ADVERTISEMENT

MGNREGS ಪಾವತಿಗೆ ಆಧಾರ್ ಜೋಡಣೆ; ಅನುಷ್ಠಾನಕ್ಕೆ ಸಕಾಲವಲ್ಲ: ಸಂಸದೀಯ ಸಮಿತಿ ವರದಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2024, 13:47 IST
Last Updated 17 ಡಿಸೆಂಬರ್ 2024, 13:47 IST
<div class="paragraphs"><p>ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ (ಸಾಂದರ್ಭಿಕ ಚಿತ್ರ)</p></div>

ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ (ಸಾಂದರ್ಭಿಕ ಚಿತ್ರ)

   

ನವದೆಹಲಿ: ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (MGNREGS) ಪಾವತಿಗೆ ಆಧಾರ್‌ ಜೋಡಿಸುವುದನ್ನು ಕಡ್ಡಾಯಗೊಳಿಸಬಾರದು ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಸಂಸದೀಯ ಸಮಿತಿಯು ಶಿಫಾರಸು ಮಾಡಿದೆ.

ಈ ಕುರಿತ ವರದಿಯು ಲೋಕಸಭೆಯಲ್ಲಿ ಮಂಗಳವಾರ ಸಲ್ಲಿಕೆಯಾಗಿದೆ. ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಸಮಸ್ಯೆ ಎದುರಾದಲ್ಲಿ ಕೂಲಿಯ ಹಣ ಪಾವತಿಯಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ಪರ್ಯಾಯ ವ್ಯವಸ್ಥೆ ಸಜ್ಜುಗೊಳಿಸುವುದೇ ಈ ಯೋಜನೆಯ ಪ್ರಾಥಮಿಕ ಗುರಿ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್‌ ಇಲಾಖೆಗೆ ಸ್ಥಾಯಿ ಸಮಿತಿ ಹೇಳಿದೆ.

ADVERTISEMENT

ಹಣದುಬ್ಬರ ಸೂಚ್ಯಂಕವನ್ನು ಗಮದಲ್ಲಿಟ್ಟುಕೊಂಡು ಕಾರ್ಮಿಕರಿಗೆ ವೇತನ ನೀಡುವ ಅಗತ್ಯವಿದೆ. ನರೇಗಾ ಮೂಲಕ ಸದ್ಯ ನೀಡಲಾಗುತ್ತಿರುವ ವೇತನವು ಸಾಕಾಗುತ್ತಿಲ್ಲ ಎಂದು ಸರ್ಕಾರಕ್ಕೆ ಹೇಳಲಾಗಿದೆ. 2024ರ ಜ. 1ರಿಂದ ಆಧಾರ್ ಸಂಖ್ಯೆ ಆಧಾರಿತ ಪಾವತಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ. ಇದರ ಪ್ರಯೋಜನವನ್ನು ಗಮದಲ್ಲಿಟ್ಟುಕೊಂಡರೂ, ಬಹಳಷ್ಟು ಕಾರ್ಮಿಕರ ಆಧಾರ್‌ ಈವರೆಗೂ ಬ್ಯಾಂಕ್‌ಗಳಿಗೆ ಜೋಡಿಸದ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿವೆ. ಹೀಗಾಗಿ ಈ ವ್ಯವಸ್ಥೆ ಜಾರಿಗೆ ಇನ್ನಷ್ಟು ಕಾಲಾವಕಾಶ ಬೇಕಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

‘2008ರಿಂದ ಉದ್ಯೋಗ ಖಾತ್ರಿಯಡಿ ನೀಡಲಾಗುತ್ತಿರುವ ಕೂಲಿ ಹಣವು ಇಂದಿನ ಜೀವನ ವೆಚ್ಚಕ್ಕೆ ಹೋಲಿಸಿದಲ್ಲಿ ತೀರಾ ಕಡಿಮೆಯಾಗಿದ್ದು, ಇದನ್ನು ಹೆಚ್ಚಿಸುವ ಅಗತ್ಯವಿದೆ. ಗ್ರಾಮೀಣ ಭಾಗದ ಅತಿ ಬಡ ಕುಟುಂಬದವರು ತಮ್ಮ ಜೀವನಾಧಾರಕ್ಕೆ ಈಗಲೂ ಉದ್ಯೋಗ ಖಾತ್ರಿ ಯೋಜನೆಯನ್ನೇ ನೆಚ್ಚಿಕೊಂಡಿದ್ದಾರೆ. ಕೆಲವೊಮ್ಮೆ ಕೂಲಿ ಹಣ ತಡವಾಗಿ ಪಾವತಿಯಾದಲ್ಲಿ ಅವರ ಉತ್ಸಾಹವನ್ನು ತಗ್ಗಿಸುವ ಅಥವಾ ಹೆಚ್ಚಿನ ವೇತನ ಸಿಗುವ ಉದ್ಯೋಗ ಅರಸಿ ಗುಳೇ ಹೋಗುವ ಅನಿವಾರ್ಯತೆ ಸೃಷ್ಟಿಯಾಗಲಿದೆ’ ಎಂದೂ ಸಮಿತಿ ಹೇಳಿದೆ.

ರಾಷ್ಟ್ರೀಯ ಮೊಬೈಲ್ ನಿರ್ವಹಣಾ ವ್ಯವಸ್ಥೆ (NMMS) ಆ್ಯಪ್ ಮೂಲಕ ಅಂತರ್ಜಾಲ ಆಧಾರಿತ ವೇದಿಕೆಯಲ್ಲಿ ಸ್ಮಾರ್ಟ್‌ಫೋನ್‌ ಅಲಭ್ಯತೆ, ವಿದ್ಯುತ್ ಕಣ್ಣಾಮುಚ್ಚಾಲೆ ಹಾಗೂ ಬಹಳಷ್ಟು ಕಡೆ ಅಂತರ್ಜಾಲ ಸೌಲಭ್ಯದ ಕೊರತೆಯಿಂದಾಗಿ ನರೇಗಾ ಕಾರ್ಮಿಕರ ಕೂಲಿ ಲೆಕ್ಕವು ಸಮರ್ಪಕವಾಗಿ ದಾಖಲಾಗುತ್ತಿಲ್ಲ. ಇದರ ಜತೆಯಲ್ಲೇ ಉದ್ಯೋಗದ ದಿನಗಳನ್ನು 100ರಿಂದ 150ಕ್ಕೆ ಹೆಚ್ಚಿಸಬೇಕು ಎಂಬ ಬೇಡಿಕೆಯೂ ವ್ಯಕ್ತವಾಗಿದೆ ಎಂದು ಸಮಿತಿ ತನ್ನ ವರದಿಯಲ್ಲಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.