
ವಿದ್ಯಾರ್ಥಿಗಳು ‘ವಂದೇ ಮಾತರಂ‘ ಹಾಡಿದ ಸಂದರ್ಭ
ನವದೆಹಲಿ: ರಾಷ್ಟ್ರಗೀತೆ ‘ಜನಗಣಮನ’ದಂತೆಯೇ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳು ಸೇರಿದಂತೆ ಶಾಲೆಗಳಲ್ಲಿ ಇನ್ನಮುಂದೆ ‘ವಂದೇ ಮಾತರಂ’ ಗೀತೆ ಹಾಡುವುದು ಕಡ್ಡಾಯಗೊಳಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.
ರಾಷ್ಟ್ರಗೀತೆಗೂ ಮುನ್ನ 3 ನಿಮಿಷ 10 ಸೆಂಕೆಂಡ್‌ನ ‘ವಂದೇ ಮಾತರಂ’ನ 6 ಚರಣಗಳನ್ನು ಹಾಡಬೇಕು. ಹಾಗೆಯೇ ಗೀತೆಯನ್ನು ನುಡಿಸುವಾಗ ಅಥವಾ ಹಾಡುವಾಗ ಎಲ್ಲರೂ ಕಡ್ಡಾಯವಾಗಿ ಎದ್ದು ನಿಲ್ಲಬೇಕು ಎಂದು ಗೃಹ ಸಚಿವಾಲಯ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.
ರಾಷ್ಟ್ರೀಯ ಗೀತೆಯನ್ನು ಪದ್ಮ ಪ್ರಶಸ್ತಿ ಸೇರಿದಂತೆ ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಮತ್ತು ರಾಷ್ಟ್ರಪತಿಯವರು ಭಾಗವಹಿಸುವ ಎಲ್ಲಾ ಇತರ ಕಾರ್ಯಕ್ರಮಗಳಲ್ಲಿ ನುಡಿಸಬೇಕು. ಈ ಸಂದರ್ಭದಲ್ಲಿ ಎದ್ದು ನಿಲ್ಲುವುದು ಕಡ್ಡಾಯವಲ್ಲದಿದ್ದರೂ, ಸಿನಿಮಾ ಮಂದಿರಗಳಂತಹ ಸಾರ್ವಜನಿಕ ಸ್ಥಳಗಳಲ್ಲಿಯೂ ಇದನ್ನು ನುಡಿಸಲಾಗುತ್ತಿದೆ.
ತ್ರಿವರ್ಣ ಧ್ವಜ ಹಾರಿಸುವುದು ಮತ್ತು ಔಪಚಾರಿಕ ಕಾರ್ಯಕ್ರಮಗಳಲ್ಲಿ ರಾಷ್ಟ್ರಪತಿಗಳ ಆಗಮನ ಸೇರಿದಂತೆ ಮಹತ್ವದ ಸಂದರ್ಭಗಳಲ್ಲಿ ವಂದೇ ಮಾತರಂನ 6 ಚರಣಗಳ ಪಠಣವು ಕಡ್ಡಾಯವಾಗಿರುತ್ತದೆ. ರಾಷ್ಟ್ರಗೀತೆಗೆ ಅಡ್ಡಿಪಡಿಸುವ ಅಥವಾ ಇತರರು ಗೌರವಿಸುವುದನ್ನು ತಡೆಯುವ ಯಾವುದೇ ವ್ಯಕ್ತಿಗೆ ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಸರ್ಕಾರಿ ಸಂಸ್ಥೆಗಳಲ್ಲಿ ಏಕರೂಪತೆ ಮತ್ತು ಶಿಷ್ಟಾಚಾರವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಈ ಕ್ರಮ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2025ರ ಡಿಸೆಂಬರ್‌ನಲ್ಲಿ ‘ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್‌ನ ಎರಡೂ ಸದನಗಳನ್ನು ಉದ್ದೇಶಿಸಿ ಮಾತನಾಡಿದ್ದರು.
‘ವಂದೇ ಮಾತರಂ’ ಗೀತೆಯ ಕೆಲ ಪ್ರಮುಖ ಸಾಲುಗಳನ್ನು 1937ರಲ್ಲಿ ಕಾಂಗ್ರೆಸ್ ಕೈಬಿಟ್ಟಿದೆ. ಇದು ದೇಶ ವಿಭಜನೆಯ ಬೀಜ ಬಿತ್ತಲು ಕಾರಣವಾಯಿತು’ ಎಂದು ಮೋದಿ ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.