
ನಿರ್ಮಾಪಕ ವಿಕ್ರಮ್ ಭಟ್
ಉದಯಪುರ: ರಾಜಸ್ಥಾನದಲ್ಲಿ ದಾಖಲಾಗಿರುವ ₹30 ಕೋಟಿ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ಜನಪ್ರಿಯ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ವಿಕ್ರಮ್ ಭಟ್ ಮತ್ತು ಅವರ ಪತ್ನಿ ಶ್ವೇತಾಂಬರಿ ಅವರನ್ನು ನ್ಯಾಯಾಲಯವು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಈ ಪ್ರಕರಣ ಸಂಬಂಧ ಎಸಿಜೆಎಂ ನ್ಯಾಯಾಲಯದ ಎದುರು ಆರೋಪಿಗಳನ್ನು ಹಾಜರುಪಡಿಸಲಾಯಿತು. ವಿಕ್ರಮ್ ಭಟ್ ಮತ್ತು ಅವರ ಪತ್ನಿ ಶ್ವೇತಾಂಬರಿ ಅವರನ್ನು ನ್ಯಾಯಾಲಯವು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.
ಮುಂಬೈನಲ್ಲಿರುವ ವಿಕ್ರಮ್ ಅವರ ಕಚೇರಿಯಿಂದ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ನಡೆಸಬೇಕು. ಹೀಗಾಗಿ ಕಸ್ಟಡಿಗೆ ನೀಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಡಿಸೆಂಬರ್ 16ರಂದು ಮತ್ತೆ ವಿಚಾರಣೆಗೆ ಮತ್ತೆ ಹಾಜರಾಗುವಂತೆ ನ್ಯಾಯಾಲಯ ತಿಳಿಸಿದೆ.
ಭಟ್, ಅವರ ಪತ್ನಿ ಶ್ವೇತಾಂಬರಿ ಭಟ್ ಮತ್ತು ಇತರ ಆರು ಮಂದಿ, ಇಂದಿರಾ ಗ್ರೂಪ್ ಆಫ್ ಕಂಪನಿಗಳ ಸಂಸ್ಥಾಪಕ ಉದಯಪುರ ಮೂಲದ ಡಾ. ಅಜಯ್ ಮುರ್ದಿಯಾ ಅವರಿಗೆ ₹30 ಕೋಟಿ ವಂಚನೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ ಎಂದು ಅಧಿಕಾರಿ ಹೇಳಿದ್ದರು. ಈ ಪ್ರಕರಣದಲ್ಲಿ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ ಎಂದೂ ಅವರು ತಿಳಿಸಿದ್ದರು.
‘ಇಂದಿರಾ ಐವಿಎಫ್ ಆಸ್ಪತ್ರೆಯ ಮಾಲೀಕರಾದ ಮುರ್ದಿಯಾ, ತಮ್ಮ ದಿವಂಗತ ಪತ್ನಿಯ ಜೀವನ ಚರಿತ್ರೆ ಆಧರಿಸಿ ಸಿನಿಮಾ ಮಾಡಲು ಬಯಸಿದ್ದರು. ಈ ಚಿತ್ರದ ಮೂಲಕ ₹200 ಕೋಟಿ ಗಳಿಕೆಯ ಭರವಸೆಯನ್ನೂ ನಿರ್ಮಾಪಕರು ನೀಡಿದ್ದರು. ಆದರೆ, ಚಿತ್ರ ಸೆಟ್ಟೇರಲೇ ಇಲ್ಲ. ನಂತರ, ಮುರ್ದಿಯಾ ಉದಯಪುರದ ಭೋಪಾಲ್‌ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ವಂಚನೆ ಮತ್ತು ಇತರ ಅಪರಾಧಗಳ ಆರೋಪದಡಿ ಎಫ್‌ಐಆರ್ ದಾಖಲಿಸಲಾಗಿದೆ’ಎಂದು ಅಧಿಕಾರಿ ಹೇಳಿದ್ದರು.
ಉದಯಪುರ ಪೊಲೀಸರ ತಂಡವು ಭಾನುವಾರ ವಿಕ್ರಮ್ ಭಟ್ ಮತ್ತು ಶ್ವೇತಾಂಬರಿ ಅವರನ್ನು ಬಂಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.