ADVERTISEMENT

ಶಿವಮೊಗ್ಗ ಜಿಲ್ಲೆಯ ನಾಯಕರ ಒಡನಾಟದಲ್ಲಿ ‘ಅನಂತ’ ನೆನಪು

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2018, 20:12 IST
Last Updated 12 ನವೆಂಬರ್ 2018, 20:12 IST
ಬಿ.ಎಸ್. ಯಡಿಯೂರಪ್ಪ ಜತೆ ಅನಂತಕುಮಾರ್ ಆಪ್ತ ಸಮಾಲೋಚನೆ.
ಬಿ.ಎಸ್. ಯಡಿಯೂರಪ್ಪ ಜತೆ ಅನಂತಕುಮಾರ್ ಆಪ್ತ ಸಮಾಲೋಚನೆ.   

ಶಿವಮೊಗ್ಗ:ಕೇಂದ್ರ ಸಚಿವ ಅನಂತಕುಮಾರ್ ನಿಧನಕ್ಕೆ ಜಿಲ್ಲೆಯ ಹಲವು ನಾಯಕರೂ ಕಂಬನಿ ಮಿಡಿದಿದ್ದಾರೆ. ಜಿಲ್ಲೆಗೆ ಹಲವಾರು ಬಾರಿ ಅವರ ಭೇಟಿ, ಒಡನಾಟ, ವ್ಯಕ್ತಿತ್ವ ಸ್ಮರಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯದ ಮಧ್ಯೆ ಸಂಪರ್ಕ ಕೊಂಡಿಯಾಗಿದ್ದ ಅನಂತ ಕುಮಾರ್ ರಾಜಕೀಯದಲ್ಲಿ ಸದಾ ಉತ್ತಮ ಸಲಹೆ, ಸಹಕಾರ ನೀಡುತ್ತಿದ್ದರು. ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಮಾಜಿ ಉಪ ಮುಖ್ಯಮಂತ್ರಿಗಳ ಜತೆ ಉತ್ತಮ ಬಾಂಧವ್ಯ ಹೊಂದಿದ್ದರು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸ್ಮರಿಸಿದ್ದಾರೆ.

ಅನಂತ್ ಅಪಾರ ಪರಿಶ್ರಮದ ಮೇರು ಚೇತನ. ಸಾಮಾನ್ಯ ಜನರು, ಕಾರ್ಯಕರ್ತರು ಸುಲಭವಾಗಿ ಅವರನ್ನು ಭೇಟಿ ಮಾಡಬಹುದಿತ್ತು. ಸರಳ, ಸಜ್ಜನಿಕೆ, ಪ್ರಾಮಾಣಿಕ ವ್ಯಕ್ತಿ. ಅವರನ್ನು ಕಳೆದುಕೊಂಡಿರುವುದು ಪಕ್ಷ ಹಾಗೂ ದೇಶಕ್ಕೆ ತುಂಬಲಾರದ ನಷ್ಟ ಎಂದು ಬಣ್ಣಿಸಿದ್ದಾರೆ.

ADVERTISEMENT

ಸಾಮಾನ್ಯ ಕಾರ್ಯಕರ್ತರ ಮಧ್ಯೆ ಅಹಂಕಾರ ಇಲ್ಲದೇ ಸದಾ ನಗುನಗುತ್ತಾ ಇರುತ್ತಿದ್ದ ನಾಯಕ. ಹೋರಾಟದ ರೂಪುರೇಷೆ ಸಿದ್ಧಪಡಿಸುತ್ತಿದ್ದ ಬಿಜೆಪಿಯ ಮುಖ್ಯ ಆಧಾರಸ್ತಂಭ. ಅವರು ಯೋಜನೆ ನಾವೆಲ್ಲ ಕಾರ್ಯರೂಪಕ್ಕೆ ತರುತ್ತಿದ್ದೆವು. ಅಧಿಕಾರಕ್ಕೆ ಆಸೆ ಪಡದೆ ನಿಸ್ವಾರ್ಥವಾಗಿ ದುಡಿಯುತ್ತಿದ್ದರು ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಅವರ ವ್ಯಕ್ತಿತ್ವ ಮೆಲುಕು ಹಾಕಿದರು.

ಕೇಂದ್ರ ಸಚಿವ ಅನಂತಕುಮಾರ್ ಹಾಗೂ ತಂದೆ ಯಡಿಯೂರಪ್ಪ ಅವರು ಕೃಷ್ಣ–ಅರ್ಜುನರಂತೆ ಇದ್ದರು. ನಮ್ಮ ಕುಟುಂಬದ ಒಬ್ಬ ಹಿರಿಯ ಸದಸ್ಯರನ್ನು ಕಳೆದುಕೊಂಡ ನೋವಾಗಿದೆ. ಶಾಸಕರ ಭವನದಲ್ಲಿ ತಂದೆ ಕೊಠಡಿಯಲ್ಲೇ ಇರುತ್ತಿದ್ದರು. ಪಕ್ಷ ಸಂಘಟನೆಗೆ ಇಡೀ ಜೀವನ ಶ್ರಮಿಸಿದ್ದರು. ಹಂತಹಂತವಾಗಿ ಮೇಲೆ ಬಂದ ಅವರ ಅಕಾಲಿಕ ಸಾವು ನೋವು ತಂದಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಪ್ರತಿಕ್ರಿಯಿಸಿದರು.

