ಇಳಿಯುವವರೆಗೆ ತಲುಪಿದೆ.
ದೊಡ್ಡ ಕೈಗಾರಿಕೆಗಳ ಸ್ಥಾಪಿಸಲು ಈಶಾನ್ಯ ರಾಜ್ಯಗಳಲ್ಲಿ ಪ್ರತಿಭೆಗಳ ಕೊರೆತೆಯಿದೆ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಬಿಸ್ವಾ, ಪ್ರಿಯಾಂಕ್ ಅವರನ್ನು ‘ಫಸ್ಟ್ ಕ್ಲಾಸ್ ಮುಠ್ಠಾಳ’ ಎಂದು ಕರೆದಿದ್ದರು.
ಈ ಹೇಳಿಕೆಗೆ ಬುಧವಾರ ಪ್ರತಿಕ್ರಿಯಿಸಿದ್ದ ಪ್ರಿಯಾಂಕ್ ಖರ್ಗೆ, ಅಸ್ಸಾಂ ಸಿಎಂ ಒಬ್ಬ ‘ಮೂರನೇ ದರ್ಜೆ ವಂಚಕ’ ಎಂದು ಜರಿದಿದ್ದಾರೆ.
‘ಬಿಸ್ವಾ ಅವರ ಭಾಷೆ ಅವರ ಹತಾಶೆಯನ್ನು ತೋರಿಸುತ್ತದೆ. ಮೂರನೇ ದರ್ಜೆಯ ವಂಚಕನಿಂದ ನಾವು ಇನ್ನೇನು ನಿರೀಕ್ಷಿಸಬಹುದು’ ಎಂದು ಪ್ರಿಯಾಂಕ್ ತಿರುಗೇಟು ನೀಡಿದ್ದಾರೆ.
‘ಅವರು ನನ್ನ ಹೇಳಿಕೆಯನ್ನು ತಿರುಚಿ ರಾಜಕೀಯ ಮಾಡುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ. ತರಬೇತಿ ಪಡೆದುಕೊಳ್ಳಲು ಅನೇಕ ಅಸ್ಸಾಮಿಗರು ಬೆಂಗಳೂರಿಗೆ ಬರುತ್ತಿದ್ದಾರೆ ಎಂದು ಅವರೇ(ಬಿಸ್ವಾ) ಟ್ವೀಟ್ ಮಾಡಿದ್ದರು. ನಾವು ಅವರನ್ನು ಸ್ವಾಗತಿಸುತ್ತೇವೆ’ ಎಂದು ಹೇಳಿದ್ದಾರೆ.
‘ಇದು ಅವರಿಗೆ(ಬಿಸ್ವಾ) ಜಾತಿ ಮತ್ತು ಅಧಿಕಾರದಿಂದ ಸಿಕ್ಕಿರುವ ಸುಯೋಗದ ಪ್ರತೀಕ. ಇಲ್ಲದಿದ್ದರೆ ಏನೂ ಇರುತ್ತಿರಲಿಲ್ಲ’ ಎಂದಿದ್ದಾರೆ.