ADVERTISEMENT

ಇಂಧನದ ಮೇಲೆ ತೆರಿಗೆ ಕಡಿತಕ್ಕೆ ಆಗ್ರಹಿಸಿ ಪ್ರತಿಭಟನೆ: ಅಣ್ಣಾಮಲೈ ವಿರುದ್ಧ ಪ್ರಕರಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜೂನ್ 2022, 7:21 IST
Last Updated 1 ಜೂನ್ 2022, 7:21 IST
ಕೆ.ಅಣ್ಣಾಮಲೈ
ಕೆ.ಅಣ್ಣಾಮಲೈ   

ಚೆನ್ನೈ: ಅನುಮತಿಯಿಲ್ಲದೆ ಪ್ರತಿಭಟನೆ ನಡೆಸಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಸೇರಿದಂತೆ 5,000ಕ್ಕೂ ಹೆಚ್ಚು ಜನರ ವಿರುದ್ಧ ತಮಿಳುನಾಡು ಪೊಲೀಸರು ಬುಧವಾರ ಪ್ರಕರಣ ದಾಖಲಿಸಿದ್ದಾರೆ.

ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಮತ್ತು ವ್ಯಾಟ್‌ ಕಡಿಮೆಗೊಳಿಸುವಂತೆ ಆಗ್ರಹಿಸಿ ಅಣ್ಣಾಮಲೈ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ತಮಿಳುನಾಡಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು.

ಕೇಂದ್ರ ಸರ್ಕಾರ ಮೇ 21ರಂದು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ ₹8 ಮತ್ತು ಡೀಸೆಲ್ ಮೇಲೆ ₹6ರಂತೆ ಕಡಿತಗೊಳಿಸಿತ್ತು. ಇದರ ಬೆನ್ನಲ್ಲೇ ಕೇರಳ ಮತ್ತು ರಾಜಸ್ಥಾನ ಸರ್ಕಾರಗಳೂ ರಾಜ್ಯ ತೆರಿಗೆ ಮತ್ತು ವ್ಯಾಟ್‌ ತಗ್ಗಿಸಿದ್ದವು.

ಇಗೀಗ ತಮಿಳುನಾಡಿನಲ್ಲೂ ಇಂಧನದ ಮೇಲಿನ ತೆರಿಗೆ ಕಡಿಮೆ ಮಾಡಬೇಕೆಂದು ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರವನ್ನು ಬಿಜೆಪಿ ಆಗ್ರಹಿಸಿದೆ.

‘ರಾಜ್ಯ ಸರ್ಕಾರ (ಡಿಎಂಕೆ) ತನ್ನ ಪ್ರಣಾಳಿಕೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ ₹5, ₹4ರಂತೆ ಇಳಿಕೆ ಮಾಡುವ ಭರವಸೆ ನೀಡಿತ್ತು. ಕೇಂದ್ರ ಸರ್ಕಾರ ಈಗಾಗಲೇ ಇಂಧನ ಬೆಲೆ ಇಳಿಕೆ ಮಾಡಿದ್ದು, ರಾಜ್ಯ ಸರ್ಕಾರ ಕೊಟ್ಟ ಭರವಸೆಯನ್ನು ಕೂಡಲೇ ಈಡೇರಿಸಬೇಕು’ ಎಂದು ಅಣ್ಣಾಮಲೈ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.