ADVERTISEMENT

ಗಗನಯಾನಿ ಶುಕ್ಲಾ ಸೇರಿ ಐವರಿಗೆ ಉತ್ತರ ಪ್ರದೇಶ ಗೌರವ ಸಮ್ಮಾನ; ಉಳಿದವರ ಸಾಧನೆ ಏನು?

ಪಿಟಿಐ
Published 24 ಜನವರಿ 2026, 14:17 IST
Last Updated 24 ಜನವರಿ 2026, 14:17 IST
<div class="paragraphs"><p>ಶುಭಾಂಶು ಶುಕ್ಲಾ</p></div>

ಶುಭಾಂಶು ಶುಕ್ಲಾ

   

ಕೃಪೆ: ಪಿಟಿಐ

ಲಖನೌ: ರಾಜ್ಯಕ್ಕೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತಂದ ಗಗನಯಾನಿ ಶುಭಾಂಶು ಶುಕ್ಲಾ ಸೇರಿದಂತೆ ಐವರನ್ನು ಸನ್ಮಾನಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ.

ADVERTISEMENT

ಈ ವರ್ಷ ಬಾಹ್ಯಾಕಾಶ, ಶಿಕ್ಷಣ, ಸಾಹಿತ್ಯ, ಮಹಿಳಾ ಸಬಲೀಕರಣ ಮತ್ತು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ರಾಜ್ಯ ದಿನದ ಅಂಗವಾಗಿ ಇಂದಿನಿಂದ (ಶನಿವಾರ) ಆರಂಭವಾಗಿರುವ ಮೂರು ದಿನಗಳ ಕಾರ್ಯಕ್ರಮದ ವೇಳೆ 'ಉತ್ತರ ಪ್ರದೇಶ ಗೌರವ ಸಮ್ಮಾನ ಪ್ರದಾನ' ಮಾಡಲಾಗುವುದು.

ಲಖನೌನಲ್ಲಿ ಹೊಸದಾಗಿ ನಿರ್ಮಿಸಲಾಗಿರುವ 'ರಾಷ್ಟ್ರ ಪ್ರೇರಣಾ ಸ್ಥಳ' ಕಾರ್ಯಕ್ರಮ ಆಯೋಜನೆಗೊಂಡಿದೆ.

ಕೆನಡಿ ಬಾಹ್ಯಾಕಾಶ ಕೇಂದ್ರದಿಂದ 2025ರ ಜೂನ್‌ 26ರಂದು ನಾಸಾ ಉಡಾವಣೆ ಮಾಡಿದ್ದ ಸ್ಪೇಸ್‌ಎಕ್ಸ್‌ನ ಡ್ರಾಗನ್‌ ನೌಕೆ ಮೂಲಕ ಶುಕ್ಲಾ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿ ದಾಖಲೆ ಮಾಡಿದ್ದರು. ಅದರೊಂದಿಗೆ, ಐಎಸ್‌ಎಸ್‌ನಲ್ಲಿ ಕಾಲಿಟ್ಟ ಮೊದಲ ಭಾರತೀಯ ಎನಿಸಿದ್ದರು. ಆದರೆ, ಒಟ್ಟಾರೆಯಾಗಿ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ ಎರಡನೇ ಭಾರತೀಯ ಶುಕ್ಲಾ. ಅವರಿಗೂ ಮೊದಲು ರಾಕೇಶ್‌ ಶರ್ಮಾ ಈ ಸಾಧನೆ ಮಾಡಿದ್ದರು.

ಶುಕ್ಲಾ ಅವರಲ್ಲದೆ, ಅಲಖ್‌ ಪಾಂಡೆ, ಡಾ. ಹರಿಓಂ ಪನ್ವಾರ್‌, ರಶ್ಮಿ ಆರ್ಯಾ, ಡಾ. ಸುಧಾಂಶು ಸಿಂಗ್ ಅವರನ್ನೂ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿರುವ ಸರ್ಕಾರ, ಅವರ ಸಾಧನೆಯ ಬಗ್ಗೆಯೂ ಪ್ರಕಟಿಸಿದೆ.

