ADVERTISEMENT

ಸಾಬರಮತಿ ಆಶ್ರಮದಲ್ಲಿ ಬ್ರಿಟನ್‌ ಪ್ರಧಾನಿ; ಚರಕ ತಿರುಗಿಸಿದ ಬೋರಿಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಏಪ್ರಿಲ್ 2022, 6:13 IST
Last Updated 21 ಏಪ್ರಿಲ್ 2022, 6:13 IST
ಸಾಬರಮತಿ ಆಶ್ರಮದಲ್ಲಿ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌- ಚಿತ್ರ ಕೃಪೆ: ಗುಜರಾತ್‌ ಮಾಹಿತಿ ನಿರ್ದೇಶನಾಲಯದ ಟ್ವಿಟರ್ ಖಾತೆ
ಸಾಬರಮತಿ ಆಶ್ರಮದಲ್ಲಿ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌- ಚಿತ್ರ ಕೃಪೆ: ಗುಜರಾತ್‌ ಮಾಹಿತಿ ನಿರ್ದೇಶನಾಲಯದ ಟ್ವಿಟರ್ ಖಾತೆ   

ಅಹಮದಾಬಾದ್‌: ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಗುರುವಾರ ಗುಜರಾತ್‌ನ ಅಹಮದಾಬಾದ್‌ಗೆ ಬಂದಿಳಿದರು. ಅವರು ಇಂದಿನಿಂದ ಎರಡು ದಿನ ಭಾರತದ ಪ್ರವಾಸದಲ್ಲಿದ್ದಾರೆ.

ವಿಮಾನನಿಲ್ದಾಣದಲ್ಲಿ ಬೋರಿಸ್‌ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ಅನಂತರ ಅವರು ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿದರು. ‌ಬೋರಿಸ್‌ ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದಾರೆ.

ಸಾಬರಮತಿ ಆಶ್ರಮದಲ್ಲಿ ಅವರು ಚರಕದಿಂದ ನೂಲು ತೆಗೆಯುವ ಪ್ರಯತ್ನ ಮಾಡಿದರು. ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಅವರು ಜೊತೆಯಲ್ಲಿದ್ದರು.

ADVERTISEMENT

ಬ್ರಿಟಿಷ್‌ ರೇರ್‌ ಅಡ್ಮಿರಲ್‌ ಸರ್ ಎಡ್ಮಂಡ್‌ ಸ್ಲೇಡ್‌ ಅವರ ಮಗಳು ಮೀರಾಬೆನ್‌ ಅವರ ಆತ್ಮಕಥನ 'ದಿ ಸ್ಪಿರಿಟ್ಸ್‌ ಪಿಲಿಗ್ರಿಮೇಜ್‌' (The Spirit's Pilgrimage) ಪ್ರತಿಯನ್ನು ಸಾಬರಮತಿ ಆಶ್ರಮದ ಕಡೆಯಿಂದ ಬೋರಿಸ್‌ ಅವರಿಗೆ ಉಡುಗೊರೆಯಾಗಿ ನೀಡಲಾಗಿದೆ. ಮೀರಾಬೆಲ್‌ ಗಾಂಧೀಜಿ ಅವರ ಅನುಯಾಯಿಯಾಗಿದ್ದರು.

ಇದರೊಂದಿಗೆ ಮಹಾತ್ಮ ಗಾಂಧಿ ಅವರು ಆರಂಭದ ದಿನಗಳಲ್ಲಿ ಬರೆದಿದ್ದ 'ಗೈಡ್‌ ಟು ಲಂಡನ್‌' (Guide to London) ಕೃತಿಯನ್ನೂ ಕೊಡಲಾಗಿದೆ. ಗಾಂಧೀಜಿ ಅವರ ಆ ಕೃತಿಯು ಮುದ್ರಣ ಕಂಡಿಲ್ಲ.

ಗುಜರಾತ್‌ನಲ್ಲಿ ಪ್ರಮುಖ ಉದ್ಯಮ ವಲಯಗಳಿಗೆ ಭೇಟಿ ನೀಡಲಿದ್ದು, ಎರಡೂ ರಾಷ್ಟ್ರಗಳ ನಡುವಿನ ವಾಣಿಜ್ಯ, ವ್ಯಾಪಾರ ಹಾಗೂ ಜನರ ಸಂಪರ್ಕಗಳ ಬಗ್ಗೆ ಚರ್ಚಿಸಲಿದ್ದಾರೆ. ಅನಂತರ ಅವರು ದೆಹಲಿಗೆ ತೆರಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ.

ಭಾರತವು ತೈಲ ಮತ್ತು ರಕ್ಷಣಾ ಸಲಕರಣೆಗಳಿಗಾಗಿ ರಷ್ಯಾ ಮೇಲಿನ ಅವಲಂಬನೆಯನ್ನು ಕಡಿತಗೊಳಿಸುವ ಕುರಿತು ಮಾತುಕತೆ ನಡೆಸಲಿದ್ದಾರೆ. ಸಾಫ್ಟ್‌ವೇರ್‌, ಎಂಜಿನಿಯರಿಂಗ್‌ನಿಂದ ಫಾರ್ಮಾ ವರೆಗಿನ ಹಲವು ವಲಯಗಳಲ್ಲಿ ಹೊಸ ಹೂಡಿಕೆ ಹಾಗೂ ಆಮದು ಒಪ್ಪಂದಗಳ ಬಗ್ಗೆ ಬೋರಿಸ್‌ ಪ್ರಕಟಿಸಲಿದ್ದಾರೆ.

ಉಭಯ ದೇಶಗಳ ನಡುವಿನ ವಾಣಿಜ್ಯ ವಹಿವಾಟು, ಭದ್ರತಾ ಸಹಕಾರ, ಉಕ್ರೇನ್‌–ರಷ್ಯಾ ಯುದ್ಧ, ರಾಜತಾಂತ್ರಿಕತೆ ಮತ್ತು ಆರ್ಥಿಕತೆಯ ಪಾಲುದಾರಿಕೆ ಹಾಗೂ ಮುಕ್ತ ವ್ಯಾಪಾರ ಒಪ್ಪಂದ(ಎಫ್‌ಟಿಎ) ಸಂಬಂಧಿತ ವಿಷಯಗಳು ಚರ್ಚೆಗೆ ಬರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.