ತಿರುಪತಿಯಲ್ಲಿ ವೈಕುಂಠ ಏಕಾದಶಿ ಸಂಭ್ರಮ
ಚಿತ್ರ: TTDevasthanams
ತಿರುಪತಿ: ವೈಕುಂಠ ಏಕಾದಶಿ ಹಿನ್ನೆಲೆ ತಿರುಪತಿಯಲ್ಲಿ ವೈಕುಂಠ ದ್ವಾರ ತೆರೆಯಲಾಗಿದ್ದು, ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿದ್ದಾರೆ.
ಇಂದಿನಿಂದ ಮೂರು ದಿನಗಳ ಕಾಲ ತಿರುಪತಿಯಲ್ಲಿ (ಡಿ.30, 31, ಹಾಗೂ ಜ1) ಆನ್‌ಲೈನ್ ಟಿಕೆಟ್ ಪಡೆದವರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಜ.8ರವರೆಗೆ ವೈಕುಂಠ ದ್ವಾರ ತೆರೆದಿರಲಿದೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಟಿಟಿಡಿ, ‘ಮೂರು ದಿನಗಳ ಕಾಲ ಮಾನ್ಯ ಆನ್‌ಲೈನ್ ಟಿಕೆಟ್‌ಗಳಿದ್ದರೆ ಮಾತ್ರ ದರ್ಶನಕ್ಕೆ ಅವಕಾಶವಿದೆ. ಆನ್‌ಲೈನ್ ಟಿಕೆಟ್‌ಗಳಿಲ್ಲದ ಭಕ್ತರಿಗೆ ಈ ದಿನಗಳಲ್ಲಿ ದರ್ಶನಕ್ಕೆ ಅವಕಾಶವಿರುವುದಿಲ್ಲ’ ಎಂದು ತಿಳಿಸಿದೆ.
ಸಿಎಂ ರೇವಂತ ರೆಡ್ಡಿ ಭೇಟಿ
ವೈಕುಂಠ ಏಕಾದಶಿ ಹಿನ್ನೆಲೆ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ಮಂಗಳವಾರ ಮುಂಜಾನೆ ದೇಗುಲಕ್ಕೆ ಭೇಟಿ ನೀಡಿ ವೆಂಕಟೇಶ್ವರನ ದರ್ಶನ ಪಡೆದರು.
ದರ್ಶನದ ನಂತರ, ಪುರೋಹಿತರು ರಂಗನಾಯಕಕುಲ ಮಂಟಪದಲ್ಲಿ ಅವರಿಗೆ ರೇಷ್ಮೆ ವಸ್ತ್ರಗಳನ್ನು ನೀಡಿ ಸನ್ಮಾನಿಸಿ, ಪ್ರಸಾದ (ಪವಿತ್ರ ಆಹಾರ) ನೀಡಿದರು.
ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು, ಆಂಧ್ರಪ್ರದೇಶದ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವೆ ಎಸ್. ಸವಿತಾ, ಗಣಿ ಸಚಿವ ಕೆ. ರವೀಂದ್ರ ಮತ್ತು ನಟ ಚಿರಂಜೀವಿ ಸೇರಿದಂತೆ ಹಲವರು ದರ್ಶನ ಪಡೆದಿದ್ದಾರೆ.
ವೈಕುಂಠ ದ್ವಾರ (ಬಾಗಿಲು) ಇಂದು ತೆರೆಯಲಾಗಿದ್ದು, 10 ದಿನಗಳ ನಂತರ (ಜನವರಿ 8) ಮುಚ್ಚಲಾಗುವುದು. ಈ ಶುಭ ಅವಧಿಯಲ್ಲಿ ಹೊರತುಪಡಿಸಿ, ವರ್ಷಪೂರ್ತಿ ವೈಕುಂಠ ದ್ವಾರವನ್ನು ತೆರೆಯಲಾಗುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.