ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೊಗೆ ಸೇರಿದ 10 ನಿಲ್ದಾಣಗಳಲ್ಲಿ ಗುಜರಾತ್‌ನ ಅಮೂಲ್ ಮಳಿಗೆಗಳ ಸ್ಥಾಪನೆಯೊಂದಿಗೆ ಕರ್ನಾಟಕದ ನಂದಿನಿ ಮತ್ತು ಗುಜರಾತ್‌ನ ಅಮೂಲ್ ನಡುವಿನ ವಾಣಿಜ್ಯ ಪೈಪೋಟಿ ರಾಜಕೀಯ ಸ್ವರೂಪ ಪಡೆದು ಮತ್ತೆ ಮುನ್ನೆಲೆಗೆ ಬಂದಿದೆ. ಈ ವಿಷಯ ಕುರಿತು ಆಡಳಿತಾರೂಢ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ವಾಕ್ಸಮರ ಆರಂಭವಾಗಿದೆ.
ಟೆಂಡರ್‌ನಂತೆ ಅಮೂಲ್ ಮಳಿಗೆಗಳನ್ನು ತೆರೆಯಲು ಬೆಂಗಳೂರು ಮೆಟ್ರೊ ರೈಲು ನಿಗಮವು ಅನುಮತಿ ನೀಡಿದೆ. ಆದರೆ ಈ ಮಳಿಗೆಗಳನ್ನು ರಾಜ್ಯದ ಹೈನು ಉತ್ಪಾದಕರ ಮಂಡಳಿಯೇ ಆಗಿರುವ ಕೆಎಂಎಫ್‌ನ ನಂದಿನಿಗೆ ರಾಜ್ಯ ಸರ್ಕಾರ ನೀಡಬಹುದಿತ್ತು ಎಂದು ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಜೆಡಿಎಸ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಏ. 10ರಂದು ಮಾಡಿದ್ದ ಟ್ವೀಟ್ ಅನ್ನೇ ಉಲ್ಲೇಖಿಸಿ ಕೆಣಕಿದೆ.
‘ಕಮಿಷನ್ ಆಸೆಗೆ ಡಿ.ಕೆ.ಶಿವಕುಮಾರ್ ಸ್ವಾಭಿಮಾನ ಮಾರಿಕೊಂಡಿದ್ದಾರೆ. ಡೂಪ್ಲಿಕೇಟ್ ಸಿಎಂ ಡಿಕೆಶಿಯ ನವರಂಗಿ ಆಟ ಮತ್ತೊಮ್ಮೆ ಬಯಲಾಗಿದೆ.. ಚುನಾವಣೆಗೂ ಮುಂಚೆ #SaveNandini , ಕನ್ನಡಿಗರ ಆತ್ಮಗೌರವ ಮಾರಾಟಕ್ಕಿಲ್ಲ ಎಂದು ಪುಂಗಿ ಬಿಡುತ್ತಿದ್ದ ಇವರು, ಕಮಿಷನ್ ಆಸೆಗೆ ಇಂದು ಹೊರ ರಾಜ್ಯಗಳ ಹಾಲಿನ ಉತ್ಪನ್ನಗಳಿಗೆ ಮಣೆ ಹಾಕಿದ್ದಾರೆ. ಬೆಂಗಳೂರಿನಲ್ಲಿ 10ಕ್ಕೂ ಹೆಚ್ಚು ಮೆಟ್ರೋ ನಿಲ್ದಾಣಗಳಲ್ಲಿ ಹೊರ ರಾಜ್ಯದ ಹಾಲಿನ ಉತ್ಪನ್ನಗಳ ಮಾರಾಟ ಮಳಿಗೆಗೆ ಅವಕಾಶ ನೀಡಲಾಗಿದೆ. ನಮ್ಮ ರೈತರ ಹಾಗೂ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ನಂದಿನಿ ಬ್ರಾಂಡ್ ಅನ್ನು ತನ್ನ ಪ್ರಚಾರಕ್ಕೆ ಬಳಸಿಕೊಂಡ @INCKarnataka ಅಧಿಕಾರಕ್ಕೆ ಬಂದ ಬಳಿಕ ನಂದಿನಿಯನ್ನು ಮರೆತು, ಹೊರ ರಾಜ್ಯಗಳ ಹಾಲಿನ ಉತ್ಪನ್ನಗಳಿಗೆ ರತ್ನಗಂಳಿ ಹಾಸಿದೆ. ನಂದಿನಿ ಹಾಲಿನ ಉತ್ಪನ್ನಗಳಿಗೆ ಸ್ಪರ್ಧಾತ್ಮಕವಾಗಿ ಮಾರುಕಟ್ಟೆ ಸೃಷ್ಟಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದ್ದು, ಕನ್ನಡಿಗರ ಹೆಮ್ಮೆಯ ಬ್ರಾಂಡ್ ‘ನಂದಿನಿ’ಯ ಹಿತಾಸಕ್ತಿಗೆ ಧಕ್ಕೆ ತರುತ್ತಿದೆ’ ಎಂದು ಆರೋಪಿಸಿದೆ.
