ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಬಾಲರಾಮನ ದೇಗುಲದ ಎದುರು ದರ್ಶನಕ್ಕಾಗಿ ಕಾದಿರುವ ಭಕ್ತರು
ಪಿಟಿಐ ಚಿತ್ರ
ಅಯೋಧ್ಯೆ: ಹೊಸ ವರ್ಷದ ಮೊದಲ ದಿನವಾದ ಬುಧವಾರ, ಉತ್ತರ ಪ್ರದೇಶದ ಅಯೋಧ್ಯೆ ಮತ್ತು ವಾರಾಣಸಿಯ ದೇಗುಲಗಳಿಗೆ ನಿರೀಕ್ಷೆಗೂ ಮೀರಿ ಭಕ್ತಸಾಗರ ಹರಿದು ಬಂದಿದೆ.
‘ಹೊಸ ವರ್ಷದ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಬಾಲರಾಮನ ದರ್ಶನಕ್ಕಾಗಿ ಸುಮಾರು ಎರಡು ಲಕ್ಷ ಭಕ್ತರು ಮೊದಲೇ ಬಂದಿದ್ದರು. ಬುಧವಾರ ಬೆಳಿಗ್ಗೆ ಸುಮಾರು ಮೂರು ಲಕ್ಷ ಜನ ದರ್ಶನಕ್ಕಾಗಿ ಬಂದಿದ್ದಾರೆ. ಹೊಸ ವರ್ಷದ ಮೊದಲ ದಿನದ ಸೂರ್ಯೋದಯದ ಸಂದರ್ಭದಲ್ಲಿ ದರ್ಶನ ಪಡೆಯಲು ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು’ ಎಂದು ಸ್ಥಳೀಯ ಆಡಳಿತ ತಿಳಿಸಿದೆ.
ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯದಲ್ಲೂ ಭಕ್ತರು ಭಾರೀ ಸಂಖ್ಯೆಯಲ್ಲಿ ದರ್ಶನಕ್ಕಾಗಿ ಬಂದಿದ್ದ ದೃಶ್ಯ ಕಂಡುಬಂತು. ಬೆಳಿಗ್ಗೆ 3ಕ್ಕೆ ಆರಂಭವಾದ ದೇಗುಲದಲ್ಲಿ ಸಂಜೆಯವರೆಗೂ ಏಕೋಪ್ರಕಾರ ಜನರು ಬರುತ್ತಲೇ ಇದ್ದರು. ಸಂಜೆ 4ರ ಹೊತ್ತಿಗೆ ಸುಮಾರು 3.5 ಲಕ್ಷ ಭಕ್ತರು ದೇಗುಲಕ್ಕೆ ಭೇಟಿ ನೀಡಿ ವಿಶ್ವನಾಥನ ದರ್ಶನ ಪಡೆದಿದ್ದಾರೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
ರಾಮ ದೇವಾಲಯ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಹೇಳಿಕೆಯೊಂದನ್ನು ನೀಡಿದ್ದು, ‘ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಇಡೀ ಜಗತ್ತು ಹೊಸ ವರ್ಷ ಆಚರಿಸುತ್ತಿದೆ. ಚಳಿಗಾಲ ಹಾಗೂ ರಜೆ ದಿನಗಳು ಇದ್ದ ಕಾರಣ ಭಕ್ತರ ಸಂಖ್ಯೆ ಹೆಚ್ಚಳವಾಗಿದೆ. ವರ್ಷಾಂತ್ಯದಲ್ಲಿ ಗೋವಾ, ನೈನಿತಾಲ್, ಶಿಮ್ಲಾ ಅಥವಾ ಮಸೂರಿಯಂತ ಸಾಂಪ್ರದಾಯಿಕ ಪ್ರವಾಸಿ ತಾಣಗಳ ಬದಲು, ಅಯೋಧ್ಯೆಯಂತ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಳವಾಗಿದೆ’ ಎಂದಿದ್ದಾರೆ.
‘ಹರಿದುಬಂದ ಭಕ್ತಸಾಗರವನ್ನು ನಿಯಂತ್ರಿಸುವ ಉದ್ದೇಶದಿಂದ ಅಯೋಧ್ಯಾ ನಗರವನ್ನು ಹಲವು ವಲಯಗಳನ್ನಾಗಿ ಅಧಿಕಾರಿಗಳು ವಿಭಜಿಸಿದ್ದರು. ಭದ್ರತೆಗಾಗಿ ಪೊಲೀಸರ ಸಂಖ್ಯೆ ಹೆಚ್ಚಿಸಲಾಗಿತ್ತು. ದಿನದ 24 ಗಂಟೆಗಳೂ ಟ್ರಾಫಿಕ್ ನಿಯಂತ್ರಣ ಕ್ರಮಗಳು ಜಾರಿಯಲ್ಲಿದ್ದವು. ಹೋಟೆಲುಗಳು, ಧರ್ಮಶಾಲಾ ಹಾಗೂ ಹೋಮ್ ಸ್ಟೇಗಳು ಭರ್ತಿಯಾಗಿದ್ದವು. ಇದೇ ಪರಿಸ್ಥಿತಿ ಹನುಮಗಿರಿ ದೇವಾಲಯದಲ್ಲೂ ಇತ್ತು. ಮುಂಜಾನೆಯ ಆರತಿಯಿಂದ ರಾತ್ರಿಯ ಶಯನ ಆರತಿವರೆಗೂ ಬರುತ್ತಿದ್ದ ಜನರ ಸಂಖ್ಯೆ ಕಡಿಮೆಯಾಗಿರಲಿಲ್ಲ’ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ದರ್ಶನಕ್ಕೆ ಈ ಮೊದಲು ಮಾಡಲಾಗಿದ್ದ 10 ಸಾಲುಗಳನ್ನು ದ್ವಿಗುಣಗೊಳಿಸಲಾಗಿತ್ತು. ರಾಮಜನ್ಮಭೂಮಿ ಪಥದಲ್ಲಿ ಭೇಟಿ ನೀಡುವವರ ಗ್ಯಾಲರಿಗೆ ಹೆಚ್ಚುವರಿಯಾಗಿ ಹತ್ತು ಗ್ಯಾಲರಿ ಸೇರಿಸಲಾಗಿತ್ತು.
ವಾರಾಣಸಿಯಲ್ಲಿ ದೇವರನ್ನು ಸ್ಪರ್ಶಿಸಿ ದರ್ಶನ ಪಡೆಯುವುದನ್ನು ನಿರ್ಬಂಧಿಸಲಾಗಿತ್ತು. ಗರ್ಭಗುಡಿ ಪ್ರವೇಶಕ್ಕೂ ನಿರ್ಬಂಧ ಹೇರುವ ಮೂಲಕ ಜನದಟ್ಟಣೆ ನಿರ್ಯಂತ್ರಿಸಲು ಕ್ರಮ ಕೈಗೊಳ್ಳಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.