ADVERTISEMENT

TN ರಾಜಕೀಯ ಎಂಬುದು ಪ್ರಾದೇಶಿಕತೆಯಲ್ಲ, ತಮಿಳಿನ ಶ್ರೇಷ್ಠತೆ: ರಾಜ್ಯಪಾಲ ರವಿ

ಪಿಟಿಐ
Published 25 ನವೆಂಬರ್ 2025, 6:35 IST
Last Updated 25 ನವೆಂಬರ್ 2025, 6:35 IST
<div class="paragraphs"><p>ರಾಜ್ಯಪಾಲ ಆರ್.ಎನ್. ರವಿ</p></div>

ರಾಜ್ಯಪಾಲ ಆರ್.ಎನ್. ರವಿ

   

ಚೆನ್ನೈ: ‘ತಮಿಳುನಾಡಿನ ರಾಜಕೀಯ ಪ್ರಾದೇಶಿಕತೆಯಲ್ಲ. ಬದಲಿಗೆ ತಮಿಳಿನ ಶ್ರೇಷ್ಠತೆಯೇ ಇಲ್ಲಿ ಮುಖ್ಯ. ಅದು ತಮಿಳನ್ನು ಇತರ ಎಲ್ಲಾ ಭಾಷೆಗಳಿಗಿಂತ ಭಿನ್ನ ಎಂದು ಹೇಳುತ್ತದೆ’ ಎಂದು ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿ ಹೇಳಿದ್ದಾರೆ.

ಹಾಲಿ ಡಿಎಂಕೆ ನೇತೃತ್ವದ ಸರ್ಕಾರದ ಮುಖ್ಯಮಂತ್ರಿಯಾಗಿರುವ ಎಂ.ಕೆ.ಸ್ಟಾಲಿನ್ ಜತೆ ರವಿ ಅವರು ಭಿನ್ನಾಭಿಪ್ರಾಯಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ಅವರು ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

ADVERTISEMENT

‘ತಮಿಳು ಶ್ರೇಷ್ಠತೆ ಎಂಬುದು ಕೇವಲ ಹಿಂದಿಯ ವಿರುದ್ಧ ಮಾತ್ರವಲ್ಲ. ದ್ರಾವಿಡ ಕುಟುಂಬಕ್ಕೆ ಸೇರಿದ ಇತರ ಭಾಷೆಗಳಾದ ಕನ್ನಡ, ತೆಲುಗು ಮತ್ತು ಮಲಯಾಳದ ವಿರುದ್ಧವೂ ಬಿಂಬಿತವಾಗಿದೆ. ತಮಿಳುನಾಡಿನ ರಾಜಕಾರಣಿಗಳು ತಮಿಳನ್ನು ಪ್ರೀತಿಸುವುದಿಲ್ಲ. ಏಕೆಂದರೆ ತಮಿಳು ಭಾಷೆ ಅಥವಾ ತಮಿಳು ಸಂಸ್ಕೃತಿಗೆ ಇವರ ಕೊಡುಗೆ ಏನೂ ಇಲ್ಲ’ ಎಂದು ಆರೋಪಿಸಿದ್ದಾರೆ.

‘ವಾಸ್ತವ ಏನೆಂದರೆ, ಪ್ರತಿ ವರ್ಷ ವಿದ್ಯಾರ್ಥಿಗಳು ತಮಿಳು ಮಾಧ್ಯಮ ಶಾಲೆಯಿಂದ ಇಂಗ್ಲಿಷ್ ಮಾಧ್ಯಮ ಶಾಲೆಗೆ ವರ್ಗಾವಣೆ ಹೊಂದುತ್ತಿದ್ದಾರೆ. ತಮಿಳು ಮಾಧ್ಯಮದಲ್ಲಿ ಕಲಿಯುತ್ತಿರು ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ  ಗಣನೀಯವಾಗಿ ಇಳಿಮುಖವಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

‘ತಮಿಳು ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ತಮಿಳುನಾಡು ಸರ್ಕಾರವು ಬಜೆಟ್‌ನಲ್ಲಿ ಶೂನ್ಯ ಅನುದಾನ ಮೀಸಲಿಟ್ಟಿದೆ. ರಾಜ್ಯದ ಆರ್ಕೈವ್‌ನಲ್ಲಿರುವ ಸುಮಾರು 11 ಲಕ್ಷ ತಾಳೆ ಗರಿ ಹಸ್ತಪ್ರತಿಗಳು ಕೊಳೆಯುತ್ತಿವೆ. ಅದರ ಸಂರಕ್ಷಣೆಗೆ ಯಾವುದೇ ಅನುದಾನವನ್ನು ಸರ್ಕಾರ ಮೀಸಲಿಟ್ಟಿಲ್ಲ’ ಎಂದು ಆರೋಪಿಸಿದ್ದಾರೆ.

