ಅಥರ್ವ ಚತುರ್ವೇದಿ
ಎಕ್ಸ್ ಚಿತ್ರ
ಜಬಲ್ಪುರ: ಶುಕ್ರವಾರ ಮಧ್ಯಾಹ್ನದ ಹೊತ್ತು. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರಿದ್ದ ಪೀಠದಲ್ಲಿ ವಿಚಾರಣೆ ಆರಂಭವಾಗಿತ್ತು. ಗದ್ದಲದ ನಡುವೆ ‘ನನಗೆ 10 ನಿಮಿಷ ಕೊಡಿ’ ಎಂಬ ಕೂಗು ಎಲ್ಲರ ಕಿವಿ ಅರಳುವಂತೆ ಮಾಡಿತ್ತು. ಅದು ಯಾವುದೇ ಹಿರಿಯ ವಕೀಲರ ಧ್ವನಿಯಾಗಿರಲಿಲ್ಲ, ಬದಲಿಗೆ ವೈದ್ಯನಾಗಬೇಕೆಂಬ ಕನಸು ಹೊಂದಿದ್ದ 19ರ ಯುವಕ ಅಥರ್ವ ಚತುರ್ವೇದಿಯದ್ದಾಗಿತ್ತು.
ಮಧ್ಯಪ್ರದೇಶದ ಜಬಲ್ಪುರದಲ್ಲಿ 12ನೇ ತರಗತಿ ಪೂರ್ಣಗೊಳಿಸಿರುವ ಅಥರ್ವನಿಗೆ ಒಂದೇ ಕನಸು, ತಾನು ವೈದ್ಯನಾಗಬೇಕೆಂದು. ಆ ನಿಟ್ಟಿನಲ್ಲಿ ಆತನ ಹೋರಾಟದ ಆ ಕೊನೆಯ 10 ನಿಮಿಷಗಳಲ್ಲಿ ನ್ಯಾಯ ಆತನ ಪರವಾಯಿತು.
ಸಂವಿಧಾನದ 142ನೇ ವಿಧಿಯಡಿಯ ಪರಮಾಧಿಕಾರವನ್ನು ಬಳಸಿ ರಾಷ್ಟ್ರೀಯ ವೈದ್ಯಕೀಯ ಸಮಿತಿ ಮತ್ತು ಮಧ್ಯಪ್ರದೇಶ ಸರ್ಕಾರಕ್ಕೆ ಆದೇಶ ನೀಡಿರುವ ಸುಪ್ರೀಂ ಕೋರ್ಟ್, ನೀಟ್ ಪರೀಕ್ಷೆ ಪಾಸಾದ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಈ ವಿದ್ಯಾರ್ಥಿಗೆ ಎಂಬಿಬಿಎಸ್ ಕೋರ್ಸ್‌ಗೆ ಸೀಟು ನೀಡುವಂತೆ ಆದೇಶಿಸಿದೆ.
ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಇರುವ ಎರಡೂ ಪ್ರವೇಶ ಪರೀಕ್ಷೆಯನ್ನು ಅಥರ್ವ ಪಾಸ್ ಮಾಡಿದ್ದಾನೆ. ವೈದ್ಯನಾಗಲೇಬೇಕು ಎಂಬ ಹಂಬಲ ಹೊಂದಿರುವ ಅಥರ್ವ ಎರಡು ಬಾರಿ ನೀಟ್ ಪರೀಕ್ಷೆ ಎದುರಿಸಿದ್ದ. ಎರಡೂ ಬಾರಿ ಈತ 530 ಅಂಕ ಗಳಿಸಿದ್ದ. ಆದರೆ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನಿಗದಿಪಡಿಸದ ಕಾರಣ ಎರಡೂ ಬಾರಿ ಎಂಬಿಬಿಎಸ್ ಸೀಟು ಗಿಟ್ಟಿಸಿಕೊಳ್ಳುವಲ್ಲಿ ಅಥರ್ವ ವಿಫಲನಾಗಿದ್ದ.
ವೈದ್ಯನಾಗಲೇಬೇಕೆಂದು ಹಠ ತೊಟ್ಟಿದ್ದ ಅಥರ್ವ ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ. ಜಬಲ್ಪುರ ಹೈಕೋರ್ಟ್‌ನಲ್ಲಿ ತನ್ನ ಪ್ರಕರಣವನ್ನು ತಾನೇ ವಾದ ಮಾಡುತ್ತಿದ್ದ ಅಥರ್ವನ ಉತ್ಸಾಹ ಕಂಡ ನ್ಯಾಯಮೂರ್ತಿ ಅವರು, ‘ನೀನು ವೈದ್ಯನಾಗುವ ಬದಲು ವಕೀಲನಾಗು’ ಎಂದು ಸಲಹೆ ನೀಡಿದ್ದನ್ನು ಎನ್‌ಡಿಟಿವಿ ವರದಿ ಮಾಡಿದೆ.