ಕರ್ನಾಟಕವನ್ನು ಯಶಸ್ವಿಯಾಗಿ ಕೇಂದ್ರದಲ್ಲಿ ಪ್ರತಿನಿಧಿಸುತ್ತಿದ್ದರು. 22 ವರ್ಷಗಳ ರಾಜಕೀಯ ಜೀವನದಲ್ಲಿ ಬಹುತೇಕ ಅವಧಿ ಕೇಂದ್ರ ಸಚಿವರಾಗಿ ಕಳೆದಿದ್ದಾರೆ. ಭದ್ರಾವತಿಯ ವಿಐಎಸ್ಎಲ್ ಪುನಃಶ್ಚೇತನಕ್ಕೆ ಸಹಕಾರ ನೀಡಿದ್ದರು. ಈ ವಿಷಯವಾಗಿ ಹಲವು ಬಾರಿ ಭೇಟಿ ನೀಡಿದ್ದೆ. ಕೇಂದ್ರದಲ್ಲಿ ಪ್ರಭಾವ ಶಾಲಿ ಸಚಿವರಾಗಿದ್ದರು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ್ರು ಸ್ಮರಿಸಿದರು.

ಅನಂತಕುಮಾರ್ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಸಮಯದಲ್ಲಿ ಬಿಜೆಪಿ ಸೇರಿದ್ದೆವು. 2004ರಲ್ಲಿ 79 ಶಾಸಕರು ವಿಧಾನಸಭೆ ಪ್ರವೇಶಿಸಲು ಅವರ ಪರಿಶ್ರಮವೂ ಇತ್ತು. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಶಾಸಕ ಕುಮಾರ್ ಬಂಗಾರಪ್ಪ ಪ್ರಾರ್ಥಿಸಿದ್ದಾರೆ.

ನಾನು ಅನಂತ್ ದೀರ್ಘಕಾಲದ ಸ್ನೇಹಿತರು. 1977ರಿಂದ ವಿದ್ಯಾರ್ಥಿ ದಿಸೆಯಿಂದಲೇ ಕೆಲಸ ಮಾಡಿದ್ದೆವು. ಲೋಕಸಭಾ ಸದಸ್ಯರಾಗಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಜಿಲ್ಲೆಯ ಸಮಸ್ಯೆಗಳಿಗೆ ಸಾಕಷ್ಟು ಸ್ಪಂದಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಸ್ಮರಿಸಿದರು.

ಸಂಘದ ಸ್ವಯಂ ಸೇವಕರಾಗಿ, ಬಿಜೆಪಿ ಕಾರ್ಯಕರ್ತರಾಗಿ ಅವಿರತ ಶ್ರಮಿಸಿದ್ದಾರೆ. ಜಿಲ್ಲೆಗೆ ಬಂದಾಗ ಬಸ್‌ನಲ್ಲೇ ತಾಲ್ಲೂಕುಗಳಿಗೆ ಹೋಗುತ್ತಿದ್ದೆವು. ಅವರು ಅನಂತದಲ್ಲಿ ಲೀನವಾಗಿರುವುದು ಪಕ್ಷಕ್ಕೆ ತುಂಬಲಾರದ ನಷ್ಟ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ. ಭಾನುಪ್ರಕಾಶ್ ನೆನಪಿನ ಬುತ್ತಿ ಬಿಚ್ಚಿಟ್ಟರು.

ತಂದೆ ಎಸ್. ಬಂಗಾರಪ್ಪ ಅವರ ಜತೆಗೆ ಅನಂತಕುಮಾರ್ ಉತ್ತಮ ಬಾಂಧವ್ಯ ಹೊಂದಿದ್ದರು. ತಂದೆ ಅವರು ಬಿಜೆಪಿ ಸೇರಿದ್ದಾಗ ಅವರೊಂದಿಗೆ ರಾಜ್ಯ ಪ್ರವಾಸ ಮಾಡಿದ್ದೆವು. 2004ರಲ್ಲಿ ಸೊರಬ ಕ್ಷೇತ್ರದಿಂದ ಸ್ಪರ್ಧಿಸಲು ತಮಗೆ ಟಿಕೆಟ್ ನೀಡಿದ್ದರು. ಅವರ ನಿಧನ ದೊಡ್ಡ ನಷ್ಟ ಎಂದು ಯು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಸ್ಮರಿಸಿದರು.

ಸರಳ ವ್ಯಕ್ತಿತ್ವದ ಅನಂತ ಕುಮಾರ್ ಅವರನ್ನು ಇಷ್ಟು ಬೇಗ ಕಳೆದುಕೊಳ್ಳುತ್ತೇವೆ ಎಂದು ಯಾರೂ ಭಾವಿಸಿರಲಿಲ್ಲ. ಅವರ ಸಾವು ದೇಶ, ರಾಜ್ಯ, ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಬೇಸರ ತೋಡಿಕೊಂಡರು.

ಜಿಲ್ಲಾ ಕಾಂಗ್ರೆಸ್‌:

ಕೇಂದ್ರ ಸಚಿವ, ವಾಕ್ ಚತುರ, ಸಜ್ಜನ ನಡವಳಿಕೆಯ ಅನಂತಕುಮಾರ್ ಅವರ ನಿಧನಕ್ಕೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸವಿುತಿ ಅಧ್ಯಕ್ಷ ತೀ.ನ. ಶ್ರೀನಿವಾಸ್ ಮತ್ತು ಪ್ರಧಾನಕಾರ್ಯದರ್ಶಿ ಸಿ.ಎಸ್.ಚಂದ್ರಭೂಪಾಲ, ಖಜಾಂಚಿ ಎಚ್. ಎಂ. ಮಧು ಸಂತಾಪ ವ್ಯಕ್ತಪಡಿಸಿದ್ದಾರೆ.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.