
ನವದೆಹಲಿ: 2024–25ರ ಶೈಕ್ಷಣಿಕ ಸಾಲಿನಲ್ಲಿ ದೇಶಾದಾದ್ಯಂತ ಸುಮಾರು 8 ಸಾವಿರ ಶಾಲೆಗಳಲ್ಲಿ ಶೂನ್ಯ ದಾಖಲಾತಿ ಇದೆ. ಈ ಪೈಕಿ ಪಶ್ಚಿಮ ಬಂಗಾಳ ಮೊದಲ ಸ್ಥಾನದಲ್ಲಿದ್ದು, ತೆಲಂಗಾಣ ಎರಡನೇ ಸ್ಥಾನದಲ್ಲದೆ ಎಂದು ಅಧೀಕೃತ ದತ್ತಾಂಶದಿಂದ ಗೊತ್ತಾಗಿದೆ.
ಶೂನ್ಯ ದಾಖಲಾತಿ ಇರುವ ಶಾಲೆಗಳಲ್ಲಿ 20,817 ಶಿಕ್ಷಕರು ಇದ್ದಾರೆ. ಇದರಲ್ಲಿ ಪಶ್ಚಿಮ ಬಂಗಾಳದ ಪಾಲು ಅಧಿಕವಾಗಿದ್ದು 17,965 ಇಂತಹ ಶಿಕ್ಷರಿದ್ದಾರೆ. ಅಲ್ಲಿ ಶೂನ್ಯ ದಾಖಲಾತಿ ಇರುವ 3,812 ಶಾಲೆಗಳಿವೆ.
ಶಿಕ್ಷಣ ಇಲಾಖೆಯ ದತ್ತಾಂಶ ಪ್ರಕಾರ ದೇಶದ 7,993 ಶಾಲೆಗಳಲ್ಲಿ ಶೂನ್ಯ ದಾಖಲಾತಿ ಇದ್ದು, ಕಳೆದ ವರ್ಷ ಈ ಸಂಖ್ಯೆ 12,954 ಇತ್ತು.
ಏತನ್ಮಧ್ಯೆ ಹರಿಯಾಣ, ಮಹಾರಾಷ್ಟ್ರ, ಅಸ್ಸಾಂ, ಹಿಮಾಚಲ ಪ್ರದೇಶ, ಛತ್ತೀಸಗಢ, ನಾಗಾಲ್ಯಾಂಡ್, ಸಿಕ್ಕಿಂ ಹಾಗೂ ತ್ರಿಪುರಾದಲ್ಲಿ ಇಂತಹ ಶಾಲೆಗಳಿಲ್ಲ.
‘ಶಾಲಾ ಶಿಕ್ಷಣ ರಾಜ್ಯ ಪಟ್ಟಿಯಲ್ಲಿ ಬರುತ್ತದೆ. ಈ ಸಮಸ್ಯೆಯನ್ನು ಬಗೆಹರಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ. ಕೆಲವು ರಾಜ್ಯಗಳಲ್ಲಿ ಸಂಪನ್ಮೂಲ ಹಾಗೂ ಶಿಕ್ಷಕರನ್ನು ಬಳಸಿಕೊಳ್ಳಲು ಶಾಲೆಗಳನ್ನು ವಿಲೀನ ಮಾಡಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪುದುಚೇರಿ, ಲಕ್ಷದ್ವೀಪ, ದಾದ್ರಾ ಮತ್ತ ನಗರ್‌ಹವೇಲಿ, ಅಂಡಮಾನ್ ಮತ್ತು ನಿಕೋಬರ್ ದ್ವೀಪ, ದಮನ್ ಮತ್ತು ದಿಯು ಹಾಗೂ ಚಂಡೀಗಢ ಮುಂತಾದ ಕೇಂದ್ರಾಡಳಿತ ಪ್ರದೇಶದ ಹಾಗೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಶೂನ್ಯ ದಾಖಲಾತಿ ಇರುವ ಶಾಲೆಗಳು ಇಲ್ಲ.
ತೆಲಂಗಾಣದಲ್ಲಿ 2,245 ಹಾಗೂ ಮಧ್ಯಪ್ರದೇಶದಲ್ಲಿ 463 ಶಾಲೆಗಳಲ್ಲಿ ಶೂನ್ಯ ದಾಖಲಾತಿ ಇದೆ. ಕ್ರಮವಾಗಿ 1,016 ಹಾಗೂ 223 ಶಿಕ್ಷಕರು ಇದ್ದಾರೆ.
ಉತ್ತರ ಪ್ರದೇಶದಲ್ಲಿ ಇಂತಹ 81 ಶಾಲೆಗಳಿವೆ. ಕೇವಲ ಓರ್ವ ಶಿಕ್ಷಕ ಮಾತ್ರ ಇರುವ ಹೆಚ್ಚಿನ ಶಾಲೆಗಳು ಉತ್ತರ ಪ್ರದೇಶದಲ್ಲಿದೆ. ಜಾರ್ಖಂಡ್, ಪಶ್ಚಿಮ ಬಂಗಾಳ ಹಾಗೂ ಮಧ್ಯಪ್ರದೇಶ ಬಳಿಕದ ಸ್ಥಾನದಲ್ಲಿವೆ.