ಉದ್ಧವ್ ಠಾಕ್ರೆ ಹಾಗೂ ರಾಜ್ ಠಾಕ್ರೆ
ಪಿಟಿಐ ಚಿತ್ರಗಳು
ಮುಂಬೈ: ಮಹಾರಾಷ್ಟ್ರ ಸರ್ಕಾರ ತ್ರಿಭಾಷಾ ಸೂತ್ರದ ಆದೇಶವನ್ನು ಹಿಂಪಡೆದಿರುವ ಹಿನ್ನೆಲೆಯಲ್ಲಿ ಶಿವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಹಾಗೂ ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರು ವೊರ್ಲಿ ಪ್ರದೇಶದಲ್ಲಿ ಇಂದು (ಶನಿವಾರ, ಜುಲೈ 5) ವಿಜಯ ಯಾತ್ರೆ ರ‍್ಯಾಲಿ ನಡೆಸಲಿದ್ದಾರೆ.
ಈ ಸಮಾವೇಶಕ್ಕೆ ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಮತ್ತು ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಹರ್ಷವರ್ಧನ ಸಪ್ಕಾಲ್ ಅವರು ಗೈರಾಗಲಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿರುವ ಎನ್‌ಸಿಪಿ (ಎಸ್‌ಪಿ) ಕಾರ್ಯಾಧ್ಯಕ್ಷೆ ಹಾಗೂ ಬಾರಾಮತಿ ಸಂಸದೆ ಸುಪ್ರಿಯಾ ಸುಳೆ, 'ಅಧ್ಯಕ್ಷ ಪವಾರ್ ಅವರು ಶನಿವಾರ ಪುಣೆಯಲ್ಲಿ ಇರುತ್ತಾರೆ. ಶಾಸಕ ಜಿತೇಂದ್ರ ಅವದ್ ಅವರೊಂದಿಗೆ ನಾನು ಸಮಾವೇಶದಲ್ಲಿ ಭಾಗವಹಿಸುತ್ತೇನೆ' ಎಂದು ಹೇಳಿದ್ದಾರೆ.
'ರ‍್ಯಾಲಿಯಲ್ಲಿ ಪಾಲ್ಗೊಳ್ಳುವಂತೆ ಎಂಎನ್‌ಎಸ್ ನಾಯಕ ಬಾಳಾ ನಂದಗಾಂವ್ಕರ್ ಅವರು ನನಗೆ ಆಹ್ವಾನ ನೀಡಿದ್ದಾರೆ' ಎಂದು ಎನ್‌ಸಿಪಿ (ಎಸ್‌ಪಿ) ರಾಜ್ಯ ಘಟಕದ ಅಧ್ಯಕ್ಷ ಜಯಂತ್ ಪಾಟಿಲ್ ತಿಳಿಸಿದ್ದಾರೆ.
ಅದೇ ರೀತಿ, ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ ಅವರು ಸಪ್ಕಾಲ್ ಅವರನ್ನು ಆಹ್ವಾನಿಸಿದ್ದಾರೆ. ಆದರೆ, ರಾಜ್ ಠಾಕ್ರೆ ಜೊತೆ ರಾಜಕೀಯ ಸಾಮರಸ್ಯವಿಲ್ಲದ ಕಾರಣ ಅವರು ಸಮಾವೇಶದಲ್ಲಿ ಭಾಗವಹಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ರಾಜ್ಯದ ಮರಾಠಿ ಮತ್ತು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ತ್ರಿಭಾಷಾ ಸೂತ್ರ ಅಳವಡಿಕೆಯ ಭಾಗವಾಗಿ 1ರಿಂದ 5ನೇ ತರಗತಿವರೆಗೆ ಹಿಂದಿಯನ್ನು ಭಾಷೆ ಹೇರಿಕೆಯನ್ನು ವಿರೋಧಿಸುವುದಾಗಿ ಕಾಂಗ್ರೆಸ್ ಈ ಮೊದಲು ಸ್ಪಷ್ಟವಾಗಿ ಹೇಳಿತ್ತು.
ಜಂಟಿ ಪ್ರತಿಭಟನೆಗೆ ಸಜ್ಜಾಗಿದ್ದ ಉದ್ಧವ್, ರಾಜ್
ತ್ರಿಭಾಷಾ ಸೂತ್ರ ಹಾಗೂ ಹಿಂದಿ ಹೇರಿಕೆ ವಿರುದ್ಧ ಜಂಟಿಯಾಗಿ ಪ್ರತಿಭಟನೆ ನಡೆಸಲು ಉದ್ಧವ್ ಠಾಕ್ರೆ ಹಾಗೂ ರಾಜ್ ಠಾಕ್ರೆ ಪಕ್ಷಗಳು ಸಜ್ಜಾಗಿದ್ದವು. ಅದಕ್ಕಾಗಿ, ದಿನಾಂಕವೂ (ಜುಲೈ 6) ನಿಗದಿಯಾಗಿತ್ತು.
ಆದರೆ, ರಾಜ್ಯ ವಿಧಾನಸಭೆಯ ಮಳೆಗಾಲದ ಅಧಿವೇಶಕ್ಕೂ ಮುನ್ನ (ಜೂನ್ 29ರಂದು) ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಆದೇಶವನ್ನು ಹಿಂಪಡೆಯುವ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ, ಶಿವಸೇನಾ (ಯುಬಿಟಿ) ಹಾಗೂ ಎಂಎನ್‌ಎಸ್ ವಿಜಯ ಯಾತ್ರೆಗೆ ಸಜ್ಜಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.