ಉತ್ತರಾಖಂಡದ ಬದರೀನಾಥ ಸಮೀಪ ಮಾಣಾ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದ ಹಿಮಪಾತದಲ್ಲಿ ಸಿಲುಕಿದ ಕೆಲವರನ್ನು ಭಾರತೀಯ ಯೋಧರು ರಕ್ಷಿಸಿ ಹೊರತಂದರು–
ಪಿಟಿಐ ಚಿತ್ರ
ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾಣಾ ಗ್ರಾಮದಲ್ಲಿ ಸಂಭವಿಸಿದ ಹಿಮಪಾತದಲ್ಲಿ ಗಡಿ ರಸ್ತೆಗಳ ಸಂಸ್ಥೆಗೆ (ಬಿಆರ್‌ಒ) ಕೆಲಸ ಮಾಡುತ್ತಿದ್ದ 25 ಮಂದಿ ಕಾರ್ಮಿಕರು ಅಪಾಯದಲ್ಲಿ ಸಿಲುಕಿಕೊಂಡಿದ್ದಾರೆ.
ಮೊದಲಿಗೆ 57 ಮಂದಿ ಹಿಮದಲ್ಲಿ ಸಿಲುಕಿದ್ದರು. ಈ ಪೈಕಿ 32 ಮಂದಿಯನ್ನು ರಕ್ಷಿಸಲಾಗಿದೆ. ಕತ್ತಲು ಆವರಿಸಿದ್ದರಿಂದ, ರಕ್ಷಣಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
‘ಬದರೀನಾಥ ಹಾಗೂ ಮಾಣಾ ಗ್ರಾಮದ ಮಧ್ಯಭಾಗದಲ್ಲಿರುವ ಬಿಆರ್‌ಒ ಶಿಬಿರದ ಸಮೀಪ ಹಿಮಪಾತ ಸಂಭವಿಸಿದೆ’ ಎಂದು ಚಮೋಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂದೀಪ್ ತಿವಾರಿ ತಿಳಿಸಿದ್ದಾರೆ.
ಉತ್ತರಾಖಂಡದ ಬದರೀನಾಥ ಸಮೀಪ ಮಾಣಾ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದ ಹಿಮಪಾತದಲ್ಲಿ ಸಿಲುಕಿದ ಕೆಲವರನ್ನು ಭಾರತೀಯ ಯೋಧರು ರಕ್ಷಿಸಿ ಹೊರತಂದರು
ಮಾಣಾ ಗ್ರಾಮವು ಬದರೀನಾಥದಿಂದ ಮೂರು ಕಿ.ಮೀ. ದೂರದಲ್ಲಿದೆ. ಭಾರತ ಹಾಗೂ ಟಿಬೆಟ್ ಗಡಿಭಾಗದಲ್ಲಿರುವ ಕೊನೆಯ ಗ್ರಾಮ ಇದಾಗಿದ್ದು, ಸಮುದ್ರಮಟ್ಟದಿಂದ 3,200 ಮೀಟರ್ ಎತ್ತರದಲ್ಲಿದೆ.
‘ಕಾರ್ಮಿಕರನ್ನು ರಕ್ಷಿಸುವ ಕಾರ್ಯವು ಮುಂದುವರಿದಿದೆ. ಇಂಡೊ–ಟಿಬೆಟನ್ ಗಡಿ ಪೊಲೀಸ್ (ಐಟಿಬಿಪಿ) ಪಡೆಯ ಯೋಧರು ಹಾಗೂ ಇತರೆ ಇಲಾಖೆಗಳವರು ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ ನಿಗಾ ವಹಿಸುತ್ತಿದೆ’ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದರು.
