
ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ಗ್ರಾಮೀಣಾಭಿವೃದ್ಧಿಇಲಾಖೆಯು ‘ವಿಬಿ ಜಿ ರಾಮ್ ಜಿ’ ವಿರುದ್ಧ ನೀಡಿದ್ದ ಜಾಹೀರಾತು ವಿಧಾನಸಭೆಯಲ್ಲಿ ಗುರುವಾರ ವಿರೋಧ ಪಕ್ಷ-ಆಡಳಿತ ಪಕ್ಷದ ಸದಸ್ಯರ ನಡುವೆ ವಾಕ್ಸಮರಕ್ಕೆ ವಸ್ತುವಾಯಿತು. ಗದ್ದಲ ತಹಬದಿಗೆ ಬಾರದೇ ಇದ್ದುದರಿಂದ ಕೆಲ ಹೊತ್ತು ಮುಂದೂಡಲಾಯಿತು. ಮತ್ತೆ ಕಲಾಪ ಆರಂಭವಾದಾಗಲೂ ವಾಗ್ವಾದ ಮುಂದುವರಿಯಿತು. ಸರ್ಕಾರದ ನಡೆ ವಿರೋಧಿಸಿ ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು.
ಏಪ್ರಿಲ್‌ನಿಂದ ಆರಂಭವಾಗಲಿರುವ ಹೊಸ ಆರ್ಥಿಕ ವರ್ಷದಲ್ಲಿ ಭಾರತದ ಅರ್ಥ ವ್ಯವಸ್ಥೆಯ ಬೆಳವಣಿಗೆ ದರವು ಶೇ 6.8ರಿಂದ ಶೇ 7.2ರ ಮಟ್ಟದಲ್ಲಿ ಇರಲಿದೆ ಎಂದು ಆರ್ಥಿಕ ಸಮೀಕ್ಷೆ ವರದಿ ಅಂದಾಜು ಮಾಡಿದೆ.
ವಾಷಿಂಗ್ಟನ್: ಅಮೆರಿಕದಲ್ಲಿ ಮಾರಾಟವಾಗುವ ಕೆನಡಾದ ವಿಮಾನಗಳ ಮೇಲೆ ಶೇಕಡ 50ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಈ ಮೂಲಕ ‘ಸುಂಕ’ ಸಮರ ಮುಂದುವರಿಸಿದ್ದಾರೆ.
ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದಕ್ಕೆ ಮಿತಿ ಹೇರುವ, ಬಳಕೆದಾರನ ವಯಸ್ಸು ಆಧರಿಸಿ ಆನ್‌ಲೈನ್ ವೇದಿಕೆಗಳ ಬಳಕೆಗೆ ಅವಕಾಶ ಕಲ್ಪಿಸುವ ಮತ್ತು ಡಿಜಿಟಲ್ ವ್ಯಸನವನ್ನು ತಡೆಯಲು ಆನ್‌ಲೈನ್ ತರಗತಿಗಳನ್ನು ಕಡಿತಗೊಳಿಸುವ ಅಗತ್ಯದ ಬಗ್ಗೆ ಆರ್ಥಿಕ ಸಮೀಕ್ಷೆ ಪ್ರತಿಪಾದಿಸಿದೆ.
ಬುಧವಾರ ವಿಮಾನ ಪತನದ ದುರಂತದಲ್ಲಿ ಮೃತಪಟ್ಟ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ (66) ಅವರ ಅಂತ್ಯಕ್ರಿಯೆ ಗುರುವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ತವರು ನೆಲ ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ನಡೆಯಿತು. ಅಪಾರ ಸಂಖ್ಯೆಯ ಜನರು ಅಂತಿಮ ದರ್ಶನ ಪಡೆದು, ‘ಅಜಿತ್ ದಾದಾ’ಗೆ ಕಂಬನಿಯ ವಿದಾಯ ಕೋರಿದರು.
ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆಗಳು ಮುಂದುವರಿದಿರುವ ಕಾರಣದಿಂದಾಗಿ ಚಿನ್ನ ಹಾಗೂ ಬೆಳ್ಳಿಯ ಬೆಲೆಯು ಹೆಚ್ಚಿನ ಮಟ್ಟದಲ್ಲಿಯೇ ಇರುವ ನಿರೀಕ್ಷೆ ಇದೆ ಎಂದು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಗುರುವಾರ ಮಂಡಿಸಿರುವ ‘ಆರ್ಥಿಕ ಸಮೀಕ್ಷೆ 2025–26’ ವರದಿ ಹೇಳಿದೆ.
ಗಾಜಾದಲ್ಲಿನ ದೀರ್ಘಕಾಲದ ಸಂಘರ್ಷವನ್ನು ಕೊನೆಗೊಳಿಸಲು ಅಮೆರಿಕ ಕೈಗೊಂಡಿರುವ ಕಾರ್ಯಕ್ಕೆ ಭಾರತ ಮೆಚ್ಚುಗೆ ವ್ಯಕ್ತಪಡಿಸಿದೆ. ಗಾಜಾ ಸಂಘರ್ಷ ಪರಿಹರಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕೈಗೊಂಡಿದ್ದ ನಿರ್ಣಯ ಅನುಷ್ಠಾನದ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಭಾರತ ಹೇಳಿದೆ.
ಮುಕ್ತ ವ್ಯಾಪಾರದ ಬೆಂಬಲಿಗರಾಗಿ ಉಭಯ ದೇಶಗಳು ಜಂಟಿಯಾಗಿ ಬಹುಪಕ್ಷೀಯತೆಯನ್ನು ಪ್ರತಿಪಾದಿಸಬೇಕು ಮತ್ತು ಅನುಸರಿಸಬೇಕು ಎಂದು ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಅವರಿಗೆ ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಫೆಬ್ರುವರಿಯಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯನ್ನು ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ಖಂಡಿಸಿದ್ದಾರೆ. ತಮ್ಮ ಪಕ್ಷ ಅವಾಮಿ ಲೀಗ್ ಪಕ್ಷವನ್ನು ನಿಷೇಧಿಸಿರುವುದನ್ನೂ ವಿರೋಧಿಸಿರುವ ಅವರು, ‘ನ್ಯಾಯಸಮ್ಮತ ಮತ್ತು ಪಾರದರ್ಶಕವಾದ ಚುನಾವಣೆ ನಡೆಯದಿದ್ದರೆ, ಬಾಂಗ್ಲಾದೇಶವು ದೀರ್ಘಕಾಲದ ಅಸ್ಥಿರತೆಯನ್ನು ಎದುರಿಸಬೇಕಾಗುತ್ತದೆ’ ಎಂದು ಇ–ಮೇಲ್‌ನಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.
ದೀನ್ ಡಿ ಕ್ಲರ್ಕ್ ಅವರ ಪರಿಣಾಮಕಾರಿ ಬೌಲಿಂಗ್ ದಾಳಿ ಬಳಿಕ ಗ್ರೇಸ್ ಹ್ಯಾರಿಸ್ ಮತ್ತು ಸ್ಮೃತಿ ಮಂದಾನ ಮಿಂಚಿನ ಅರ್ಧಶತಕಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಫೈನಲ್‌ಗೆ ಲಗ್ಗೆ ಹಾಕಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.