ADVERTISEMENT

ಎಲ್‌ಎಸಿ ಯಥಾಸ್ಥಿತಿ ಬದಲಾಯಿಸುವ ಏಕಪಕ್ಷೀಯ ಯತ್ನ ಸ್ವೀಕಾರಾರ್ಹವಲ್ಲ: ಜೈಶಂಕರ್

ಪಿಟಿಐ
Published 1 ನವೆಂಬರ್ 2020, 2:35 IST
Last Updated 1 ನವೆಂಬರ್ 2020, 2:35 IST
ಎಸ್‌.ಜೈಶಂಕರ್
ಎಸ್‌.ಜೈಶಂಕರ್   

ನವದೆಹಲಿ: ಭಾರತ ಮತ್ತು ಚೀನಾ ನಡುವಣ ಬಾಂಧವ್ಯ ತೀವ್ರ ಒತ್ತಡದಲ್ಲಿದೆ. ಸಂಬಂಧವನ್ನು ಸಾಮಾನ್ಯ ಸ್ಥಿತಿಗೆ ತರಬೇಕಿದ್ದರೆ ಕಳೆದ ಕೆಲವು ವರ್ಷಗಳಲ್ಲಿ ಮಾಡಿಕೊಂಡಿರುವ ಒಪ್ಪಂದಗಳನ್ನು ಉಭಯ ದೇಶಗಳೂ ಗೌರವಿಸಬೇಕಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ. ಪೂರ್ವ ಲಡಾಖ್ ಗಡಿ ವಿವಾದಕ್ಕೆ ಸಂಬಂಧಿಸಿ ಅವರು ಈ ಹೇಳಿಕೆ ನೀಡಿದ್ದಾರೆ.

ಆಲ್‌ ಇಂಡಿಯಾ ರೇಡಿಯೊದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಸಂಸ್ಮರಣಾ ಉಪನ್ಯಾಸ ನೀಡಿದ ಅವರು, ನೈಜ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಏಕಪಕ್ಷೀಯವಾಗಿ ಯಥಾಸ್ಥಿತಿ ಬದಲಾಯಿಸುವ ಯತ್ನವನ್ನು ಒಪ್ಪಲಾಗದು ಎಂದು ಹೇಳಿದ್ದಾರೆ.

ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧದ ಹೋರಾಟದ ವಿಚಾರಲ್ಲಿ ಭಾರತವು ರಾಜಿ ಮಾಡಿಕೊಳ್ಳುವುದಿಲ್ಲ ಎಂದೂ ಅವರು ಹೇಳಿದ್ದಾರೆ.

ADVERTISEMENT

ಚೀನಾ ವಿಚಾರದಲ್ಲಿ ಹೇಳುವುದಾದರೆ, ಹೊಸ ಸವಾಲುಗಳು ಮತ್ತು ಪರಿಸ್ಥಿತಿಗಳನ್ನು ಕಳೆದ ಮೂರು ದಶಕಗಳಿಂದ ಎರಡೂ ದೇಶಗಳು ಸಮರ್ಪಕವಾಗಿ ನಿಭಾಯಿಸಿದ್ದರಿಂದ ಬಾಂಧವ್ಯ ಸ್ಥಿರವಾಗಿದ್ದವು. ಗಡಿ ವಿಚಾರದಲ್ಲಿ ಶಾಂತಿಯು ಇತರ ಕ್ಷೇತ್ರಗಳಲ್ಲಿನ ಸಹಕಾರಕ್ಕೆ ಆಧಾರವಾಗಿದೆ. ಆದರೆ, ಸಾಂಕ್ರಾಮಿಕ ರೋಗವು ವ್ಯಾಪಕಗೊಂಡ ಸಂದರ್ಭದಲ್ಲೇ ಬಾಂಧವ್ಯವು ಒತ್ತಡಕ್ಕೆ ಸಿಲುಕಿದೆ. ಇದನ್ನು ಮರಳಿ ಸಾಮಾನ್ಯ ಸ್ಥಿತಿಗೆ ತರಬೇಕಿದ್ದರೆ ಉಭಯ ದೇಶಗಳ ನಡುವೆ ಸಂಪೂರ್ಣ ಗೌರವವಿರಬೇಕು. ಎಲ್‌ಎಸಿ ವಿಚಾರಕ್ಕೆ ಬಂದಾಗ, ಏಕಪಕ್ಷೀಯವಾಗಿ ಯಥಾಸ್ಥಿತಿ ಬದಲಾಯಿಸುವ ಯತ್ನವನ್ನು ಖಂಡಿತಾ ಒಪ್ಪಲಾಗದು ಎಂದು ಜೈಶಂಕರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.