ADVERTISEMENT

WAVES: ಇಂದಿನಿಂದ ಶ್ರವಣ–ದೃಶ್ಯ ಮನರಂಜನೆ ಶೃಂಗ

ದೇಸಿ ‘ಕಂಟೆಂಟ್‘ ಸೃಷ್ಟಿಕರ್ತರ ಕನಸಿಗೆ ರೆಕ್ಕೆ–ಪುಕ್ಕ | ಮನರಂಜನಾ ಮಾಧ್ಯಮದ ನವೋದ್ಯಮದವರಿಗೆ ಮಾರುಕಟ್ಟೆ ದಾರಿ

ವಿಶಾಖ ಎನ್.
Published 30 ಏಪ್ರಿಲ್ 2025, 23:52 IST
Last Updated 30 ಏಪ್ರಿಲ್ 2025, 23:52 IST
‘ವೇವ್ಸ್’ ಶೃಂಗ ನಡೆಯಲಿರುವ ಜಿಯೊ ವರ್ಲ್ಡ್‌ ಸೆಂಟರ್‌ನಲ್ಲಿನ ಕಲಾಕೃತಿ  –‍ಪ್ರಜಾವಾಣಿ ಚಿತ್ರ
‘ವೇವ್ಸ್’ ಶೃಂಗ ನಡೆಯಲಿರುವ ಜಿಯೊ ವರ್ಲ್ಡ್‌ ಸೆಂಟರ್‌ನಲ್ಲಿನ ಕಲಾಕೃತಿ  –‍ಪ್ರಜಾವಾಣಿ ಚಿತ್ರ   

ಮುಂಬೈ: ಭಾರತ ಸರ್ಕಾರವು ಆಯೋಜಿಸಿರುವ ‘ಜಾಗತಿಕ ಶ್ರವಣ–ದೃಶ್ಯ ಮನರಂಜನೆ ಶೃಂಗ–2025’ (ವೇವ್ಸ್‌)ಗೆ ಇಲ್ಲಿನ ಜಿಯೊ ವರ್ಲ್ಡ್‌ ಸೆಂಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಚಾಲನೆ ನೀಡಲಿದ್ದಾರೆ. 

ಮೇ 4ರವರೆಗೆ ನಾಲ್ಕು ದಿನ ಈ ಶೃಂಗಸಭೆ ನಡೆಯಲಿದೆ. ‘ಭಾರತದಲ್ಲಿ ಸೃಷ್ಟಿಸಿ, ಪ್ರಪಂಚಕ್ಕಾಗಿ ಸೃಷ್ಟಿಸಿ’ ಎಂಬ ಕಿವಿಮಾತನ್ನು ಅರುಹುವ  ಈ ಶೃಂಗವು ‘ಕಂಟೆಂಟ್’ಗೆ ಮಾರುಕಟ್ಟೆ ಕಲ್ಪಿಸಬಲ್ಲ ಅವಕಾಶಕ್ಕೆ ಕಿಟಕಿಯಂತಾಗಲಿದೆ. ‘ಕಂಟೆಂಟ್ ಸೃಷ್ಟಿಕರ್ತರ ನಡುವಿನ ಸಂಪರ್ಕ ಸೇತು, ಹಲವು ದೇಶಗಳಿಗೆ ಸಂಪರ್ಕ ಸೇತು’ ಎಂಬ ಧ್ಯೇಯವಾಕ್ಯ ಇದರದ್ದು.

ಕಂಟೆಂಟ್‌ ಸೃಷ್ಟಿಕರ್ತರು, ನವೋದ್ಯಮಗಳು, ಡಿಜಿಟಲ್ ಆವಿಷ್ಕಾರಗಳು, ಉದ್ಯಮದ ದಿಗ್ಗಜರು, ವಿಶ್ವದ ವಿವಿಧೆಡೆಯ ನೀತಿ ನಿರೂಪಕರು... ಎಲ್ಲರನ್ನೂ ಒಂದೇ ಸೂರಿನಡಿ ತಂದು, ಶೃಂಗವು ಸಂವಾದಕ್ಕೆ ಅವಕಾಶ ಕಲ್ಪಿಸಲಿದೆ.

ADVERTISEMENT

ಚಲನಚಿತ್ರಗಳು, ಒಟಿಟಿ ವೇದಿಕೆಗಳು, ಗೇಮಿಂಗ್, ಕಾಮಿಕ್ಸ್‌, ಡಿಜಿಟಲ್ ಮಾಧ್ಯಮ, ಹೊಸಕಾಲದ ತಂತ್ರಜ್ಞಾನ ಎಲ್ಲವುಗಳಲ್ಲಿ ಭಾರತದ ಸಾಧನೆಯನ್ನು ಬಿಂಬಿಸಲು ‘ಭಾರತ್ ಪೆವಿಲಿಯನ್’ ಎಂಬ ವೇದಿಕೆಯನ್ನೂ ಒದಗಿಸಲಾಗಿದೆ. 

