ADVERTISEMENT

ಏನಾಗ್ತಿದೆ ಜಾರ್ಖಂಡ್‌ನಲ್ಲಿ? ಜೆ.ಪಿ. ನಡ್ಡಾ ಏಕಾಏಕಿ ರಾಜ್ಯಕ್ಕೆ ಬಂದದ್ದೇಕೆ?

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 7:03 IST
Last Updated 6 ಡಿಸೆಂಬರ್ 2025, 7:03 IST
<div class="paragraphs"><p>ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಇನ್ನೊಂದು ಚಿತ್ರದಲ್ಲಿ&nbsp;ಜಾರ್ಖಂಡ್‌ ಮುಖ್ಯಮಂತ್ರಿ, ಜೆಎಂಎಂ ನಾಯಕ ಹೇಮಂತ ಸೊರೇನ್‌ ಹಾಗೂ ಅವರ ಪತ್ನಿ, ಶಾಸಕಿ ಕಲ್ಪನಾ</p></div>

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಇನ್ನೊಂದು ಚಿತ್ರದಲ್ಲಿ ಜಾರ್ಖಂಡ್‌ ಮುಖ್ಯಮಂತ್ರಿ, ಜೆಎಂಎಂ ನಾಯಕ ಹೇಮಂತ ಸೊರೇನ್‌ ಹಾಗೂ ಅವರ ಪತ್ನಿ, ಶಾಸಕಿ ಕಲ್ಪನಾ

   

ಕೃಪೆ: ಪಿಟಿಐ

ನವದೆಹಲಿ: ಆಡಳಿತಾರೂಢ ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲಿದೆ ಎನ್ನುವ ವದಂತಿ ಹರಿದಾಡುತ್ತಿರುವ ಹೊತ್ತಿನಲ್ಲೇ, ಕೇಸರಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು, ಜಾರ್ಖಂಡ್‌ಗೆ ಡಿಢೀರ್‌ ಪ್ರವಾಸ ಕೈಗೊಂಡಿದ್ದಾರೆ. ಈ ಬೆಳವಣಿಗೆ, ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ADVERTISEMENT

ನಡ್ಡಾ ಅವರ ಎರಡು ದಿನಗಳ ಭೇಟಿ ಸಂದರ್ಭದಲ್ಲಿ, ದಿಯೋಘರ್‌ನಲ್ಲಿರುವ ಅತಿಥಿ ಗೃಹದಲ್ಲಿ ರಾಜ್ಯ ಬಿಜೆಪಿಯ ಕೋರ್‌ ಕಮಿಟಿ ಸಭೆಯನ್ನು ಶುಕ್ರವಾರ ಸಂಜೆ ನಡೆಸಲಿದ್ದಾರೆ ಎಂದು ಪಕ್ಷದ ವಕ್ತಾರ ಅನಿಲ್‌ ಬಲೂನಿ ಅವರು ಗುರುವಾರ ಹೇಳಿದ್ದರು.

ಈ ಸಭೆ ಹೊರತಾಗಿ ನಡ್ಡಾ ಅವರು ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಮರುದಿನ (ಶನಿವಾರ), ದಿಯೋನಗರದಲ್ಲಿರುವ ಬಾಬಾ ವೈದ್ಯನಾಥ್‌ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ ಎಂದು ತಿಳಿಸಿದ್ದರು.

ಜಾರ್ಖಂಡ್‌ ಮುಖ್ಯಮಂತ್ರಿ ಹಾಗೂ ಜೆಎಂಎಂ ನಾಯಕ ಹೇಮಂತ ಸೊರೇನ್‌ ಅವರು ಇದೇ ವಾರದ ಆರಂಭದಲ್ಲಿ ದೆಹಲಿಗೆ ಏಕಾಏಕಿ ಭೇಟಿ ನೀಡಿದ್ದರು. ಇದರಿಂದಾಗಿ ಅವರು, ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ'ದಿಂದ ಹೊರನಡೆದು, ಎನ್‌ಡಿಎ ಬಣ ಸೇರಬಹುದು ಎಂಬ ಊಹಾಪೋಹಗಳು ಎದ್ದಿವೆ.

