ನೆಲಮಂಗಲ ಬಳಿ ಇರುವ ಟೋಲ್ ಸಂಗ್ರಹ ಕೇಂದ್ರ
– ಪ್ರಜಾವಾಣಿ ಚಿತ್ರ
ನವದೆಹಲಿ: 2025-26ರ ಮೊದಲ ತ್ರೈಮಾಸಿಕದಲ್ಲಿ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹದಡಿ (ಇಟಿಸಿ) ಫಾಸ್ಟ್‌ಟ್ಯಾಗ್ ಮೂಲಕ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವು ಶೇ 19.6ರಷ್ಟು ಹೆಚ್ಚಳವಾಗಿದ್ದು, ₹20.68 ಲಕ್ಷ ಕೋಟಿ ಸಂಗ್ರಹಿಸಲಾಗಿದೆ ಎಂದು ಕೇಂದ್ರ ಸರ್ಕಾರ ಮೂಲಗಳು ತಿಳಿಸಿವೆ.
ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ (ಇಟಿಸಿ) ವ್ಯವಸ್ಥೆ ದತ್ತಾಂಶದ ಪ್ರಕಾರ, ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಟೋಲ್ ಬಳಕೆದಾರರ ಸಂಖ್ಯೆಯೂ ಶೇ 16.2ರಷ್ಟು ಹೆಚ್ಚಾಗಿ 1,173 ಮಿಲಿಯನ್‌ಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದು 1,009.87 ಮಿಲಿಯನ್ ಆಗಿತ್ತು.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಹೆಚ್‌ಎಐ) 2025ರ ಏಪ್ರಿಲ್ 1ರಿಂದ ದೇಶದಾದ್ಯಂತ ಜಾರಿಗೆ ಬರುವಂತೆ ಟೋಲ್ ಶುಲ್ಕವನ್ನು ಶೇ 5ರಷ್ಟು ಹೆಚ್ಚಿಸಿತ್ತು.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಲಲಿತ ಪ್ರಯಾಣಕ್ಕೆ ಅನುವು ಮಾಡಿಕೊಡಲು ಕೇಂದ್ರ ಸರ್ಕಾರವು ಆಗಸ್ಟ್ 15ರಿಂದ ಫಾಸ್ಟ್‌ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಜಾರಿಗೊಳಿಸಲಿದೆ ಎಂದು ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಈಚೆಗೆ ಹೇಳಿದ್ದರು.
ಫಾಸ್ಟ್‌ಟ್ಯಾಗ್ ಕಾರ್ಡ್‌ಗಳನ್ನು ಪದೇ ಪದೇ ರೀಚಾರ್ಜ್ ಮಾಡುವ ಅಥವಾ ಹೆದ್ದಾರಿ ಶುಲ್ಕ ವಸೂಲಿ ಕೇಂದ್ರಗಳಲ್ಲಿ ನಗದು ಬಳಸಿ ಶುಲ್ಕ ಪಾವತಿಸುವ ಅಗತ್ಯವಿಲ್ಲದೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಗಮ ಪ್ರಯಾಣಕ್ಕೆ ಈ ವ್ಯವಸ್ಥೆ ಅನುವು ಮಾಡಿಕೊಡುತ್ತದೆ ಎಂದು ಗಡ್ಕರಿ ಅವರು ತಿಳಿಸಿದ್ದರು.
ಈಗಾಗಲೇ ಫಾಸ್ಟ್‌ಟ್ಯಾಗ್ ಹೊಂದಿರುವವರು ಹೊಸ ಫಾಸ್ಟ್‌ಟ್ಯಾಗ್ ಖರೀದಿಸುವ ಅಗತ್ಯವಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.