2029ರ ಹೊತ್ತಿಗೆ ಭಾರತದ ಮನರಂಜನಾ ಉದ್ಯಮದ ಮಾರುಕಟ್ಟೆಯನ್ನು 50 ಶತಕೋಟಿ ಡಾಲರ್‌ಗೆ (ಸುಮಾರು 4 ಲಕ್ಷದ 23 ಸಾವಿರ ಕೋಟಿ ರೂಪಾಯಿ) ವಿಸ್ತರಿಸುವ ಗುರಿಯನ್ನು ‘ವೇವ್ಸ್‌’ ಹೊಂದಿದೆ. 

ಜಾಗತಿಕ ಮಾಧ್ಯಮ ಸಂವಾದ(ಜಿಎಂಡಿ)ಯನ್ನು ಇದೇ ಮೊದಲ ಬಾರಿಗೆ ಆಯೋಜಿಸಲಾಗುತ್ತಿದ್ದು, ಇದರಲ್ಲಿ 25 ದೇಶದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ‘ವೇವ್ಸ್‌ ಬಜಾರ್’ ಎಂಬ ಚಾವಡಿ ವೇದಿಕೆಯನ್ನು ಕಲ್ಪಿಸಲಾಗಿದ್ದು, ಅಲ್ಲಿ ಕಂಟೆಂಟ್ ಸೃಷ್ಟಿಕರ್ತರು ತಮ್ಮ ಸೃಜನಶೀಲತೆಗೆ ತಕ್ಕ ಖರೀದಿದಾರರನ್ನು ಸಂಪರ್ಕಿಸಬಹುದಾಗಿದೆ. 6,100 ಖರೀದಿದಾರರನ್ನು ‘ಕಂಟೆಂಟ್‌’ ಮಾರುಕಟ್ಟೆಗಾಗಿ ಹುಡುಕಾಡುತ್ತಿರುವ 5,200 ಮಂದಿ ಸಂಧಿಸುವ ಅವಕಾಶ ಇದಾಗಿದೆ. 2,100 ಪ್ರಾಜೆಕ್ಟ್‌ಗಳು ಇಲ್ಲಿ ಖರೀದಿದಾರರ ಗಮನಸೆಳೆಯಲು ಕಾದಿವೆ. 

ಶೃಂಗವನ್ನು ಉದ್ಘಾಟಿಸುವುದಷ್ಟೆ ಅಲ್ಲದೆ ‘ಕಂಟೆಂಟ್’ ಸೃಷ್ಟಿಕರ್ತರ ಜೊತೆ ಪ್ರಧಾನಿ ಮೋದಿ ಮಾತುಕತೆ ನಡೆಸಲಿದ್ದಾರೆ. ಕೆಲವು ಕಂಪನಿಗಳ ಸಿಇಒಗಳೊಟ್ಟಿಗೆ ಸಂವಾದದಲ್ಲೂ ತೊಡಗಲಿದ್ದಾರೆ.

ಸುಮಾರು 10 ಸಾವಿರ ಪ್ರತಿನಿಧಿಗಳು ‘ವೇವ್ಸ್‌’ಗೆ ಸಾಕ್ಷಿಯಾಗುವ ನಿರೀಕ್ಷೆ ಆಯೋಜಕರಿಗೆ ಇದೆ. 90ಕ್ಕೂ ಹೆಚ್ಚು ದೇಶಗಳಿಂದ ಪ್ರತಿನಿಧಿಗಳು, 300ಕ್ಕೂ ಹೆಚ್ಚು ಕಂಪನಿಗಳು, 350ಕ್ಕೂ ಹೆಚ್ಚು ನವೋದ್ಯಮಗಳು ಪಾಲ್ಗೊಳ್ಳಲಿವೆ.

‘ಕಂಟೆಂಟ್’ಗೆ ಸಂಬಂಧಿಸಿದಂತೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಗಿದ್ದು, ವಿಜೇತರಿಗೆ ಬಹುಮಾನಗಳನ್ನು ಶೃಂಗದಲ್ಲಿ ಘೋಷಿಸಲಾಗುವುದು.

ತಾರಾ ಆಕರ್ಷಣೆ

ಎಂ.ಎಂ. ಕೀರವಾಣಿ ಅವರ ತಂಡದ ಸಂಗೀತ ಕಾರ್ಯಕ್ರಮವು ‘ವೇವ್ಸ್’ ಶೃಂಗದ ಆಕರ್ಷಣೆಗಳಲ್ಲಿ ಒಂದು. ದೃಷ್ಟಿದೋಷ ಇರುವವರೇ ಆರ್ಕೆಸ್ಟ್ರಾ ನಡೆಸಿಕೊಡಲಿದ್ದಾರೆ. ಮುಕೇಶ್ ಅಂಬಾನಿ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ನಟರಾದ ರಜನಿಕಾಂತ್ ಅಮಿತಾಭ್ ಬಚ್ಚನ್ ಮೋಹನ್‌ ಲಾಲ್ ಚಿರಂಜೀವಿ ಅಲ್ಲು ಅರ್ಜುನ್ ಅಕ್ಷಯ್‌ ಕುಮಾರ್ ನಟಿ ಆಲಿಯಾ ಭಟ್ ನಿರ್ದೇಶಕ ರಾಜಮೌಳಿ ಒಳಗೊಂಡಂತೆ ಪ್ರಮುಖರು ಶೃಂಗಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.