
ಅಂಜಲಿ ಸರ್ದಾನಾ
ಚಿತ್ರ ಕೃಪೆ; @anjalisardana
ಮನಸ್ಸಿದ್ದರೆ ಮಾರ್ಗ ಎಂಬ ನುಡಿಮುತ್ತಿದೆ. ಆದರೆ, ಪ್ರಸ್ತುತ ದಿನಗಳಲ್ಲಿ ಯುವಜನತೆ ಉದ್ಯೋಗವಿಲ್ಲ ಎಂದು ನಾನಾ ಸಬೂಬು ಹೇಳುವುದನ್ನು ನಾವು ಕೇಳಿರುತ್ತೇವೆ. ಮತ್ತು ಯಾರೂ ಕೂಡ ಸ್ವ–ಉದ್ಯಮದ ಕಡೆ ಯೋಚಿಸುವುದಿಲ್ಲ. ಆದರೆ ಬೆಂಗಳೂರಿನ 23ರ ಹರೆಯದ ಯುವತಿಯೊಬ್ಬರು ಜಾಗತಿಕ ಮಟ್ಟದ ಬೃಹತ್ ಕಂಪನಿಯೊಂದನ್ನು ಕಟ್ಟಿ ಸೈ ಎನಿಸಿಕೊಂಡಿದ್ದಾರೆ.
ಜಾರ್ಜ್‌ಟೌನ್ ವಿಶ್ವವಿದ್ಯಾಲಯದ ಜೀವಶಾಸ್ತ್ರ ವಿಭಾಗದಲ್ಲಿ ಅಂಜಲಿ ಸರ್ದಾನಾ ಪದವಿಯನ್ನು ಪೂರೈಸಿದ್ದಾರೆ. ನಂತರ ಯಾವುದೇ ಕಂಪನಿಗೆ ಉದ್ಯೋಗ ಅರಸಿ ಹೋಗಲು ಇಚ್ಚಿಸದ ಸರ್ದಾನಾ ನೇರವಾಗಿ ಯೋಚಿಸಿದ್ದು, ಸ್ಟಾಟ್ ಆಫ್ ಕಡೆಗೆ.
23 ವರ್ಷದ ಸರ್ದಾನಾ ವಿಭಿನ್ನವಾದ (ಹೌಸ್ ಹೆಲ್ಪ್ ಪ್ಲಾಟ್‌ಫಾರ್ಮ್) ‘ಪ್ರಾಂಟೊ’ ಎಂಬ ಸ್ಟಾಟ್‌ಆಫ್ ಕಂಪನಿಯನ್ನು ಆರಂಭಿಸಿದರು. 10 ನಿಮಿಷಗಳಲ್ಲಿ ಗೃಹ ಸೇವೆಯನ್ನು ಒದಗಿಸುವ ಯೋಜನೆಯೊಂದಿಗೆ ಆರಂಭವಾದ ಪ್ರಾಂಟೊ ಇಂದು ಬೃಹತ್ ಕಂಪನಿಯಾಗಿ ಬೆಳೆಯುತ್ತಿದೆ. ಮನೆಯನ್ನು ಸ್ವಚ್ಛಗೊಳಿಸುವುದರಿಂದ ಹಿಡಿದು ಅಡುಗೆ ತಯಾರಿಸುವವರೆಗೆ ಎಲ್ಲಾ ರೀತಿಯ ಕೆಲಸ ಮಾಡಲು ಕೆಲಸಗಾರರನ್ನು ಈ ಕಂಪನಿ ಪೂರೈಸುತ್ತದೆ.
ಸಣ್ಣ ಬಂಡಾವಳದೊಂದಿಗೆ 2025ರಲ್ಲಿ ಆರಂಭವಾದ ಈ ಕಂಪನಿಯ ಮೌಲ್ಯ ಒಂದೇ ವರ್ಷದಲ್ಲಿ ಅಂದಾಜು ₹922.37 ಕೋಟಿ ತಲುಪಿದೆ.
ಈ ಕುರಿತು ಸ್ವತಃ ಅಂಜಲಿ ಸರ್ದಾನಾ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಕಂಪನಿ ಹೇಗೆ ಕೆಲವೇ ತಿಂಗಳಿನಲ್ಲಿ ದೊಡ್ಡಮಟ್ಟದ ಯಶಸ್ಸು ಗಳಿಸಲು ಕಾರಣವಾಯಿತು ಎಂಬುದನ್ನು ಹಂಚಿಕೊಂಡಿದ್ದಾರೆ. ಕಂಪನಿ ಆರಂಭದಲ್ಲಿ ನಾನು ಮತ್ತು ನನ್ನ ಸಹ ಉದ್ಯೋಗಿಗಳು ನೆಲದ ಮೇಲೆಯೇ ಮಲಗುತ್ತಿದ್ದೆವು. ಇಂದು ನಮ್ಮ ಕಂಪನಿ ಇತ್ತೀಚೆಗೆ ಸುಮಾರು ₹230.68 ಕೋಟಿ ಸಂಗ್ರಹಿಸಿದೆ ಎಂದು ಘೋಷಿಸಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.
ಆಕೆಯ ಪಯಾಣ ಹೀಗಿತ್ತು
ಕೇವಲ 9 ತಿಂಗಳ ಹಿಂದೆಯಷ್ಟೇ ಸರ್ದಾನಾ ಪ್ರಾಂಟೊ ಆರಂಭಿಸಿದರು. ಆರಂಭದಲ್ಲಿ ಕಂಪನಿಗೆ ದಿನಕ್ಕೆ ಸರಿಸುಮಾರು 170 ಬುಕಿಂಗ್ ಮಾತ್ರ ಸಿಗುತ್ತಿದ್ದವು. ಆದರೆ ಇಂದು ನಮ್ಮ ಕಂಪನಿಗೆ ದಿನವೊಂದಕ್ಕೆ 18,000ಕ್ಕೂ ಹೆಚ್ಚು ಬುಕಿಂಗ್‌ಗಳು ಲಭ್ಯವಾಗುತ್ತಿವೆ. ಬುಕಿಂಗ್‌ನ ಶೇ5ರಷ್ಟು ಬೆಂಗಳೂರಿನಿಂದಲೇ ಇದೆ. ನಮ್ಮ ಕಂಪನಿಯಲ್ಲಿ 3,000 ಕ್ಕೂ ಹೆಚ್ಚು ನುರಿತ ಹಾಗೂ ಅನುಭವಿ ಮನೆಕೆಲಸಗಳನ್ನು ನಿರ್ವಹಿಸುವವರಿದ್ದಾರೆ ಎಂದು ಹೇಳಿದ್ದಾರೆ.
ಪ್ರೊಂಟೊನಲ್ಲಿ ತರಬೇತಿ ಪಡೆದ ಗೃಹ ಕೆಲಸ ಮಾಡುವವರಿದ್ದಾರೆ. ಇವರು ಮನೆಯ ಪ್ರತಿ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಡುತ್ತಾರೆ. ಈ ಕಂಪನಿ ಸದ್ಯ ದೆಹಲಿ, ಬೆಂಗಳೂರು, ಮುಂಬೈ, ಹೈದರಾಬಾದ್, ಚೆನ್ನೈ ಸೇರಿದಂತೆ ಇತರೆ ನಗರಗಳಲ್ಲಿ 10 ಕಚೇರಿಗಳನ್ನು ಹೊಂದಿದೆ.
ಕೆಲಸಗಾರರೊಂದಿಗೆ ಅಂಜಲಿ ಸರ್ದಾನಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.