ಉತ್ತರಾಖಂಡದ ಬದರೀನಾಥ ಸಮೀಪ ಮಾಣಾ ಗ್ರಾಮದಲ್ಲಿ ಸಂಭವಿಸಿದ ಹಿಮಪಾತದಲ್ಲಿ ಸಿಲುಕಿದ ಕೆಲವರನ್ನು ಭಾರತೀಯ ಯೋಧರು ರಕ್ಷಿಸಿ ಹೊರತಂದರು
–ಪಿಟಿಐ ಚಿತ್ರ
ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾಣಾ ಗ್ರಾಮದಲ್ಲಿ ಸಂಭವಿಸಿದ ಹಿಮಪಾತದಲ್ಲಿ ಗಡಿ ರಸ್ತೆಗಳ ಸಂಸ್ಥೆಗೆ (ಬಿಆರ್‌ಒ) ಕೆಲಸ ಮಾಡುತ್ತಿದ್ದ 8 ಮಂದಿ ಕಾರ್ಮಿಕರು ಅಪಾಯದಲ್ಲಿ ಸಿಲುಕಿಕೊಂಡಿದ್ದಾರೆ.
ಮೊದಲಿಗೆ 57 ಮಂದಿ ಹಿಮದಲ್ಲಿ ಸಿಲುಕಿದ್ದರು. ಈ ಪೈಕಿ ಶುಕ್ರವಾರ 32 ಮಂದಿಯನ್ನು ರಕ್ಷಿಸಲಾಗಿತ್ತು. ಇಂದು (ಶನಿವಾರ) ರಕ್ಷಣಾ ಕಾರ್ಯಾಚರಣೆ ಪುನರಾರಂಭಗೊಂಡಿದ್ದು, 15 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಇನ್ನುಳಿದ 9 ಮಂದಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಲಿಕಾಪ್ಟರ್ ಸೇವೆ ಪ್ರಾರಂಭವಾಗಿದ್ದು, ಗಾಯಗೊಂಡ ಮೂವರನ್ನು ಜೋಶಿಮಠದ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಹಿಮಕುಸಿತ ಸ್ಥಳಕ್ಕೆ ಭೇಟಿ ನೀಡಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸುತ್ತಿದ್ದಾರೆ.
‘ಬದರೀನಾಥ ಹಾಗೂ ಮಾಣಾ ಗ್ರಾಮದ ಮಧ್ಯಭಾಗದಲ್ಲಿರುವ ಬಿಆರ್‌ಒ ಶಿಬಿರದ ಸಮೀಪ ಹಿಮಪಾತ ಸಂಭವಿಸಿದೆ. 65ಕ್ಕೂ ಹೆಚ್ಚು ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ’ ಎಂದು ಚಮೋಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂದೀಪ್ ತಿವಾರಿ ತಿಳಿಸಿದ್ದಾರೆ.
ಮಾಣಾ ಗ್ರಾಮವು ಬದರೀನಾಥದಿಂದ ಮೂರು ಕಿ.ಮೀ. ದೂರದಲ್ಲಿದೆ. ಭಾರತ ಹಾಗೂ ಟಿಬೆಟ್ ಗಡಿಭಾಗದಲ್ಲಿರುವ ಕೊನೆಯ ಗ್ರಾಮ ಇದಾಗಿದ್ದು, ಸಮುದ್ರಮಟ್ಟದಿಂದ 3,200 ಮೀಟರ್ ಎತ್ತರದಲ್ಲಿದೆ.
‘ಕಾರ್ಮಿಕರನ್ನು ರಕ್ಷಿಸುವ ಕಾರ್ಯವು ಮುಂದುವರಿದಿದೆ. ಇಂಡೊ–ಟಿಬೆಟನ್ ಗಡಿ ಪೊಲೀಸ್ (ಐಟಿಬಿಪಿ) ಪಡೆಯ ಯೋಧರು ಹಾಗೂ ಇತರೆ ಇಲಾಖೆಗಳವರು ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ ನಿಗಾ ವಹಿಸುತ್ತಿದೆ’ ಎಂದು ಶುಕ್ರವಾರ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದರು.
‘ಎಲ್ಲರನ್ನೂ ಆದಷ್ಟು ಬೇಗ ಸುರಕ್ಷಿತವಾಗಿ ಹೊರತರಲು ಪ್ರಯತ್ನಿಸಲಾಗುತ್ತಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್) ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡ (ಎಸ್‌ಡಿಆರ್‌ಎಫ್) ಸ್ಥಳಕ್ಕೆ ಭೇಟಿ ನೀಡಿದ್ದು, ನಿರಂತರ ಹಿಮಪಾತ–ಮಳೆಯಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕುಂಟಾಗಿದೆ’ ಎಂದು ಅವರು ವಿವರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.