ಹೇಮಂತ್‌ ಹಾಗೂ ಅವರ ಪತ್ನಿ, ಶಾಸಕಿ ಕಲ್ಪನಾ ಅವರು ಎನ್‌ಡಿಎ ಬಣ ಸೇರುವ ಕುರಿತು, ಹೊಸ ಸರ್ಕಾರ ರಚಿಸುವ ವಿಚಾರವಾಗಿ ಬಿಜೆಪಿ ನಾಯಕರೊಂದಿಗೆ ಮಾತುಕತೆ ಮಾತುಕತೆ ನಡೆಸುತ್ತಿದ್ದಾರೆ ಎಂಬುದಾಗಿಯೂ ಹೇಳಲಾಗುತ್ತಿದೆ. ಆದರೆ, ಅದಕ್ಕೆ ಆಧಾರವಿಲ್ಲ.

2024ರಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಜೊತೆ ಮಾಡಿಕೊಂಡ ಸೀಟು ಹಂಚಿಕೆ ಬಗ್ಗೆ ಜೆಎಂಎಂನ ಹಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದೇ, ಈ ಎಲ್ಲ ಊಹಾಪೋಹಗಳಿಗೆ ರೆಕ್ಕೆಪುಕ್ಕ ಕಟ್ಟಿದೆ ಎನ್ನಲಾಗಿದೆ.

ಹೊಸ ಸರ್ಕಾರ ಸೇರಿಕೊಳ್ಳಲು ಕಾಂಗ್ರೆಸ್‌ನ ಕೆಲವು ಶಾಸಕರೂ ಉತ್ಸುಕರಾಗಿದ್ದಾರೆ ಎಂಬ ಮತ್ತೊಂದು ವದಂತಿಯೂ ಚಾಲ್ತಿಯಲ್ಲಿದೆ.

ಬಿಹಾರದಲ್ಲಿ ಬುಡಕಟ್ಟು ಸಮುದಾಯದ ಪ್ರಾಬಲ್ಯವಿರುವ ಕಡೆಗಳಲ್ಲಿ ಸ್ಪರ್ಧಿಸಲು ಜೆಎಂಎಂ ಬಯಸಿತ್ತು. ಆದರೆ, ಇಂಡಿಯಾ ಮೈತ್ರಿಕೂಟದಲ್ಲಿನ ಸೀಟು ಹಂಚಿಕೆ ಮಾತುಕತೆಗಳು ಫಲಪ್ರದವಾಗಲಿಲ್ಲ ಎಂಬುದು, ಜೆಎಂಎಂ ಅಸಮಾಧಾನಕ್ಕೆ ಕಾರಣವಾಗಿದೆ.

81 ಸದಸ್ಯ ಬಲವಿರುವ ಜಾರ್ಖಂಡ್‌ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು 41 ಸ್ಥಾನಗಳ ಬಹುಮತ ಬೇಕಿದೆ. ಸದ್ಯ 34 ಕ್ಷೇತ್ರಗಳನ್ನು ಹೊಂದಿರುವ ಜೆಎಂಎಂಗೆ, ಕಾಂಗ್ರೆಸ್‌ನ 16 ಶಾಸಕರು ಬೆಂಬಲ ಸೂಚಿಸಿದ್ದಾರೆ. 4 ಸ್ಥಾನಗಳನ್ನು ಹೊಂದಿರುವ ಆರ್‌ಜೆಡಿ, 2 ಸ್ಥಾನ ಪಡೆದಿರುವ ಸಿಪಿಐ–ಎಂಎಲ್‌ ಬೆಂಬಲವೂ ಸರ್ಕಾರಕ್ಕೆ ಇದೆ.

ಮತ್ತೊಂದು ಕಡೆ ಬಿಜೆಪಿಯಲ್ಲಿ, 21 ಶಾಸಕರಿದ್ದಾರೆ. ಎನ್‌ಡಿಎ ಬಣದಲ್ಲಿರುವ ಎಲ್‌ಜೆಪಿ ಮತ್ತು ಜೆಡಿಯು ತಲಾ ಒಬ್ಬ ಶಾಸಕರನ್ನು ಹೊಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.