
2021ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ವೇಳೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಸ್ವಾಗತಿಸಿದ ಪ್ರಧಾನಿ ನರೇಂದ್ರ ಮೋದಿ
ಕೃಪೆ: ಪಿಟಿಐ
ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಗುರುವಾರ ಸಂಜೆ ರಾಷ್ಟ್ರ ರಾಜಧಾನಿ ದೆಹಲಿಗೆ ಬಂದಿಳಿದಿದ್ದಾರೆ. ಇದು, ಕಳೆದ ನಾಲ್ಕು ವರ್ಷಗಳಲ್ಲಿ ಅವರು ಭಾರತಕ್ಕೆ ಕೈಗೊಂಡ ಎರಡನೇ ಭೇಟಿಯಾಗಿದೆ.
ಪುಟಿನ್ 2021ರಲ್ಲಿ ಬಂದಿದ್ದರಾದರೂ, ಕೋವಿಡ್ ಸಾಂಕ್ರಾಮಿಕದ ಕಾರಣ ಅವರ ಭೇಟಿ ಕೇವಲ ಐದೇ ತಾಸಿಗೆ ಮೊಟಕುಗೊಂಡಿತ್ತು. ಆಗ ಅವರು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ರಕ್ಷಣೆ, ಇಂಧನ, ದೀರ್ಘಕಾಲಿನ ಪಾಲುದಾರಿಕೆ ಕುರಿತು ಚರ್ಚಿಸಿದ್ದರು. ಅದಾದ ಮೂರೇ ತಿಂಗಳಿಗೆ, ರಷ್ಯಾ ಪಡೆಗಳು ಉಕ್ರೇನ್ ವಿರುದ್ಧ ಪೂರ್ಣ ಪ್ರಮಾಣದ ಸೇನಾ ಕಾರ್ಯಾಚರಣೆ ನಡೆಸಿದ್ದವು. ನಂತರದ್ದೆಲ್ಲ ಈಗ ಇತಿಹಾಸ.
2021ರಲ್ಲಿ ಏನೆಲ್ಲ ಆಗಿತ್ತು?
ಪುಟಿನ್ ಅವರು, 21ನೇ ಭಾರತ–ರಷ್ಯಾ ವಾರ್ಷಿಕ ಶೃಂಗದಲ್ಲಿ ಪಾಲ್ಗೊಳ್ಳುವ ಸಲುವಾಗಿ 2021ರ ಡಿಸೆಂಬರ್ 6ರಂದು ಭಾರತಕ್ಕೆ ಬಂದಿದ್ದರು. ಉನ್ನತ ಮಟ್ಟದ ನಿಯೋಗದೊಂದಿಗೆ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದರು. ಕೋವಿಡ್ ಸಮಯದಲ್ಲಿಯೂ, ತಮ್ಮ ವಿಶೇಷ ಕಾರ್ಯತಂತ್ರದ ಪಾಲುದಾರಿಕೆ ಸ್ಥಿರವಾಗಿರುವುದನ್ನು ಉಭಯ ನಾಯಕರು ಪ್ರತಿಪಾದಿಸಿದ್ದರು.
ರಕ್ಷಣೆ ಹಾಗೂ ಕಾರ್ಯತಂತ್ರದ ಸಹಕಾರ ನೀತಿಯನ್ನು ಪರಿಶೀಲಿಸಿದ್ದ ಅವರು, 2 + 2 ಸಂವಾದ ಆರಂಭಿಸುವ ಹಾಗೂ ಮಿಲಿಟರಿ ತಾಂತ್ರಿಕ ಸಹಕಾರ ವಿಸ್ತರಿಸುವ ಕುರಿತು ಮಾತುಕತೆ ನಡೆಸಿದ್ದರು.