ಅಲಖ್‌ ಪಾಂಡೆ: 2016ರಲ್ಲಿ 'Physics Wala' ಯುಟ್ಯೂಬ್‌ ಚಾನೆಲ್‌ ಆರಂಭಿಸಿದ್ದ ಪಾಂಡೆ, ಅದೇ ಹೆಸರಿನ ಆ್ಯಪ್‌ ಅನ್ನು 2020ರಲ್ಲಿ ಶುರು ಮಾಡಿದ್ದರು. ಈ ಆ್ಯಪ್‌ನಿಂದ ಸಾಕಷ್ಟು ವಿದ್ಯಾರ್ಥಿಗಳು ಕೈಗೆಟುಕುವ ಮೊತ್ತದಲ್ಲಿ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಅವರ ಕಂಪನಿಯು 2022ರ ಹೊತ್ತಿಗೆ ದೇಶದ ಆರನೇ ಅತ್ಯುತ್ತಮ ಎಡ್ಯುಟೆಕ್‌ ಎನಿಸಿದೆ.

ಡಾ. ಹರಿಓಂ ಪನ್ವಾರ್‌: ಬುಲಂದ್‌ಷಹರ್‌ನ ಬುತ್ನಾ ಗ್ರಾಮದ ಪನ್ವಾರ್ ಅವರು, ಶಿಕ್ಷಣ ಹಾಗೂ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ಮೀರತ್‌ನ ಕಾನೂನು ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಪನ್ವಾರ್‌, ತಮ್ಮ ಕವಿತೆಗಳ ಮೂಲಕ ಜನಮನ ಸೆಳೆದಿದ್ದಾರೆ. ತಮ್ಮ ಸಾಹಿತ್ಯ ಕೃತಿಗಳಿಂದ ಬಂದ ಆದಾಯವನ್ನು ಬಡಮಕ್ಕಳ ಶಿಕ್ಷಣ ಹಾಗೂ ಅಶಕ್ತರ ಸಬಲೀಕರಣಕ್ಕಾಗಿ ವಿನಿಯೋಗಿಸುತ್ತಿದ್ದಾರೆ.

ರಶ್ಮಿ ಆರ್ಯಾ: ಮೀರತ್‌ನಲ್ಲಿ 2007ರಲ್ಲಿ 'ಶ್ರೀಮದ್‌ ದಯಾನಂದ ಆರ್ಯ ಕನ್ಯಾ ಗುರುಕುಲ' ಸ್ಥಾಪಿಸಿರುವ ರಶ್ಮಿ ಅವರನ್ನು, ಮಹಿಳಾ ಸಬಲೀಕರಣಕ್ಕೆ ನೀಡಿದ ಕೊಡುಗೆಯ ಕಾರಣಕ್ಕೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಗುರುಕುಲದಲ್ಲಿ ವೈದಿಕ ಸಂಸ್ಕೃತಿ ಹಾಗೂ ಆಧುನಿಕ ಶಿಕ್ಷಣದ ಸಂಯೋಗದ ಮೂಲಕ ವಿದ್ಯಾಭ್ಯಾಸ ನಡೆಯುತ್ತಿದೆ. ಈ ಸಂಸ್ಥೆಯಲ್ಲಿ 600ಕ್ಕೂ ಹೆಚ್ಚು ನಿರ್ಗತಿಕ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ.

ಡಾ. ಸುಧಾಂಶು ಸಿಂಗ್‌: ವಾರಾಣಸಿಯ ಸಿಂಗ್ ಅವರು ಕೃಷಿ – ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದವರು. ಅವರು, ಅಯೋಧ್ಯೆಯಲ್ಲಿರುವ ಆಚಾರ್ಯ ನರೇಂದ್ರ ದೇವ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕದೊಂದಿಗೆ ಪದವಿ ಪೂರೈಸಿದ್ದಾರೆ. ಫಿಲಿಪ್ಪೀನ್ಸ್‌ನ ಅಂತರರಾಷ್ಟ್ರೀಯ ಅಕ್ಕಿ ಸಂಶೋದನಾ ಸಂಸ್ಥೆಯಿಂದ (ಐಆರ್‌ಆರ್‌ಐ) ಪಿಎಚ್‌ಡಿ ಪಡೆದುಕೊಂಡಿದ್ದಾರೆ. ಅಕ್ಕಿಯ ಕುರಿತ ಅವರ ಕೆಲವು ಸಂಶೋಧನೆಗಳು ಅಂತರರಾಷ್ಟ್ರೀಯ ಮನ್ನಣೆ ಪಡೆದುಕೊಂಡಿವೆ.

ಸದ್ಯ ವಾರಾಣಸಿ ಐಎಸ್‌ಎಆರ್‌ಸಿಯಲ್ಲಿ ನಿರ್ದೇಶಕರಾಗಿರುವ ಅವರು, ತಮ್ಮ 29 ವರ್ಷಗಳ ವೃತ್ತಿ ಜೀವನದಲ್ಲಿ ಕೃಷಿ ಸುಸ್ಥಿರತೆಗೆ ಅಪಾರ ಕೊಡುಗೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.