ADVERTISEMENT

VP ಚುನಾವಣೆ | ಶೇ 50ರ ಸುಂಕಕ್ಕೆ 15 ದಿನವಾಗಿದೆ; 15 ಮತಗಳ ಮಾತೇಕೆ: TMC ಪ್ರಶ್ನೆ

ಪಿಟಿಐ
Published 11 ಸೆಪ್ಟೆಂಬರ್ 2025, 6:31 IST
Last Updated 11 ಸೆಪ್ಟೆಂಬರ್ 2025, 6:31 IST
<div class="paragraphs"><p>ಡೆರೆಕ್ ಒಬ್ರಯಾನ್</p></div>

ಡೆರೆಕ್ ಒಬ್ರಯಾನ್

   

ನವದೆಹಲಿ: ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಅಡ್ಡಮತದಾನ ನಡೆದು 15 ಮತಗಳು ಆಚೀಚೆ ಆಗಿವೆ ಎನ್ನುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು, ಅಮೆರಿಕವು ಶೇ 50ರಷ್ಟು ಸುಂಕ ಹೇರಿ 15 ದಿನ ಕಳೆದಿರುವ ಬಗ್ಗೆ ಯೋಚಿಸಿ. ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಆರಂಭವಾಗಿ 862 ದಿನಗಳಾಗಿದ್ದರ ಬಗ್ಗೆ ಚಿಂತಿಸಿ, ನರೇಗಾ ಯೋಜನೆಯಲ್ಲಿ 1,282 ಮಾನವ ದಿನಗಳ ಕೂಲಿ ಹಣ ಪಶ್ಚಿಮ ಬಂಗಾಳಕ್ಕೆ ಬಂದಿಲ್ಲ. ಅದರ ಬಗ್ಗೆ ಕ್ರಮ ಕೈಗೊಳ್ಳಿ ಎಂದು ತೃಣಮೂಲ ಕಾಂಗ್ರೆಸ್‌ನ ಮುಖಂಡ ಡೆರೆಕ್ ಒಬ್ರಯಾನ್ ಕೇಂದ್ರಕ್ಕೆ ತಿರುಗೇಟು ನೀಡಿದ್ದಾರೆ.

ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್‌ ಅವರು ನಿರೀಕ್ಷೆಗಿಂತ ಹೆಚ್ಚಿನ ಮತಗಳ ಅಂತರದಿಂದ ಗೆದಿದ್ದಾರೆ. ವಿರೋಧ ಪಕ್ಷಗಳ ಮತಗಳನ್ನೂ ಅವರು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ತಮ್ಮ ಅಭ್ಯರ್ಥಿ ಸುದರ್ಶನ್ ರೆಡ್ಡಿ ಅವರ ಪರವಾಗಿ ಎಲ್ಲಾ 315 ಸಂಸದರು ಒಗ್ಗೂಡಿರಬೇಕು ಎಂಬ ಸಂಕಲ್ಪ ಹೊಂದಿದ್ದ ವಿರೋಧ ಪಕ್ಷಗಳ ಒಕ್ಕೂಟಕ್ಕೆ ತೀವ್ರ ಹಿನ್ನಡೆಯಾಗಿದೆ. 

ADVERTISEMENT

‘ಅಮೆರಿಕವು ಭಾರತದ ಸರಕುಗಳ ಮೇಲೆ ಶೇ 50ರಷ್ಟು ಸುಂಕ ವಿಧಿಸಿ 15 ದಿನ ಕಳೆದಿದೆ. ಮಣಿಪುರದಲ್ಲಿ ಹಿಂಸಾಚಾರ ಆರಂಭವಾಗಿ 862 ದಿನಗಳಾಗಿವೆ. ಜೆ.ಪಿ. ನಡ್ಡಾ ಅವರು ಕಳೆದ 967 ದಿನಗಳಿಂದ ಪಕ್ಷದ ಅಧ್ಯಕ್ಷರಾಗಿದ್ದಾರೆ. ಲೋಕಸಭಾ ಉಪಾಧ್ಯಕ್ಷ ಸ್ಥಾನ ಭರ್ತಿ ಮಾಡದೆ 2,278 ದಿನಗಳಾಗಿವೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಪ್ರಧಾನಿ ಉತ್ತರಿಸಿ 4,117 ದಿನಗಳು ಕಳೆದಿವೆ. ಇವೆಲ್ಲವೂ ಮೋದಿ ಸರ್ಕಾರ ಗಂಭೀರ ಚಿಂತನೆ ನಡೆಸಬೇಕಾದ ಸಂಖ್ಯೆಗಳು’ ಎಂದು ಅವರು ಹೇಳಿದ್ದಾರೆ.