ಹೂಡಿಕೆಗೆ ಉತ್ತೇಜನ ನೀಡುವುದು, ಅಂತರರಾಷ್ಟ್ರೀಯ ಉತ್ತರ–ದಕ್ಷಿಣ ಸಾರಿಗೆ ಕಾರಿಡಾರ್ (ಐಎನ್‌ಎಸ್‌ಟಿಸಿ) ಹಾಗೂ ಪ್ರಸ್ತಾವಿತ ಚೆನ್ನೈ–ವ್ಲಾದಿವೊಸ್ಟೊಕ್ ಸಾಗರ ಕಾರಿಡಾರ್ ಮೂಲಕ ಸಂಪರ್ಕ ವ್ಯವಸ್ಥೆ ಬಲಪಡಿಸುವುದು ಮತ್ತು ದೀರ್ಘಕಾಲಿನ ಬೆಳವಣಿಗೆ ಮಾರ್ಗಗಳನ್ನು ನಿರ್ಮಿಸುವ ಕುರಿತು ಚರ್ಚಿಸಿದ್ದರು.
2021ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ವೇಳೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಸ್ವಾಗತಿಸಿದ ಪ್ರಧಾನಿ ನರೇಂದ್ರ ಮೋದಿ
ಆಗಷ್ಟೇ ತಾಲಿಬಾನ್ ಆಡಳಿತ ಶುರುವಾಗಿದ್ದ ಅಫ್ಗಾನಿಸ್ತಾನ ಕುರಿತು ಮತ್ತು ಕೋವಿಡ್ ನಂತರದ ಕಾಲಘಟ್ಟದಲ್ಲಿ ಆರ್ಥಿಕತೆಗೆ ಚೇತರಿಕೆ ನೀಡುವ ವಿಚಾರವಾಗಿ ಮತ್ತು ಜಾಗತಿಕ ಮಟ್ಟದಲ್ಲಿ ಸಹಕಾರದ ಬಗ್ಗೆಯೂ ಮಾತುಕತೆ ನಡೆದಿತ್ತು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೇರಿದಂತೆ, ಇತರ ಜಾಗತಿಕ ವೇದಿಕೆಗಳಲ್ಲಿ ಒಮ್ಮತ ನಿಲುವು ಕಾಯ್ದುಕೊಳ್ಳುವುದಕ್ಕೂ ಉಭಯ ನಾಯಕರು ಸಮ್ಮತಿಸಿದ್ದರು. ವಾಣಿಜ್ಯ, ವಿಜ್ಞಾನ, ಇಂಧನ, ತಂತ್ರಜ್ಞಾನ, ಶಿಕ್ಷಣ ಮತ್ತು ಬಾಹ್ಯಾಕಾಶವನ್ನೂ ಒಳಗೊಂಡಂತೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಒಪ್ಪಂದಗಳಿಗೆ ಅಂಕಿತ ಹಾಕಿದ್ದರು.
ಭೇಟಿ ಮುಗಿಸಿ ಭಾರತದಿಂದ ಹೊರಡುವ ಮುನ್ನ ಪುಟಿನ್ ಅವರು, ಮರು ವರ್ಷ (2022ರಲ್ಲಿ) ರಷ್ಯಾದಲ್ಲಿ ನಿಗದಿಯಾಗಿದ್ದ ವಾರ್ಷಿಕ ಶೃಂಗಸಭೆಗೆ ಬರುವಂತೆ ಪ್ರಧಾನಿಗೆ ಆಹ್ವಾನ ನೀಡಿದ್ದರು.
ರಷ್ಯಾ 'ಇಂಧನ' ಬಲಕ್ಕೆ ಟ್ರಂಪ್ ಪೆಟ್ಟು!
