ADVERTISEMENT

ಮೋದಿಯ ಹೆಮ್ಮೆಯ ಸ್ನೇಹಿತರೇ ಭಾರತವನ್ನು ಸಮಸ್ಯೆಗೆ ಸಿಲುಕಿಸುತ್ತಿದ್ದಾರೆ: ಖರ್ಗೆ

ಪಿಟಿಐ
Published 24 ಸೆಪ್ಟೆಂಬರ್ 2025, 8:01 IST
Last Updated 24 ಸೆಪ್ಟೆಂಬರ್ 2025, 8:01 IST
ಮಲ್ಲಿಕಾರ್ಜುನ ಖರ್ಗೆ ಮತ್ತು ನರೇಂದ್ರ ಮೋದಿ
ಮಲ್ಲಿಕಾರ್ಜುನ ಖರ್ಗೆ ಮತ್ತು ನರೇಂದ್ರ ಮೋದಿ   

ಪಟ್ನಾ: ಭಾರತದಿಂದ ಆಮದಾಗುವ ಸರಕುಗಳ ಮೇಲೆ ಶೇಕಡ 50ರಷ್ಟು ಸುಂಕ ವಿಧಿಸುವಿಕೆ ಮತ್ತು ಎಚ್‌–1ಬಿ ವೀಸಾ ಶುಲ್ಕ ಹೆಚ್ಚಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಹೊರಡಿಸಿದ್ದಾರೆ. ಇದೇ ವಿಚಾರ ಉಲ್ಲೇಖಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಹಾರದಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ (ಸಿಡಬ್ಲ್ಯುಸಿ) ಮಾತನಾಡಿದ ಅವರು, ‘ನಮ್ಮ ದೇಶವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹಳ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಈ ಸಭೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ‘ನನ್ನ ಸ್ನೇಹಿತರು’ ಎಂದು ಹೆಮ್ಮೆಪಡುವ ಅದೇ ಸ್ನೇಹಿತರು ಇಂದು ದೇಶವನ್ನು ಹಲವು ಸಮಸ್ಯೆಗಳಿಗೆ ಸಿಲುಕಿಸುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

ನರೇಂದ್ರ ಮೋದಿ ಮತ್ತು ಸರ್ಕಾರದ ರಾಜತಾಂತ್ರಿಕ ವೈಫಲ್ಯದ ಪರಿಣಾಮವಾಗಿ ನಮ್ಮ ದೇಶವು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಅವರು ಆರೋಪಿಸಿದ್ದಾರೆ.

ADVERTISEMENT

‘ರಷ್ಯಾದಿಂದ ತೈಲ ಖರೀದಿಯನ್ನು ಮುಂದುವರಿಸುವ ಮೂಲಕ ಉಕ್ರೇನ್ ಯುದ್ಧಕ್ಕೆ ಚೀನಾ ಮತ್ತು ಭಾರತ ಹಣಕಾಸು ಒದಗಿಸುತ್ತಿವೆ’ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹೇಳಿಕೆ ನೀಡಿದ ಬೆನ್ನಲ್ಲೇ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಟ್ರಂಪ್ ಆಡಳಿತವು ರಷ್ಯಾದ ತೈಲ ಖರೀದಿಗೆ ಪ್ರತಿಯಾಗಿ ಭಾರತದ ಮೇಲೆ ಹೆಚ್ಚುವರಿಯಾಗಿ ಶೇಕಡ 25ರಷ್ಟು ಸುಂಕವನ್ನು ವಿಧಿಸಿದೆ. ಅಮೆರಿಕ ವಿಧಿಸಿದ ಸುಂಕಗಳನ್ನು ‘ಅಸಮಂಜಸ’ ಎಂದು ಕರೆದಿರುವ ಭಾರತ, ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಆರ್ಥಿಕ ಭದ್ರತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ತಿರುಗೇಟು ನೀಡಿದೆ.

ವಿವಿಧ ದೇಶಗಳ ಜನರನ್ನು ನೇಮಕ ಮಾಡಿಕೊಳ್ಳುವ ಅಮೆರಿಕದ ಕಂಪನಿಗಳು ತಮ್ಮ ಉದ್ಯೋಗಿಗಳಿಗಾಗಿ ಪಡೆಯುವ ಎಚ್‌–1ಬಿ ವೀಸಾ ಅರ್ಜಿಗೆ ಸಂಬಂಧಿಸಿದ ವಾರ್ಷಿಕ ಶುಲ್ಕವನ್ನು 1 ಲಕ್ಷ ಡಾಲರ್‌ಗೆ (ಅಂದಾಜು ₹88 ಲಕ್ಷ) ಹೆಚ್ಚಿಸುವ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಶುಕ್ರವಾರ ಸಹಿ ಹಾಕಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.