2024ರ ಅಕ್ಟೋಬರ್‌ನಲ್ಲಿ ದೂರದರ್ಶನ ಕಾರ್ಯಕ್ರಮವೊಂದರಲ್ಲಿ ರಾಜ್ಯ ಗೀತೆ 'ತಮಿಳು ತಾಯ್ ವಾಳ್ತು' ಸುತ್ತ ಉಂಟಾದ ವಿವಾದವನ್ನು ಉಲ್ಲೇಖಿಸಿದ ರಾಜ್ಯಪಾಲ ರವಿ, ಅಲ್ಲಿ ‘ದ್ರಾವಿಡ’ ಎಂಬ ಪದವಿಲ್ಲದೆ ತಮಿಳು ಗೀತೆಯನ್ನು ಹಾಡಲಾಗಿದೆ ಎಂದು ಹೇಳಲಾಗಿತ್ತು. ಆದರೆ ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರ ಇದಕ್ಕೆ ಯಾವುದೇ ಪ್ರತಿಭಟನೆ ದಾಖಲಿಸಲಿಲ್ಲ’ ಎಂದಿದ್ದಾರೆ.

‘ನಾನು ಆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದೆ. ಆಯೋಜಕರು ತಪ್ಪು ಮಾಡಿದರು. ಆದರೆ ಕ್ಷಮೆಯನ್ನು ಮಾತ್ರ ಕೋರಿದರು. ವಾಸ್ತವದಲ್ಲಿ, ತಮಿಳು ಭಾಷೆ ಬಲ್ಲ ಹಲವರಿಗಿಂತ ನಾನು ‘ತಮಿಳ್‌ ತಾಯ್‌ ವಾಳ್ತು’ ಗೀತೆಯನ್ನು ಅತ್ಯುತ್ತಮವಾಗಿ ಹಾಡಬಲ್ಲೆ’ ಎಂದು ರವಿ ಹೇಳಿದ್ದಾರೆ.

ಜನವರಿಯಲ್ಲಿ ನಡೆದ ವಿಧಾನಸಭೆಯ ಮೊದಲ ಅಧಿವೇಶನದಲ್ಲಿ ಭಾಷಣ ಮಾಡಲು ನಿರಾಕರಿಸಿದ ರಾಜ್ಯಪಾಲ ರವಿ, ಹೊರನಡೆದಿದ್ದರು. ‘ಅದೊಂದು ಅತ್ಯಂತ ನೋವಿನ ನಿರ್ಧಾರವಾಗಿತ್ತು’ ಎಂದಿರು ರವಿ, ಸರ್ಕಾರ ಮತ್ತು ತಮ್ಮ ನಡುವಿನ ಮತ್ತೊಂದು ಉದ್ವಿಗ್ನ ಸ್ಥಿತಿಯನ್ನು ಹಂಚಿಕೊಂಡಿದ್ದಾರೆ.

‘ನಾನು ಅಧಿವೇಶನಕ್ಕೆ ಹೋಗುವುದು ನನ್ನ ಹೇಳಿಕೆಯನ್ನು ಓದುವುದಕ್ಕಾಗಿಯೇ ಹೊರತು, ಸಭಾತ್ಯಾಗಕ್ಕಲ್ಲ. ಆದರೆ, ಸಂವಿಧಾನ ಮತ್ತು ರಾಷ್ಟ್ರಗೀತೆಯನ್ನು ಗೌರವಿಸಬೇಕು ಎಂದು ಹೇಳುವ ಸಂವಿಧಾನದ 51ಎ ವಿಧಿಯನ್ನು ರಕ್ಷಿಸುವ ಬಾಧ್ಯತೆಯೂ ನನಗಿದೆ’ ಎಂದಿದ್ದಾರೆ.

ಸಭೆಯ ಆರಂಭದಲ್ಲಿ ರಾಷ್ಟ್ರಗೀತೆಯನ್ನು ನುಡಿಸಲಿಲ್ಲ ಎಂದು ಆಗ ರವಿ ಪ್ರತಿಭಟಿಸಿದ್ದರು.

ಯಾವುದೇ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಭಾಗವಹಿಸಿದರೆ ಅಲ್ಲಿ ಆರಂಭದಲ್ಲಿ ಮತ್ತು ಕೊನೆಯಲ್ಲಿ ರಾಷ್ಟ್ರಗೀತೆಯನ್ನೇ ನುಡಿಸಬೇಕು ಎಂಬ ಅಂಶವನ್ನು ರವಿ ಒತ್ತಿ ಹೇಳಿದರು.

ತಮಿಳುನಾಡಿಗಿಂತಲೂ ಮೊದಲು ರವಿ ಅವರು ನಾಗಾಲ್ಯಾಂಡ್ ಮತ್ತು ಮೇಘಾಲಯದ ರಾಜ್ಯಪಾಲರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.