‘ಎಲ್ಲರನ್ನೂ ಆದಷ್ಟು ಬೇಗ ಸುರಕ್ಷಿತವಾಗಿ ಹೊರತರಲು ಪ್ರಯತ್ನಿಸಲಾಗುತ್ತಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್) ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡ (ಎಸ್‌ಡಿಆರ್‌ಎಫ್) ಸ್ಥಳಕ್ಕೆ ಭೇಟಿ ನೀಡಿದ್ದು, ನಿರಂತರ ಹಿಮಪಾತ– ಮಳೆಯಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕುಂಟಾಗಿದೆ’ ಎಂದು ಅವರು ವಿವರಿಸಿದರು.
ಉತ್ತರಾಖಂಡದ ಬದರೀನಾಥ ಸಮೀಪ ಮಾಣಾ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದ ಹಿಮಪಾತದಲ್ಲಿ ಸಿಲುಕಿದ ರಕ್ಷಿಸುತ್ತಿರುವ ಭಾರತೀಯ ಯೋಧರು–ಪಿಟಿಐ ಚಿತ್ರ
‘ಕಾರ್ಮಿಕರನ್ನು ರಕ್ಷಿಸಲು ಎನ್‌ಡಿಆರ್‌ಎಫ್‌ನ 4 ತಂಡಗಳನ್ನು ಕಳುಹಿಸಲಾಗಿದೆ. ಹೆಚ್ಚುವರಿ 4 ತಂಡಗಳು ಸನ್ನದ್ಧ ಸ್ಥಿತಿಯಲ್ಲಿವೆ’ ಎಂದು ಎನ್‌ಡಿಆರ್‌ಎಫ್‌ನ ನಿರ್ದೇಶಕ ಪೀಯೂಷ್ ಆನಂದ್ ತಿಳಿಸಿದ್ದಾರೆ.
‘ಸ್ಥಳದಲ್ಲಿ ಪ್ರತಿಕೂಲ ಹವಾಮಾನ ಇರಲಿದೆ ಎಂಬುದಾಗಿ ಮುಂಚಿತವಾಗಿಯೇ ಎಚ್ಚರಿಸಲಾಗಿತ್ತು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರಾಖಂಡದ ಚಮೋಲಿ, ಉತ್ತರಾಕಾಶಿ, ರುದ್ರ ಪ್ರಯಾಗ್, ಪಿಥೋರಗಢ ಹಾಗೂ ಬಾಗೇಶ್ವರ ಜಿಲ್ಲೆಗಳ 2,400 ಮೀಟರ್ ಎತ್ತರದ ಪ್ರದೇಶದಲ್ಲಿ ಗುರುವಾರ ಸಂಜೆ 5ರಿಂದ ಶುಕ್ರವಾರ ಸಂಜೆ 5ರ ಒಳಗಾಗಿ ಹಿಮಪಾತ ಸಂಭವಿಸಲಿದೆ ಎಂದು ಚಂಡೀಗಢದಲ್ಲಿರುವ ರಕ್ಷಣಾ ಭೂ ಮಾಹಿತಿವಿಜ್ಞಾನ ಸಂಶೋಧನಾ ಸಂಸ್ಥೆ (ಡಿಜಿಆರ್‌ಇ) ಮುನ್ಸೂಚನೆ ನೀಡಿತ್ತು.
‘ಈ ಜಿಲ್ಲೆಗಳಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೇ ಭಾರಿ ಮಳೆ ಹಾಗೂ ಹಿಮಪಾತವಾಗಲಿದೆ’ ಎಂದು ಡೆಹ್ರಾಡೂನ್‌ನಲ್ಲಿರುವ ಹವಾಮಾನ ಇಲಾಖೆ ಕಚೇರಿಯೂ ಪ್ರತ್ಯೇಕವಾಗಿ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ, ರಾಜ್ಯ ತುರ್ತು ಕಾರ್ಯಾಚರಣಾ ಕೇಂದ್ರವೂ ಸಂಬಂಧಪಟ್ಟ ಜಿಲ್ಲೆಗಳಿಗೆ ಎಚ್ಚರಿಕೆ ಮಾಹಿತಿ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.