ADVERTISEMENT

ಟ್ರಾಯ್ ಅಧ್ಯಕ್ಷರ ಮಾಹಿತಿ ಹ್ಯಾಕ್ ಆಗಿಲ್ಲ, ಆಧಾರ್ ಸುರಕ್ಷಿತ: ಯುಐಡಿಎಐ

​ಪ್ರಜಾವಾಣಿ ವಾರ್ತೆ
Published 30 ಜುಲೈ 2018, 2:47 IST
Last Updated 30 ಜುಲೈ 2018, 2:47 IST
   

ನವದೆಹಲಿ: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಅಧ್ಯಕ್ಷ ಆರ್‌.ಎಸ್‌.ಶರ್ಮಾ ಆಧಾರ್ ಸಂಖ್ಯೆಯನ್ನು ಪ್ರಕಟಿಸಿದ ಕಾರಣ ಅವರ ವೈಯಕ್ತಿಕ ಮಾಹಿತಿ ಹ್ಯಾಕ್ ಆಗಿಲ್ಲ. ಶರ್ಮಾ ಅವರ ಮಾಹಿತಿಗಳು ಪಬ್ಲಿಕ್ ಡೊಮೇನ್‍ನಲ್ಲಿ ಲಭ್ಯವಿದೆ. ಹಾಗಾಗಿ ಅವರ ಮಾಹಿತಿ ಗೂಗಲ್‍‍ನಲ್ಲಿ ಸುಲಭವಾಗಿ ಸಿಗುತ್ತದೆ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಹೇಳಿದೆ.

ಆಧಾರ್ ಸುರಕ್ಷಿತವಾಗಿದೆ.ಆದರೆ ಕೆಲವರು ತಪ್ಪು ಮಾಹಿತಿಗಳ ಮೂಲಕ ಹಾದಿ ತಪ್ಪಿಸುತ್ತಿದ್ದಾರೆ, ಆಧಾರ್ ಡೇಟಾಬೇಸ್ ಸುರಕ್ಷಿತವಾಗಿದೆ ಮತ್ತು ಕಳೆದ 8 ವರ್ಷಗಳಲ್ಲಿ ಅದೆಷ್ಟು ಸುರಕ್ಷಿತ ಎಂಬುದು ಸಾಬೀತಾಗಿದೆ.

ಆಧಾರ್ ಸಂಖ್ಯೆಯನ್ನು ಬಳಸಿ ಶರ್ಮಾ ಅವರ ವೈಯಕ್ತಿಕ ಮಾಹಿತಿ ಹ್ಯಾಕ್ ಮಾಡಿಲ್ಲ. ಅದು ಸುಮ್ಮನೆ ಹೇಳುತ್ತಿರುವುದು ಅಷ್ಟೇ. ಜನರು ಸಾಮಾಜಿಕ ತಾಣದಲ್ಲಿ ಅಥವಾ ಇತರ ಮಾಧ್ಯಮಗಳಲ್ಲಿ ಹರಡುವ ಇಂಥಾ ಸುದ್ದಿಗಳಿಗೆ ಕಿವಿಗೊಡಬೇಡಿ.ಆಧಾರ್ ಡೇಟಾಬೇಸ್ ಸುರಕ್ಷಿತವಾಗಿದ್ದು, ಶರ್ಮಾ ಅವರ ಮಾಹಿತಿಯನ್ನು ಯುಐಡಿಎಐ ಸರ್ವರ್ ನಿಂದಾಗಲೀ ಆಧಾರ್ ಡೇಟಾಬೇಸ್‌‍ ನಿಂದಾಗಲೀ ಹುಡುಕಿ ತೆಗೆದಿಲ್ಲ. ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಇವರು ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.

ADVERTISEMENT


ಉದಾಹರಣೆಗೆ ಶರ್ಮಾ ಅವರ ಮೊಬೈಲ್ ಸಂಖ್ಯೆ ಎನ್ಐಸಿ ವೆಬ್‍ಸೈಟ್ ನಲ್ಲಿದೆ. ಯಾಕೆಂದರೆ ಅವರು ಐಟಿ ಕಾರ್ಯದರ್ಶಿಯಾಗಿದ್ದವರು. ಅವರ ಜನನ ದಿನಾಂಕ ಐಎಎಸ್ ಅಧಿಕಾರಿಗಳ ಸಿವಿಲ್ ಲಿಸ್ಟ್ ನಲ್ಲಿದೆ. ಇದೂ ಪಬ್ಲಿಕ್ ಡೊಮೇನ್‍ನಲ್ಲಿದೆ.ಅವರು ಟ್ರಾಯ್ ಮುಖ್ಯಸ್ಥರಾಗಿರುವ ಕಾರಣ ಟ್ರಾಯ್ ವೆಬ್‌ಸೈಟ್‍ನಲ್ಲಿ ಅವರ ವಿಳಾಸವಿದೆ. ಹಾಗೆಯೇ ಅವರ ಇಮೇಲ್ ಐಡಿ ಕೂಡಾ ಪಬ್ಲಿಕ್ ಡೊಮೇನ್‍ನಿಂದಲೇ ದೊರೆತಿರಬಹುದು.ಇದೆಲ್ಲವನ್ನೂ ಒಟ್ಟುಗೂಡಿಸಿ ಅವರ ವೈಯಕ್ತಿಕ ಮಾಹಿತಿಯನ್ನು ಪ್ರಕಟಿಸಿ ಆಧಾರ್ ಡೇಟಾಬೇಸ್ ಹ್ಯಾಕ್ ಮಾಡಿದ್ದೇವೆ ಎಂಬ ವಾದ ಸತ್ಯಕ್ಕೆ ದೂರವಾದದು. ಜನರು ಪ್ಯಾನ್ ಕಾರ್ಡ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ಹಲವಾರು ಕಡೆ ನೀಡುತ್ತಾರೆ. ಹಾಗೆಯೇ ವಿವಿಧ ವೆಬ್‌ಸೈಟ್‌‍ನಿಂದ ಪ್ಯಾನ್/ಮೊಬೈಲ್ ಸಂಖ್ಯೆ ಸಿಕ್ಕಿರಬಹುದು ಎಂದು ಯುಐಎಡಿಐ ಹೇಳಿದೆ.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.