ADVERTISEMENT

ಕಮಲ್ ನಟನೆಯ Thug Life ಬಿಡುಗಡೆಗೆ ಕರ್ನಾಟಕದಲ್ಲಿ ನಿಷೇಧ; ಶುಕ್ರವಾರ SC ವಿಚಾರಣೆ

ಪಿಟಿಐ
Published 9 ಜೂನ್ 2025, 11:32 IST
Last Updated 9 ಜೂನ್ 2025, 11:32 IST
<div class="paragraphs"><p>‘ಥಗ್ ಲೈಪ್‌‘ </p></div>

‘ಥಗ್ ಲೈಪ್‌‘

   

ನವದೆಹಲಿ: ಕಮಲ್ ಹಾಸನ್‌ ನಟನೆಯ ತಮಿಳು ಚಲನಚಿತ್ರ ‘ಥಗ್‌ ಲೈಫ್‌‘ ಚಿತ್ರಕ್ಕೆ ಕರ್ನಾಟಕದಲ್ಲಿ ನಿಷೇಧ ಹೇರಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ನಡೆಸುವುದಾಗಿ ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. 

ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಪ್ರಮಾಣಪತ್ರ ಪಡೆದಿದ್ದರೂ, ಹಿಂಸಾಚಾರ ಸೃಷ್ಟಿಸಲಿದೆ, ಭಯೋತ್ಪಾದನೆಗೆ ಕಾರಣವಾಗಲಿದೆ ಹಾಗೂ ನಟರಲ್ಲದ ಕೆಲವರಿಂದ ಸಂವಿಧಾನ ಬಾಹಿರ ನಿರ್ದೇಶನಗಳನ್ನು ಆಧರಿಸಿ ಸಿನಿಮಾಗೆ ನಿಷೇಧ ಹೇರಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.

ADVERTISEMENT

ಬೆಂಗಳೂರಿನ ಎಂ. ಮಹೇಶ್ ರೆಡ್ಡಿ ಎಂಬುವವರು ವಕೀಲ ವಾಲನ್ ಅವರ ಮೂಲಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ನ್ಯಾ. ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ನ್ಯಾ. ಮನಮೋಹನ್ ಅರ್ಜಿಯ ವಿಚಾರಣೆ ನಡೆಸಿದರು.

ಕರ್ನಾಟಕ ಹೈಕೋರ್ಟ್‌ನಲ್ಲಿ ಈ ವಿಷಯವನ್ನು ಏಕೆ ಪ್ರಶ್ನಿಸಿಲ್ಲ ಎಂದು ಪೀಠ ಮೊದಲು ಕೇಳಿತು.

ಪ್ರತ್ಯೇಕ ಪ್ರಕರಣವೊಂದರಲ್ಲಿ ನಟನ ಕ್ಷಮಾಪಣೆಯನ್ನು ಕರ್ನಾಟಕ ಹೈಕೋರ್ಟ್ ಬಯಸಿದೆ ಎಂದು ವಕೀಲರು ಪೀಠದ ಗಮನಕ್ಕೆ ತಂದರು.

ಇದನ್ನು ಪುರಸ್ಕರಿಸಿದ ಪೀಠ, ಅರ್ಜಿಯ ವಿಚಾರಣೆ ಶುಕ್ರವಾರ ನಡೆಸುವುದಾಗಿ ಹೇಳಿತು.

ಅಕ್ರಮವಾಗಿ ಹಾಗೂ ಸಂವಿಧಾನ ಬಾಹಿರವಾಗಿ ಸಿನಿಮಾವನ್ನು ನಿಷೇಧಿಸಿರುವ ಹಾಗೂ ಆರಂಭದಿಂದಲೂ ಗೊಂದಲ ಮೂಡಿಸುವ ಮೂಲಕ ಸಂವಿಧಾನದ ವಿಧಿ 14, 19(1)(a), 19(1)(g) ಮತ್ತು 21 ಉಲ್ಲಂಘಿಸಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಸಂವಿಧಾನ ವಿಧಿ 32ರ ಅಡಿಯಲ್ಲಿ ಸಿಬಿಎಫ್‌ಸಿ ಪ್ರಮಾಣಪತ್ರ ಪಡೆದ ಚಿತ್ರವನ್ನು ಕಾನೂನು ಬಾಹಿರವಾಗಿ ಕರ್ನಾಟಕದಲ್ಲಿ ನಿಷೇಧಿಸಲಾಗಿದೆ ಎಂದೂ ಆರೋಪಿಸಿದ್ದಾರೆ. ಇದು ಕಾನೂನು ವಿರೋಧ ಮಾತ್ರವಲ್ಲ, ಭಯೋತ್ಪಾದನೆಗೆ ಸಮವಾದ ಅಪಪ್ರಚಾರ, ಸಿನಿಮಾ ಮಂದಿರಗಳಿಗೆ ಬೆದರಿಕೆಯೊಡ್ಡಲಾಗಿದೆ ಮತ್ತು ತಮಿಳು ವಿರೋಧಿ ದಂಗೆ ಎಬ್ಬಿಸುವ ಬೆದರಿಕೆಯೊಡ್ಡಲಾಗಿದೆ ಎಂದೂ ಹೇಳಲಾಗಿದೆ.

