
ಈ ದಿನದ ಪ್ರಮುಖ 10 ಸುದ್ದಿಗಳು
ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ವಿಷಯಗಳಿಗೆ ಸಂಬಂಧಪಟ್ಟಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ....
ತಿಪಟೂರು: ಶಿವರಾತ್ರಿ ಹಬ್ಬದ ನಂತರ ಶುಭವಾಗಲಿದೆ. ಎಲ್ಲರಿಗೂ ಒಳ್ಳೆಯದಾಗಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ತಾಲ್ಲೂಕಿನ ಕಾಡಸಿದ್ದೇಶ್ವರ ಮಠಕ್ಕೆ ಶುಕ್ರವಾರ ಭೇಟಿ ನೀಡಿದ ಸಮಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಅಧಿಕಾರ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ಜತೆಗೆ ಏನೆಲ್ಲ ಮಾತುಕತೆ ನಡೆಯಿತು ಎಂಬ ಪ್ರಶ್ನೆಗೆ ಚುಟುಕಾಗಿ ಪ್ರತಿಕ್ರಿಯಿಸಿದರು.
ನವದೆಹಲಿ: ಪ್ರಧಾನ ಮಂತ್ರಿ ಕಾರ್ಯಾಲಯ (ಪಿಎಂಒ), ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಮತ್ತು ಸಂಪುಟ ಸಚಿವಾಲಯಗಳನ್ನು ಒಳಗೊಂಡಿರುವ 'ಸೇವಾ ತೀರ್ಥ' ಸಂಕೀರ್ಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶುಕ್ರವಾರ) ಉದ್ಘಾಟಿಸಿದರು.
ಹಾವೇರಿ: ಜಿಲ್ಲೆಯ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ಶಿವಣ್ಣನವರ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಅವರನ್ನು ಹುಬ್ಬಳ್ಳಿಯ ವಿಹಾನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಗರದಲ್ಲಿ ಫೆ. 14ರಂದು ರಾಜ್ಯ ಸರ್ಕಾರದ ಸಾಧನಾ ಸಮಾವೇಶ ನಡೆಯುತ್ತಿದ್ದು, ಇದರ ತಯಾರಿ ಕೆಲಸಗಳ ಬಗ್ಗೆ ಬಸವರಾಜ ಶಿವಣ್ಣನವರ ನಿತ್ಯವೂ ಪರಿಶೀಲಿಸುತ್ತಿದ್ದರು. ಸಮಾವೇಶದ ಸ್ಥಳಕ್ಕೂ ಪದೇ ಪದೇ ಭೇಟಿ ನೀಡುತ್ತಿದ್ದರು. ಗುರುವಾರ ರಾತ್ರಿಯೂ ಭೇಟಿ ನೀಡಿ ಮನೆಗೆ ವಾಪಸು ಹೋಗಿದ್ದರು.
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಚಲನಚಿತ್ರ ನಿರ್ದೇಶಕ ಜೋಸೈಮನ್ ಹೃದಯಾಘಾತದಿಂದ ಶುಕ್ರವಾರ ನಿಧನರಾದರು. ಶುಕ್ರವಾರ ಮಧ್ಯಾಹ್ನ ಕರ್ನಾಟಕ ಫಿಲಂ ಚೇಂಬರ್‌ನಲ್ಲಿ ಸಭೆ ನಡೆಸುವಾಗ ಜೋಸೈಮನ್ ಅವರಿಗೆ ಹೃದಯಾಘಾತವಾಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಸಂಜೆ 4.30ರ ಸುಮಾರಿಗೆ ನಿಧನರಾದರು.
ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವು ಅಲಿಯಾಸ್ ಶಿವಕುಮಾರ್ ಅವರ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಕೆ.ಆರ್.ಪುರ ಕ್ಷೇತ್ರದ ಶಾಸಕ, ಪ್ರಕರಣದ ಐದನೇ ಆರೋಪಿ ಬೈರತಿ ಬಸವರಾಜ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಕಂಡುಬಂದಿದ್ದು, ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಂತೆ 42ನೇ ಎಸಿಜೆಎಂ ನ್ಯಾಯಾಲಯ ಶುಕ್ರವಾರ ಸಿಐಡಿ ಪೊಲೀಸರಿಗೆ ಸೂಚಿಸಿತು.
