ADVERTISEMENT

ಅಕ್ರಮ ಹಣ ವರ್ಗಾವಣೆ: ಮಾರ್ಚ್ 11ರವರೆಗೂ ಇಡಿ ವಶಕ್ಕೆ ಯೆಸ್ ಬ್ಯಾಂಕ್ ಸ್ಥಾಪಕ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 9:11 IST
Last Updated 8 ಮಾರ್ಚ್ 2020, 9:11 IST
   

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಅವರನ್ನು ಮುಂಬೈನ ವಿಶೇಷ ರಜಾ ನ್ಯಾಯಾಲಯವು ಮಾರ್ಚ್ 11ರವರೆಗೂ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿ ಆದೇಶಿಸಿದೆ.

ದೀವಾನ್ ಹೌಸಿಂಗ್ ಫಿನಾನ್ಸ್ ಕಾರ್ಪೊರೇಷನ್ ಲಿಮಿಟೆಡ್‌ಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಕಪೂರ್ ಅವರನ್ನು 30 ಗಂಟೆಗಳ ವಿಚಾರಣೆ ನಡೆಸಿದ್ದ ಜಾರಿನಿರ್ದೇಶನಾಲಯ ಭಾನುವಾರ ಮುಂಜಾನೆ ಬಂಧಿಸಿತ್ತು.

ರಾಣಾ ಕಪೂರ್ ಅವರ ವೋರ್ಲಿಯಲ್ಲಿರುವ ಸಮುದ್ರ ಮಹಲ್ ನಿವಾಸದಲ್ಲಿ ಶನಿವಾರವೂ ಶೋಧ ಕಾರ್ಯವನ್ನು ಮುಂದುವರಿಸಿದ್ದ ಇಡಿ, ಯೆಸ್ ಬ್ಯಾಂಕ್ ಸ್ಥಾಪಕ ಮತ್ತು ಅವರ ಇಬ್ಬರು ಪುತ್ರಿಯರ ನಿಯಂತ್ರಣದಲ್ಲಿರುವ ಡಮ್ಮಿ ಕಂಪನಿಯಾದ ಡೊಯಿಟ್ ಅರ್ಬನ್ ವೆಂಚರ್ಸ್ ಕಂಪನಿಯು ದೀವಾನ್ ಹೌಸಿಂಗ್ ಫೈನಾನ್ಶಿಯಲ್ ಕಾರ್ಪೊರೇಷನ್ ಲಿಮಿಟೆಡ್‌ನಿಂದ ಹಗರಣ ಭಾಗವಾಗಿ ₹600 ಕೋಟಿ ಕಿಕ್‌ಬ್ಯಾಕ್ ಪಡೆದಿರುವ ಕುರಿತು ತನಿಖೆ ಕೈಗೊಂಡಿತ್ತು. ಡಿಎಚ್‌ಎಫ್‌ಎಲ್‌ಗೆ ಸಾಲವಾಗಿ ₹4,450 ಕೋಟಿಗಳನ್ನು ಯೆಲ್ ಬ್ಯಾಂಕ್ ಮಂಜೂರು ಮಾಡಿತ್ತು. ಈ ಸಾಲವು ಮರುಪಾವತಿಯಾಗದ ಹಿನ್ನೆಲೆಯಲ್ಲಿ ಯೆಸ್‌ಬ್ಯಾಂಕ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು.

ಡಿಎಚ್‌ಎಫ್‌ಎಲ್‌ಗೆ ₹3,750 ಕೋಟಿ ಮತ್ತು ಅದರ ನಿಯಂತ್ರಣದಲ್ಲಿರುವ ಸಂಸ್ಥೆಯಾದ ಆರ್‌ಕೆಡಬ್ಲ್ಯೂ ಡೆವಲಪರ್‌ಗಳಿಗೆ ₹750 ಕೋಟಿ ಸಾಲವನ್ನು ಯೆಸ್ ಬ್ಯಾಂಕ್ ನೀಡಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಸಾಲ ಮರುಪಾವತಿ ಮಾಡಿಲ್ಲದಿದ್ದಾಗಲೂ ಯೆಸ್ ಬ್ಯಾಂಕ್ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ಪ್ರಕರಣದಲ್ಲಿ ಕಪೂರ್ ಮತ್ತು ಡೊಯಿಟ್ ಅರ್ಬನ್ ವೆಂಚರ್ಸ್ ಕಂಪನಿಯು ನಿರ್ದೇಶಕರೂ ಆಗಿರುವ ಅವರ ಇಬ್ಬರು ಹೆಣ್ಣುಮಕ್ಕಳು ಡಿಎಚ್‌ಎಫ್‌ಎಲ್‌ನಿಂದ ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.