ಅಲ್ಪಸಂಖ್ಯಾತ ಹಿಂದಿ ಭಾಷಿಗರಿಗೂ ಬೆದರಿಕೆ: ಆರೋಪ

‘ಗೊಂದಲದ ಸಾಮಾಜಿಕ ಪರಿಸ್ಥಿತಿಯಲ್ಲಿ ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳು ಬೆಂಗಳೂರಿನಲ್ಲಿ ನೆಲೆಸಿರುವ ಹಿಂದಿ ಮಾತನಾಡುವ ಭಾಷಾ ಅಲ್ಪಸಂಖ್ಯಾತರನ್ನು ಗುರಿಯಾಗಿಸಿವೆ. ಭಯದ ವಾತಾವರಣ ಸೃಷ್ಟಿಸಿದ್ದಾರೆ. ಸಿನಿಮಾಗೆ ಸಹಜವಾಗಿ ಲಭಿಸಿರುವ ಸಾಂವಿಧಾನಿಕ ಹಕ್ಕಿಗೇ ಅಪಾಯ ತಂದೊಡ್ಡಿದ್ದಾರೆ’ ಎಂದು ಆರೋಪಿಸಲಾಗಿದೆ.

‘ಥಗ್‌ ಲೈಫ್‌ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದ ವಿಕ್ಟರಿ ಸಿನಿಮಾ ಪ್ರದರ್ಶನ ಮಂದಿರವನ್ನು ಸುಟ್ಟುಹಾಕುವುದಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಟಿ.ಎ. ನಾರಾಯಣ ಗೌಡ ಅವರು ಬೆದರಿಕೆ ಹಾಕಿದ್ದಾರೆ. ಈ ಬೆದರಿಕೆಯನ್ನು ಇನ್ನಷ್ಟು ವೈಭವೀಕರಿಸಲು 1991ರಲ್ಲಿ ನಡೆದಿದ್ದ ತಮಿಳು ವಿರೋಧ ದಂಗೆಯ ದೃಶ್ಯಗಳನ್ನು ಬಳಸಲಾಗಿದೆ. ಆದರೆ ರಾಜ್ಯದ ನಿಷ್ಕ್ರಿಯತೆಯಿಂದಾಗಿ ಇಂಥ ಶಕ್ತಿಗಳು ಕಾನೂನು ಮತ್ತು ಸುವ್ಯವಸ್ಥೆ ಹದಗೆಡಿಸುತ್ತಿವೆ. ಕರವೇ ಕಾರ್ಯಕರ್ತರು ವಿಕ್ಟರಿ ಸಿನಿಮಾಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ’ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

’ಈ ಒತ್ತಡಗಳಿಗೆ ಒಳಗಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಚಿತ್ರದ ಮೇಲೆ ನಿಷೇಧ ಹೇರಿತು. ಇದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. 

ರಾಜ್‌ಕಮಲ್‌ ಫಿಲ್ಮ್ಸ್‌ಇಂಟರ್‌ನ್ಯಾಷನಲ್‌ ಸಂಸ್ಥೆ ನಿರ್ಮಾಣ ಮಾಡಿರುವ ಥಗ್‌ ಲೈಫ್‌ ಚಿತ್ರವನ್ನು ಮಣಿ ರತ್ನಂ ನಿರ್ದೇಶಿಸಿದ್ದಾರೆ. ಕಮಲ್‌ ಹಾಸನ್‌ ನಟಿಸಿದ್ದಾರೆ. ಚಿತ್ರದ ಪ್ರಚಾರ ಸಂದರ್ಭದಲ್ಲಿ ‘ತಮಿಳಿನಿಂದ ಕನ್ನಡ ಹುಟ್ಟಿದೆ’ ಎಂಬ ಕಮಲ್ ಹಾಸನ್‌ ಹೇಳಿಕೆ ವಿವಾದಕ್ಕೀಡಾಗಿ, ಕರ್ನಾಟಕದಲ್ಲಿ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.