ದೇಶದ 15ನೇ ಉಪರಾಷ್ಟ್ರಪತಿಯಾಗಿ ರಾಧಾಕೃಷ್ಣನ್ ಅವರು ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ಅವರು 452 ಮತಗಳನ್ನು ಪಡೆದರು. ನಿವೃತ್ತ ನ್ಯಾಯಮೂರ್ತಿ ರೆಡ್ಡಿ ಅವರು 300 ಮತಗಳನ್ನು ಪಡೆದರು. ಇಲ್ಲಿ 15 ಮತಗಳು ಎನ್‌ಡಿಎ ಅಭ್ಯರ್ಥಿ ಪರವಾಗಿ ಅಡ್ಡಮತದಾನ ನಡೆದಿದೆ ಎಂದೆನ್ನಲಾಗಿದೆ.

ಬಿಜೆಪಿ ನೇತೃತ್ವದ ಎನ್‌ಡಿಎ 427 ಸಂಸದರನ್ನು ಹೊಂದಿತ್ತು. ವೈಎಸ್‌ಆರ್ ಕಾಂಗ್ರೆಸ್‌ನ 11 ಸಂಸದರು ಎನ್‌ಡಿಎ ಅಭ್ಯರ್ಥಿಗೆ ಬೆಂಬಲ ಸೂಚಿಸಿದರು. ಚಿಕ್ಕಪುಟ್ಟ ಪಕ್ಷಗಳು ರಾಧಾಕೃಷ್ಣನ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದವು. ಚಲಾವಣೆಗೊಂಡ ಒಟ್ಟು ಮತಗಳಲ್ಲಿ ರಾಧಾಕೃಷ್ಣನ್ ಅವರು ಶೇ 60ರಷ್ಟು ಮತಗಳನ್ನು ಪಡೆದರು. 

2022ರಲ್ಲಿ ನಡೆದಿದ್ದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಜಗದೀಪ್ ಧನಕರ್ ಅವರು 710ರಲ್ಲಿ 528 ಮತಗಳೊಂದಿಗೆ ಶೇ 74.36ರಷ್ಟು ಮತ ಪಡೆದಿದ್ದರು. 

ಚುನಾವಣೆ ಫಲಿತಾಂಶ ಪ್ರಕಟಗೊಂಡ ತಕ್ಷಣವೇ ವಿರೋಧ ಪಕ್ಷಗಳ 15 ಮತಗಳು ತಮ್ಮ ಪರವಾಗಿ ಚಲಾವಣೆಯಾಗಿವೆ ಎಂದು ಬಿಜೆಪಿ ಹೇಳಿಕೊಂಡಿತು. ವಿರೋಧ ಪಕ್ಷಗಳ ಕೆಲ ಸಂಸದರು ಬೇಕಂತಲೇ ತಮ್ಮ ಮತಗಳು ಅನರ್ಹಗೊಳ್ಳುವಂತೆ ಮಾಡಿದ್ದಾರೆ ಎಂದು ಆಡಳಿತಾರೂಢ ಪಕ್ಷ ಹೇಳಿಕೊಂಡಿದೆ.

‘ವಿರೋಧ ಪಕ್ಷಗಳ 40 ಸಂಸದರು ತಮ್ಮ ಅಂತರಾತ್ಮವನ್ನು ಆಲಿಸಿ, ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ. ಇದರಲ್ಲಿ ಕೆಲವರು ತಮ್ಮ ಮತಗಳನ್ನು ಬೇಕಂತಲೇ ಅನರ್ಹವಾಗುವಂತೆ ಮಾಡಿದ್ದಾರೆ’ ಎಂದು ಬಿಜೆಪಿ ಸಂಸದ ಸಂಜಯ್ ಜೈಸ್ವಾಲ್ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.