ತನ್ನ ಗುರಿಯನ್ನು ಬದಲಿಸದ ಅಥರ್ವ ತನ್ನ ಕಾನೂನು ಸಂಘರ್ಷವನ್ನು ಮುಂದುವರಿಸಿದ್ದ. ಅಥರ್ವನಿಗೆ ನೆರವಾಗಿದ್ದು ವಕೀಲರಾಗಿರುವ ಅವನ ತಂದೆ ಮನೋಜ್ ಚತುರ್ವೇದಿ. ಆದರೆ ಅವರು ಎಂದೂ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಾಡಿರಲಿಲ್ಲ. ಕೋವಿಡ್ ಸಂದರ್ಭದಲ್ಲಿ ಎಲ್ಲವೂ ವರ್ಚುವಲ್ ಆಗಿದ್ದರಿಂದ, ಮನೆಯಲ್ಲಿ ನಿತ್ಯವೂ ನಾನು ವಾದ ಮಾಡುವುದನ್ನು ನೋಡಿಕೊಂಡು ಅಥರ್ವ ಬೆಳೆದಿದ್ದಾನೆ. ಯಾವಾಗ ಮಾತನಾಡಬೇಕು, ಯಾವಾಗ ಮೌನವಾಗಬೇಕು ಎಂಬ ಕೋರ್ಟ್ ರೂಂನ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಂಡಿದ್ದಾನೆ. ಜತೆಗೆ ಒಂದಷ್ಟು ಕಾನೂನು ಭಾಷೆಗಳೂ ಪರಿಚಿತವಾಗಿವೆ ಎಂದು ಮನೋಜ್ ಮಾಹಿತಿ ಹಂಚಿಕೊಂಡಿರುವುದು ವರದಿಯಾಗಿದೆ.
ತನ್ನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಅಂತರ್ಜಾಲ ತಾಣದಲ್ಲಿರುವ ಸ್ಪೆಷಲ್ ಲೀವ್ ಪಿಟಿಷನ್ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡ ಅಥರ್ವ, ತನ್ನ ವಾದಕ್ಕೆ ಅಗತ್ಯವಿರುವ ಹಿಂದಿನ ತೀರ್ಪುಗಳ ಅಧ್ಯಯನ ನಡೆಸಿದ. ಜ. 6ರಂದು ಆನ್‌ಲೈನ್ ಮೂಲಕವೇ ಅರ್ಜಿಯನ್ನು ಹಾಕಿದ್ದ.
ಈತನ ವಾದವನ್ನು ಇನ್ನಷ್ಟು ಪರಿಣಾಮಕಾರಿಯನ್ನಾಗಿಸಲು ಅಥರ್ವ ಅವರ ತಂದೆ ಮನೋಜ್ ಅವರು ಮೈತ್ರಾ ಹಾಗೂ ಭಾರತಿ ಎಂಬ ಇಬ್ಬರು ಶಿಕ್ಷಕರ ನೆರವನ್ನು ಕೊಡಿಸಿದರು. ಬಳಸುವ ಭಾಷೆ ಮತ್ತು ಆತ್ಮಸ್ಥೈರ್ಯಕ್ಕೆ ಇವರು ನೆರವಾಗಿದ್ದಾರೆ.
ಅಥರ್ವನ ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್‌ನ ಪೀಠ, ‘ಎರಡು ಬಾರಿ ನೀಟ್ ಪಾಸಾದ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಯುವಕನಿಗೆ ನೀತಿಯಲ್ಲಿನ ಲೋಪದಿಂದ ಸೀಟು ಲಭಿಸಿಲ್ಲ’ ಎಂಬುದನ್ನು ದಾಖಲಿಸಿತು.
ಹತ್ತು ನಿಮಿಷಗಳ ಮೌಖಿಕ ವಾದದ ನಂತರ, ‘ಖಾಸಗಿ ಕಾಲೇಜುಗಳಲ್ಲಿ ಮೀಸಲಾತಿ ಅನುಷ್ಠಾನಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದ ಮಾತ್ರಕ್ಕೆ ಪ್ರತಿಭಾವಂತ ವಿದ್ಯಾರ್ಥಿಗೆ ಸೀಟು ನಿರಾಕರಿಸಲಾಗದು’ ಎಂದ ಪೀಠ, ಅಥರ್ವನಿಗೆ ಸೀಟು ನೀಡುವಂತೆ ನಿರ್ದೇಶಿಸಿತು.
ವೈದ್ಯನಾಗುವ ಹಂಬಲ ಹೊಂದಿದ ಯುವಕ ಅಥರ್ವ ವೈದ್ಯಕೀಯ ಕೋರ್ಸ್‌ಗೆ ಸೇರುವ ಮೊದಲೇ ಅನ್ಯಾಯವನ್ನು ವಾಸಿ ಮಾಡುವುದು ಹೇಗೆ ಎಂಬುದನ್ನು ಕಲಿತ ಎಂದು ಹಲವರು ಹುಬ್ಬೇರಿಸಿದ್ದಾರೆ.