
ನವದೆಹಲಿ: ಅಶ್ಲೀಲ ಹಾಗೂ ಕಾನೂನುಬಾಹಿರ ವಿಷಯ ವಸ್ತುಗಳ ಹಂಚಿಕೆಗೆ ಸಂಬಂಧಿಸಿ ಉದ್ಯಮಿ ಇಲಾನ್ ಮಸ್ಕ್ ಒಡೆತನದ ಸಾಮಾಜಿಕ ಮಾಧ್ಯಮ ‘ಎಕ್ಸ್’ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಭಾರತದ ಕಾನೂನುಗಳನ್ನು ಪಾಲಿಸುವುದಾಗಿ ಭರವಸೆ ನೀಡಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿದೆ.
3,500ಕ್ಕೂ ಹೆಚ್ಚು ಎಲ್ಲ ಬಗೆಯ ಅಶ್ಲೀಲ ಹಾಗೂ ಕಾನೂನುಬಾಹಿರ ವಿಷಯ ವಸ್ತುಗಳನ್ನು ವೇದಿಕೆಯಿಂದ ತೆಗೆದುಹಾಕಲಾಗಿದೆ. ಜತೆಗೆ, 600ಕ್ಕೂ ಹೆಚ್ಚು ಖಾತೆಗಳನ್ನು ಅಳಿಸಿ ಹಾಕಿದ್ದು, ಭವಿಷ್ಯದಲ್ಲಿ ವೇದಿಕೆಯು ಅಶ್ಲೀಲ ವಿಷಯ ವಸ್ತುಗಳನ್ನು ಅನುಮತಿಸುವುದಿಲ್ಲ ಎಂದು ‘ಎಕ್ಸ್’ ಸ್ಪಷ್ಟನೆ ನೀಡಿರುವುದಾಗಿ ವರದಿಯಾಗಿದೆ.
ಎಲ್ಲ ಬಗೆಯ ಅಶ್ಲೀಲ ಹಾಗೂ ಕಾನೂನುಬಾಹಿರ ವಿಷಯ ವಸ್ತುಗಳನ್ನು ವೇದಿಕೆಯಿಂದ ತಕ್ಷಣವೇ ತೆಗೆದು ಹಾಕುವಂತೆ ಸಾಮಾಜಿಕ ಮಾಧ್ಯಮ ‘ಎಕ್ಸ್’ಗೆ ಕೇಂದ್ರ ಸರ್ಕಾರ ಜನವರಿ 2ರಂದು ಸೂಚಿಸಿತ್ತು.
ವಿಶೇಷವಾಗಿ, ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಅ್ಯಪ್ ‘ಗ್ರೋಕ್’ನಿಂದ ರೂಪಿಸಿರುವ ಇಂತಹ ವಿಷಯ ವಸ್ತುಗಳನ್ನು ಕೂಡಲೇ ತೆಗೆದು ಹಾಕಬೇಕು. ಇಲ್ಲದಿದ್ದರೆ ಕಾನೂನು ಪ್ರಕಾರ ಕ್ರಮ ಎದುರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು.
‘ಮಾಹಿತಿ ತಂತ್ರಜ್ಞಾನ ಕಾಯ್ದೆ ನಿಯಮಗಳ ಪಾಲನೆ ಮಾಡುವಲ್ಲಿ ವೇದಿಕೆ ವಿಫಲವಾಗಿದೆ. ನಿಯಮಗಳನ್ನು ಉಲ್ಲಂಘಿಸಿ ರೂಪಿಸಲಾದ ಇಲ್ಲವೇ ಈಗಾಗಲೇ ರೂಪಿಸಿ ಪ್ರಸಾರ ಮಾಡಲಾದ ಎಲ್ಲ ಅಶ್ಲೀಲ ವಿಷಯವಸ್ತುಗಳನ್ನು ಕೂಡಲೇ ವೇದಿಕೆಯಿಂದ ತೆಗೆದು ಹಾಕಬೇಕು ಅಥವಾ ಬಳಕೆದಾರರಿಗೆ ಅವುಗಳು ಸಿಗದಂತೆ ಕ್ರಮ ಕೈಗೊಳ್ಳಬೇಕು. ಇಂತಹ ಕ್ರಮ ಕೈಗೊಂಡಿದ್ದಕ್ಕೆ ಸಂಬಂಧಿಸಿದ ಯಾವುದೇ ಸಾಕ್ಷ್ಯ ನಾಶವಾಗದಂತೆ ನೋಡಿಕೊಳ್ಳಬೇಕು’ ಎಂದೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.