ಮೆಟ್ರೊ ನಿಲ್ದಾಣಗಳಲ್ಲಿ ಅಮೂಲ್‌ಗೆ ಮಳಿಗೆ ತೆರೆಯಲು ಅನುಮತಿ ನೀಡಿರುವ ಕುರಿತು ಟ್ವೀಟ್ ಮಾಡಿರುವ ಸಂಸದ ಬಿಜೆಪಿಯ ಪಿ.ಸಿ. ಮೋಹನ್, ‘2023ರಲ್ಲಿ ರಾಜ್ಯ ವಿಧಾಸಭೆಗೆ ನಡೆದ ಚುನಾವಣೆ ಸಂದರ್ಭದಲ್ಲಿ ಹೊರಗಿನವರಿಗೆ ಬಿಜೆಪಿ ಮಣೆ ಹಾಕುತ್ತಿದೆ ಎಂದು ಕಾಂಗ್ರೆಸ್ ಸುಳ್ಳು ಆರೋಪ ಮಾಡಿತ್ತು. ಆದರೆ ಈಗ ಕಾಂಗ್ರೆಸ್ ಸರ್ಕಾರವು ರಾಜ್ಯದ ನಂದಿನಿ ಬದಲು ಅಮೂಲ್‌ಗೆ 10 ಮಳಿಗೆಗಳನ್ನು ನೀಡಿದೆ. ಬೂಟಾಟಿಕೆಗೆ ಇದು ಜ್ವಲಂತ ಉದಾಹರಣೆ’ ಎಂದು ಜರಿದಿದ್ದಾರೆ.
ಈ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, 'ಮೆಟ್ರೊ ನಿಲ್ದಾಣಗಳಲ್ಲಿ ಮಳಿಗೆ ತೆರೆಯಲು ಬಿಎಂಆರ್‌ಸಿಎಲ್‌ಗೆ ಅರ್ಜಿ ಹಾಕಲು ಕೆಎಂಎಫ್‌ಗೆ ಸೂಚನೆ ನೀಡಿದ್ದು, 10 ಸ್ಥಳಗಳ ಪೈಕಿ ಎಂಟು ಕಡೆಗಳಲ್ಲಿ ನಂದಿನಿ ಮಳಿಗೆ ತೆರೆಯಲು ಅವಕಾಶ ನೀಡುವಂತೆ ನಿರ್ದೇಶನ ನೀಡಿದ್ದೇನೆ' ಎಂದಿದ್ದಾರೆ.
ಮೆಟ್ರೊ ನಿಲ್ದಾಣಗಳಲ್ಲಿ ಅಮೂಲ್ ತನ್ನ ಮಳಿಗೆ ತೆರೆಯುತ್ತಿರುವ ಬಗ್ಗೆ ಸುದ್ದಿಗಾರರು ಕೇಳಿದಾಗ ಪ್ರತಿಕ್ರಿಯಿಸಿದ ಶಿವಕುಮಾರ್, 'ಬಿಎಂಆರ್ ಸಿಎಲ್ ಅವರು ಕರೆದಿದ್ದ ಜಾಗತಿಕ ಟೆಂಡರ್ ನಲ್ಲಿ ಅಮೂಲ್ ನವರು ಅರ್ಜಿ ಹಾಕಿ ಎರಡು ಕಡೆ ಮಳಿಗೆ ತೆರೆದಿದ್ದಾರೆ. ಟೆಂಡರ್ ನಲ್ಲಿ ಭಾಗಿಯಾಗಿ ತೆರೆದಿರುವ ಮಳಿಗೆ ಮುಚ್ಚಿಸುವುದು ಸರಿಯಲ್ಲ. ಉಳಿದ ಎಂಟು ಸ್ಥಳಗಳಲ್ಲಿ ಕೆಎಂಎಫ್ ಮಳಿಗೆಗೆ ಅವಕಾಶ ನೀಡಿ ಎಂದು ಹೇಳಿದ್ದೇನೆ' ಎಂದರು.
'ಟೆಂಡರ್ ಗೆ ಅಮೂಲ್ ಹೊರತಾಗಿ ಬೇರೆ ಯಾರೂ ಮಳಿಗೆಗಳಿಗೆ ಅರ್ಜಿ ಹಾಕಿಲ್ಲ. ಕೆಎಂಎಫ್ ಕೂಡ ಅರ್ಜಿ ಹಾಕಿರಲಿಲ್ಲ. ಈಗ ಕೆಎಂಎಫ್ ನವರಿಗೆ ನಾವು ಅರ್ಜಿ ಹಾಕುವಂತೆ ಸೂಚಿಸಿದ್ದೇವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.