ಕೊಲಂಬೊ: ಸಾಂಘಿಕ ಆಟದ ಪ್ರದರ್ಶನ ನೀಡಿದ ಜಿಂಬಾಬ್ವೆ ತಂಡ ಟಿ20 ವಿಶ್ವಕಪ್ ಟೂರ್ನಿ ಪಂದ್ಯದಲ್ಲಿ ಶುಕ್ರವಾರ ಆಸ್ಟ್ರೇಲಿಯಾ ತಂಡಕ್ಕೆ 23 ರನ್‌ಗಳಿಂದ ಆಘಾತ ನೀಡಿತು. ಇದು ಈ ವಿಶ್ವಕಪ್‌ನ ಮೊದಲ ಅಚ್ಚರಿಯ ಫಲಿತಾಂಶವಾಯಿತು.
ಗೋಧಿ
ನವದೆಹಲಿ: 25 ಲಕ್ಷ ಟನ್‌ನಷ್ಟು ಗೋಧಿ ರಫ್ತು ಮಾಡಲು ಕೇಂದ್ರ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ. ಇದೇ ವೇಳೆ ಹೆಚ್ಚುವರಿಯಾಗಿ 5 ಲಕ್ಷ ಟನ್ ಸಕ್ಕರೆ ರಫ್ತಿಗೂ ಸಹ ಒಪ್ಪಿಗೆ ನೀಡಿದೆ. ಪ್ರಸ್ತುತ ಲಭ್ಯತೆ ಇರುವ ದಾಸ್ತಾನು ಮತ್ತು ಬೆಲೆಯ ಸನ್ನಿವೇಶವನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದು ರೈತರ ಹಿತಾಸಕ್ತಿಗಳನ್ನು ರಕ್ಷಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಎಂದು ಕೇಂದ್ರ ಆಹಾರ ಸಚಿವಾಲಯ ತಿಳಿಸಿದೆ.
ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಅವಧಿಯಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ನೀಡಲಾಗಿದೆ. ಫೆ.28ರಿಂದ ಮಾರ್ಚ್ 17ರವರೆಗೆ ನಡೆಯಲಿರುವ ಪರೀಕ್ಷೆಗಳು ಆಯಾ ವಿದ್ಯಾರ್ಥಿಗಳು ಕಲಿಯುತ್ತಿರುವ ವಿದ್ಯಾಸಂಸ್ಥೆಗಳ ಬದಲು ಬೇರೆ ವಿದ್ಯಾಸಂಸ್ಥೆಗಳಲ್ಲಿ ನಡೆಯುತ್ತವೆ. ವಿದ್ಯಾರ್ಥಿಗಳಿಗೆ ಉಚಿತವಾಗಿ ಪ್ರಯಾಣಿಸಲು ಅನುಮತಿ ನೀಡುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರು ಕೋರಿದ್ದಾರೆ. ಅದರಂತೆ ಪರೀಕ್ಷೆ ನಡೆಯುವ ದಿನಗಳಂದು ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರಗಳಿಗೆ ತೆರಳುವ ಮತ್ತು ಅಲ್ಲಿಂದ ಹಿಂದಿರುಗುವ ವೇಳೆ ವಿದ್ಯಾರ್ಥಿಗಳು ಪರೀಕ್ಷಾ ಪ್ರವೇಶ ಪತ್ರಗಳನ್ನು ತೋರಿಸಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.
ಬೆಂಗಳೂರು: ‘ಗಣಿ ಗುತ್ತಿಗೆ ಪರವಾನಗಿಯನ್ನು ಅಕ್ರಮವಾಗಿ ನೀಡಿದ ಹಾಗೂ ಕಾನೂನು ಬಾಹಿರವಾಗಿ ನವೀಕರಣ ಮಾಡಿದ ಆರೋಪದಡಿ ತನಿಖೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಆದೇಶಿಸಬೇಕು’ ಎಂದು ಕೋರಲಾದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್, ಏಪ್ರಿಲ್ 17ಕ್ಕೆ ಮುಂದೂಡಿದೆ.
ಇಸ್ಲಾಮಾಬಾದ್: ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಬಲಗಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ ಎಂದು ಅವರ ವಕೀಲರು ಮತ್ತು ಕುಟುಂಬದವರು ತಿಳಿಸಿದ್ದಾರೆ.ಖಾನ್ ಅವರು 2023ರಿಂದಲೂ ಜೈಲಿನಲ್ಲಿದ್ದು, ಈ ಬೆಳವಣಿಗೆಯು ಅವರ ಆರೋಗ್ಯದ ಬಗ್ಗೆ ಕಳವಳ ಸೃಷ್ಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.