ಉಕ್ರೇನ್ ವಿರುದ್ಧ ನಡೆಸುತ್ತಿರುವ ಕದನವನ್ನು ಖಂಡಿಸಿರುವ ಜಾಗತಿಕ ಸಮುದಾಯ ರಷ್ಯಾ ಮೇಲೆ ನಿರ್ಬಂಧ ವಿಧಿಸಿವೆ. ಹೀಗಾಗಿ, ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳುವ ಉದ್ದೇಶದಿಂದ ರಷ್ಯಾ, ರಿಯಾಯಿತಿ ದರದಲ್ಲಿ ತೈಲ ಪೂರೈಸಲಾರಂಭಿಸಿದೆ. ಅದರಂತೆ, ಹೆಚ್ಚಿನ ಪ್ರಮಾಣದ ತೈಲವನ್ನು ಭಾರತ ರಿಯಾಯಿತಿ ದರದಲ್ಲಿ ರಷ್ಯಾದಿಂದ ಖರೀದಿಸುತ್ತಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಈ ಬೆಳವಣಿಗೆ ಅಮೆರಿಕದ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ಅವರನ್ನು ಕೆರಳಿಸಿದೆ. 2021ರ ಜನವರಿಯಲ್ಲಿ ತಮ್ಮ ಎರಡನೇ ಅವಧಿಗೆ ಅಧಿಕಾರಕ್ಕೇರಿರುವ ಟ್ರಂಪ್, ರಷ್ಯಾ, ತೈಲ ರಫ್ತಿನಿಂದ ಬರುವ ಹಣವನ್ನು ಉಕ್ರೇನ್ ಯುದ್ಧಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ಅದೇ ಕಾರಣಕ್ಕೆ, ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸುವಂತೆ ಭಾರತವನ್ನು ಎಚ್ಚರಿಸಿದ್ದಾರೆ.
ಇದೀಗ, ಭಾರತದಿಂದ ಆಮದಾಗುವ ಸರಕುಗಳ ಮೇಲೆ ಪ್ರತಿಸುಂಕ ವಿಧಿಸುವ ಮೂಲಕ ಒತ್ತಡ ಹೇರುವ ಪ್ರಯತ್ನ ಮಾಡುತ್ತಿದ್ದಾರೆ ಟ್ರಂಪ್.
ಭಾರತ–ರಷ್ಯಾ ಶೃಂಗದ ಮೇಲೆ ಜಗತ್ತಿನ ಕಣ್ಣು
ಡಿಸೆಂಬರ್ 4 –5 ರಂದು ಭಾರತದಲ್ಲಿ ಇರುವ ಪುಟಿನ್ ಅವರು, ಮೋದಿ ಅವರೊಂದಿಗೆ 23ನೇ ಭಾರತ–ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
ಭಾರತದ ಪ್ರಮುಖ ರಕ್ಷಣಾ ಪಾಲುದಾರ ದೇಶವಾಗಿರುವ ರಷ್ಯಾ, ಇತ್ತೀಚೆಗೆ ಉಕ್ರೇನ್ ಯುದ್ಧದಲ್ಲಿ ಸಾಧಿಸಿರುವ ಮೇಲುಗೈನಿಂದ ಉತ್ಸಾಹದಲ್ಲಿದೆ. ಹಾಗಾಗಿ, ತನ್ನ ಮಧ್ಯಸ್ಥಿಕೆಯಲ್ಲಿ ಅಮೆರಿಕ ನಡೆಸಲು ಉದ್ದೇಶಿಸುತ್ತಿರುವ ಶಾಂತಿ ಮಾತುಕತೆ ಪ್ರಸ್ತಾವವನ್ನು ತಿರಸ್ಕರಿಸಿದೆ.
ಹೀಗಾಗಿ, ದೆಹಲಿಯಲ್ಲಿ ಏನೆಲ್ಲ ಮಾತುಕತೆಗಳು ನಡೆಯಲಿವೆ, ಯಾವೆಲ್ಲ ಮಿಲಿಟರಿ ಒಪ್ಪಂದಗಳು ಆಗಬಹುದು ಎಂಬುದರತ್ತ ಜಗತ್ತಿನ ಚಿತ್ತ ನೆಟ್ಟಿದೆ.
S-400 ವಾಯು ರಕ್ಷಣಾ ವ್ಯವಸ್ಥೆ ಹಾಗೂ ಹೊಸದಾಗಿ ಸುಖೋಯ್ Su–57 ಯುದ್ಧ ವಿಮಾನಗಳ ಖರೀದಿಗೆ ಭಾರತ ಆಸಕ್ತಿ ಹೊಂದಿದೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ರಾಷ್ಟ್ರಪತಿ ಭವನದಲ್ಲಿ 'ಗಾರ್ಡ್ ಆಫ್ ಹಾನರ್'
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.