ADVERTISEMENT

ಉತ್ತರಾಖಂಡ ಪ್ರವಾಹ: ಎನ್‌ಡಿಆರ್‌ಎಫ್‌ನಿಂದ 300 ಮಂದಿಯ ರಕ್ಷಣೆ, ಕನಿಷ್ಠ 41 ಸಾವು

ಪಿಟಿಐ
Published 19 ಅಕ್ಟೋಬರ್ 2021, 16:45 IST
Last Updated 19 ಅಕ್ಟೋಬರ್ 2021, 16:45 IST
ಉತ್ತರಾಖಂಡದ ರುದ್ರಪುರದಲ್ಲಿ ಎನ್‌ಡಿಆರ್‌ಎಫ್‌ ತಂಡದಿಂದ ರಕ್ಷಣಾ ಕಾರ್ಯಾಚರಣೆ
ಉತ್ತರಾಖಂಡದ ರುದ್ರಪುರದಲ್ಲಿ ಎನ್‌ಡಿಆರ್‌ಎಫ್‌ ತಂಡದಿಂದ ರಕ್ಷಣಾ ಕಾರ್ಯಾಚರಣೆ   

ಡೆಹ್ರಾಡೂನ್: ಉತ್ತರಾಖಂಡದ ಪ್ರವಾಹಪೀಡಿತ ಪ್ರದೇಶಗಳಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು (ಎನ್‌ಡಿಆರ್‌ಎಫ್) 300 ಮಂದಿಯನ್ನು ರಕ್ಷಿಸಿದೆ. ಮಳೆ ಸಂಬಂಧಿತ ಅವಘಡಗಳಿಂದಾಗಿ ಮೃತಪಟ್ಟವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಎನ್‌ಡಿಆರ್‌ಎಫ್‌ನ 15 ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ಕುಮಾವೂಂ ಪ್ರದೇಶದಲ್ಲಿ ಮಳೆಯಿಂದಾಗಿ ವ್ಯಾಪಕ ಹಾನಿಯಾಗಿದ್ದು, ಭೂಕುಸಿತದಿಂದ ಅನೇಕ ಮನೆಗಳು ಕುಸಿದುಬಿದ್ದಿವೆ. ಅನೇಕ ಮಂದಿ ಅವಶೇಷಗಳಡಿ ಸಿಲುಕಿದ್ದಾರೆ.

‘ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಉಧಾಮ್‌ ಸಿಂಗ್ ನಗರ ಜಿಲ್ಲೆ ಮತ್ತು ಇತರ ಪ್ರವಾಹಪೀಡಿತ ಪ್ರದೇಶಗಳಿಂದ ನಮ್ಮ ತಂಡಗಳು 300ಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಿವೆ’ ಎಂದು ಎನ್‌ಡಿಆರ್‌ಎಫ್ ವಕ್ತಾರರು ಹೇಳಿದ್ದಾರೆ.

ADVERTISEMENT

ಉಧಾಮ್‌ ಸಿಂಗ್ ನಗರದಲ್ಲಿ ಆರು ತಂಡಗಳು, ಉತ್ತರಕಾಶಿ ಮತ್ತು ಚಮೋಲಿಯಲ್ಲಿ ತಲಾ ಎರಡು ತಂಡಗಳು, ಡೆಹ್ರಾಡೂನ್, ಪಿತೋರಗಡ ಹಾಗೂ ಹರಿದ್ವಾರಗಳಲ್ಲಿ ತಲಾ ಒಂದು ತಂಡವನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇನ್ನೆರಡು ತಂಡಗಳನ್ನು ನೈನಿತಾಲ್ ಮತ್ತು ಅಲ್ಮೋರಾದಲ್ಲಿ ನಿಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ದೆಹಲಿಯಲ್ಲಿ 24x7 ಸಹಾಯವಾಣಿ ತೆರೆಯಲಾಗಿದ್ದು, ರಾಜ್ಯದ ಅಧಿಕಾರಿಗಳ ಜತೆ ನಿಕಟ ಸಂಪರ್ಕದಲ್ಲಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಜನಪ್ರಿಯ ಪ್ರವಾಸಿ ತಾಣವಾಗಿರುವ ನೈನಿತಾಲ್‌ ಸಂಪರ್ಕಿಸುವ ಮೂರೂ ರಸ್ತೆಗಳು ಕುಸಿದಿವೆ. ಹೀಗಾಗಿ ನೈನಿತಾಲ್‌ಗೆ ಇರುವ ಎಲ್ಲ ರಸ್ತೆ ಸಂಪರ್ಕಗಳೂ ಸಂಪೂರ್ಣ ಕಡಿತಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.