ಉದ್ಯಮಿ ಗೌತಮ್ ಅದಾನಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಧಾನಿ ನರೇಂದ್ರ ಮೋದಿ
ಪಿಟಿಐ ಚಿತ್ರಗಳು
ನವದೆಹಲಿ: ‘ಭಾರತದ ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕದಲ್ಲಿ ತನಿಖೆ ನಡೆಯುತ್ತಿರುವುದರಿಂದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರಂತರ ಬೆದರಿಕೆಗಳಿಗೆ ತಿರುಗೇಟು ನೀಡಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಧ್ಯವಾಗುತ್ತಿಲ್ಲ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತದ ಉತ್ಪನ್ನಗಳ ಮೇಲೆ ಮುಂದಿನ 24 ಗಂಟೆಗಳಲ್ಲಿ ಆಮದು ಸುಂಕವನ್ನು ಇನ್ನಷ್ಟು ಹೆಚ್ಚಿಸುವುದಾಗಿ ಹಾಗೂ ಭಾರತವು ಅಮೆರಿಕದ ಉತ್ತಮ ವ್ಯಾಪಾರ ಪಾಲುದಾರ ರಾಷ್ಟ್ರವಲ್ಲ ಎಂಬ ಟ್ರಂಪ್ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ರಾಹುಲ್ ಮಾತನಾಡಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ವಿಷಯ ಹಂಚಿಕೊಂಡಿರುವ ಅವರು, ‘ಭಾರತ, ದಯವಿಟ್ಟು ಅರ್ಥ ಮಾಡಿಕೊಳ್ಳಲಿ. ಅಮೆರಿಕದಲ್ಲಿ ಅದಾನಿ ವಿರುದ್ಧ ತನಿಖೆ ನಡೆಯುತ್ತಿದೆ. ಹೀಗಾಗಿ ಅಧ್ಯಕ್ಷ ಟ್ರಂಪ್ ಅವರ ಯಾವುದೇ ಬೆದರಿಕೆಗಳಿಗೆ ತಿರುಗೇಟು ನೀಡಲು ಪ್ರಧಾನಿ ಮೋದಿಗೆ ಸಾಧ್ಯವಾಗುತ್ತಿಲ್ಲ’ ಎಂದಿದ್ದಾರೆ.
‘ಈ ಬೆದರಿಕೆಗಳಲ್ಲಿ ಮೋದಿ, ಎಎ ಮತ್ತು ರಷ್ಯಾ ತೈಲ ಒಪ್ಪಂದದ ನಡುವಿನ ಹಣಕಾಸಿಗೆ ಸಂಬಂಧಿಸಿದ ಅಂಶವು ಬಹಿರಂಗವಾಗಬೇಕು. ಆದರೆ ಮೋದಿ ಕೈಗಳು ಕಟ್ಟಿಹಾಕಿವೆ’ ಎಂದು ರಾಹುಲ್ ಆರೋಪಿಸಿದ್ದಾರೆ.
ರಾಹುಲ್ ಅವರ ಹೇಳಿಕೆಗೆ ಸರ್ಕಾರವಾಗಲೀ ಅಥವಾ ಅದಾನಿ ಸಮೂಹ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಮುಂದಿನ 20 ವರ್ಷಗಳಲ್ಲಿ 2 ಶತಕೋಟಿ ಅಮೆರಿಕನ್ ಡಾಲರ್‌ನಷ್ಟು ಆದಾಯ ನಿರೀಕ್ಷಿಸುತ್ತಿರುವ ಸೌರ ವಿದ್ಯುತ್ ಪೂರೈಯ ಗುತ್ತಿಗೆ ಪಡೆಯಲು 2020ರಿಂದ 2024ರವರೆಗೆ ಭಾರತದ ಸರ್ಕಾರಿ ನಿರಂತರ ಲಂಚ ನೀಡಿದ ಪ್ರಕರಣದಲ್ಲಿ 63 ವರ್ಷದ ಶತಕೋಟಿ ಒಡೆಯ ಗೌತಮ್ ಅದಾನಿ ಹಾಗೂ ಇತರ ಏಳು ಜನರ ವಿರುದ್ಧ ನ್ಯೂಯಾರ್ಕ್ ನ್ಯಾಯಾಲಯದಲ್ಲಿ ಕಳೆದ ವರ್ಷದಿಂದ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಇದರಲ್ಲಿ ಅದಾನಿ ಸೋದರಳಿಯನೂ ಆಗಿರುವ ಅದಾನಿ ಗ್ರೀನ್ ಎನರ್ಜಿ ಸಮೂಹದ ನಿರ್ದೇಶಕ ಸಾಗರ್ ಕೂಡಾ ಇದ್ದಾರೆ.
ರಷ್ಯಾದಿಂದ ತೈಲ ಖರೀದಿಸುತ್ತಿರುವುದಕ್ಕಾಗಿ ಅಮೆರಿಕ ಮತ್ತು ಐರೋಪ್ಯ ಒಕ್ಕೂಟಗಳು ನ್ಯಾಯಸಮ್ಮತವಲ್ಲದ ಹಾಗೂ ಅಸಮಂಜಸವಾಗಿ ನವದೆಹಲಿಯನ್ನು ಗುರಿಯಾಗಿಸಿವೆ ಎಂದು ಭಾರತ ತೀವ್ರ ತಿರುಗೇಟು ನೀಡಿದ ಬೆನ್ನಲ್ಲೇ ಟ್ರಂಪ್ ಮತ್ತೆ ಗುಡುಗಿದ್ದಾರೆ. ‘ಭಾರತವು ರಷ್ಯಾದಿಂದ ದೊಡ್ಡ ಪ್ರಮಾಣದಲ್ಲಿ ತೈಲ ಖರೀದಿಸಿ, ದುಬಾರಿ ಬೆಲೆಗೆ ಮಾರುತ್ತಾ ಭಾರೀ ಲಾಭ ಗಳಿಸುತ್ತಿದೆ. ಇದರಿಂದಾಗಿ ಭಾರತದ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಇನ್ನಷ್ಟು ಹೆಚ್ಚಿಸಲಾಗುವುದು’ ಎಂದಿದ್ದಾರೆ.
ರಷ್ಯಾದೊಂದಿಗೆ ತಾವು ವ್ಯಾಪಾರ ಮುಂದುವರಿಸಿರುವ ಅಮೆರಿಕ ಮತ್ತು ಐರೋಪ್ಯ ಒಕ್ಕೂಟವು ಭಾರತದ ವಿಷಯದಲ್ಲಿ ದ್ವಿಮುಖ ನೀತಿ ಅನುಸರಿಸಿವೆ ಎಂದು ಭಾರತ ಟೀಕಿಸಿದೆ.
ರಷ್ಯಾದಿಂದ ಯುರೇನಿಯಂ, ರಸಗೊಬ್ಬರ ಮತ್ತು ರಾಸಾಯನಿಕಗಳನ್ನು ಅಮೆರಿಕ ಆಮದು ಮಾಡಿಕೊಳ್ಳುತ್ತಿರುವ ವಿಷಯ ಕುರಿತು ತನಗೇನೂ ಗೊತ್ತಿಲ್ಲ ಎಂದು ಟ್ರಂಪ್ ಮಂಗಳವಾರ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.