ADVERTISEMENT

ಉತ್ತರಾಖಂಡ ಪ್ರವಾಹದಲ್ಲಿ ಸಿಲುಕಿದ ಸಿಂದಗಿಯ ವೈದ್ಯೆ ಅನಿತಾ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 1:12 IST
Last Updated 21 ಅಕ್ಟೋಬರ್ 2021, 1:12 IST
ವೈದ್ಯೆ ಅನಿತಾ
ವೈದ್ಯೆ ಅನಿತಾ   

ಸಿಂದಗಿ: ಉತ್ತರಾಖಂಡ ಭೀಕರ ಪ್ರವಾಹದಲ್ಲಿ ಪಟ್ಟಣದ ವಿಶ್ರಾಂತ ಪ್ರಾಚಾರ್ಯ ಎಸ್.ಬಿ.ಪಂಪಣ್ಣವರ ಅವರ ಪುತ್ರಿ ಡಾ.ಅನಿತಾ ಪಂಪಣ್ಣವರ ಸಿಲುಕಿದ್ದಾರೆ.

ಅವರು ಉತ್ತರಾಖಂಡ ಪಿತೋಘರ ಆರ್ಮಿ ಆಸ್ಪತ್ರೆಯಲ್ಲಿ ಕಳೆದ ಐದು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ರಜೆಯ ಹಿನ್ನೆಲೆಯಲ್ಲಿ ತಮ್ಮೂರು ಸಿಂದಗಿಗೆ ಬರುವ ಸಂದರ್ಭದಲ್ಲಿ ಹಲದವಾಣಿ ಹತ್ತಿರ ಎರಡು ಕಡೆ ಗುಡ್ಡ ಕುಸಿದ ಹಿನ್ನೆಲೆಯಲ್ಲಿ ಅವರು ಮೂರು ದಿನಗಳಿಂದ ಅಲ್ಲಿಯೇ ಪರದಾಡುತ್ತಿದ್ದಾರೆ ಎಂದು ಅವರ ತಂದೆ ತಿಳಿಸಿದ್ದಾರೆ.

ಸತತ ಎರಡು ದಿನ ಸುರಿದ ಮಳೆಯ ಪರಿಣಾಮದಿಂದ ಚೇತರಿಸಿಕೊಳ್ಳಲು ಉತ್ತರಾಖಂಡಕ್ಕೆ ಇನ್ನೂ ಬಹಳ ಕಾಲ ಬೇಕಾಗಬಹುದು. ಮಳೆಯಿಂದಾಗಿ ಭಾನುವಾರದಿಂದ ಬುಧವಾರದವರೆಗೆ 52 ಮಂದಿ ಮೃತಪಟ್ಟಿದ್ಧಾರೆ. ಮನೆಗಳು ಕುಸಿದಿದ್ದು ಹಲವು ಮಂದಿ ಅವಶೇಷಗಳಡಿ ಸಿಲುಕಿರುವ ಆತಂಕ ವ್ಯಕ್ತವಾಗಿದೆ. 5 ಮಂದಿ ನಾಪತ್ತೆಯಾಗಿದ್ದು ಅವರಿಗಾಗಿ ಶೋಧ ಮುಂದುವರಿದಿದೆ.

ADVERTISEMENT

ಭೂಕುಸಿತದಿಂದಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಹಲವು ರಸ್ತೆಗಳಲ್ಲಿ ದೊಡ್ಡ ದೊಡ್ಡ ಕಲ್ಲುಗಳು ಇವೆ. ಹಲವು ಗ್ರಾಮಗಳಲ್ಲಿ ವಿದ್ಯುತ್‌ ಸಂಪರ್ಕ ಸ್ಥಗಿತವಾಗಿದೆ.

ಮಳೆಯ ಅಬ್ಬರ ನಿಂತಿದೆ. ಆದರೆ, ಅವಶೇಷಗಳಡಿಯಲ್ಲಿ ಸಿಲುಕಿದವರ ಪತ್ತೆ ಮತ್ತು ರಕ್ಷಣೆ, ವಿದ್ಯುತ್‌ ಸಂಪರ್ಕ ಮರಸ್ಥಾಪನೆಯು ದೊಡ್ಡ ಸವಾಲಾಗಿದೆ. ಮಳೆಯಿಂದ ಭಾರಿ ಸಮಸ್ಯೆಗೆ ಒಳಗಾಗಿದ್ದ ಪ್ರವಾಸಿ ತಾಣ ನೈನಿತಾಲ್‌ ಸಹಜ ಸ್ಥಿತಿಗೆ ಮರಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.