ADVERTISEMENT

ಬೀದಿ ನಾಯಿಗಳಿಗೆ ಆಶ್ರಯ ತಾಣ ಸುರಕ್ಷಿತವೇ? ತಜ್ಞರ ಅಭಿಮತ ಹೀಗಿದೆ

Dinesha R
Published 27 ಡಿಸೆಂಬರ್ 2025, 12:47 IST
Last Updated 27 ಡಿಸೆಂಬರ್ 2025, 12:47 IST
ಕಬ್ಬನ್ ಉದ್ಯಾನದಲ್ಲಿ ವ್ಯಕ್ತಿಯೊಬ್ಬರು ಬೀದಿ ನಾಯಿಗಳಿಗೆ ಆಹಾರ ನೀಡಿದರು (ಸಂಗ್ರಹ ಚಿತ್ರ)
ಕಬ್ಬನ್ ಉದ್ಯಾನದಲ್ಲಿ ವ್ಯಕ್ತಿಯೊಬ್ಬರು ಬೀದಿ ನಾಯಿಗಳಿಗೆ ಆಹಾರ ನೀಡಿದರು (ಸಂಗ್ರಹ ಚಿತ್ರ)   

ಬೆಂಗಳೂರಿನಲ್ಲಿ ಬೀದಿ ನಾಯಿಗಳಿಗಾಗಿ ಹೊಸ ಆಶ್ರಯ ಕೇಂದ್ರಗಳು ಶೀಘ್ರದಲ್ಲೇ ಕಾರ್ಯಾರಂಭ ಮಾಡಲು ಸಿದ್ಧತೆಗಳು ಆರಂಭಗೊಂಡಿದೆ. ಸುಪ್ರೀಂಕೋರ್ಟ್ ಆದೇಶದಂತೆ ಬೀದಿ ನಾಯಿಗಳನ್ನು ಹಿಡಿದು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಲು ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ.

ಈ ಆಶ್ರಯ ಕೇಂದ್ರಗಳಲ್ಲಿ ಬಿಡುವ ಪ್ರತಿ ನಾಯಿಗೆ ತಿಂಗಳಿಗೆ ₹3,035 ವೆಚ್ಚ ಮಾಡಲು ಹಾಗೂ ಚಿಕನ್ ಬಿರಿಯಾನಿ ನೀಡಲು ಸರ್ಕಾರ ₹1.83 ಕೋಟಿ ಮೀಸಲಿಡಲು ಯೋಜನೆ ರೂಪಿಸಿದೆ. ಮಾತ್ರವಲ್ಲ, ಪ್ರಾಣಿ ಪ್ರಿಯರು ಮತ್ತು ಸ್ವಯಂ ಸೇವಾ ಸಂಸ್ಥೆಗಳಿಗೆ ಇಲ್ಲಿರುವ ನಾಯಿಗಳನ್ನು ದತ್ತು ಪಡೆಯಲು ಅವಕಾಶ ನೀಡಿದೆ. ಈ ಶೆಲ್ಟರ್‌ಗಳು 2026ರ ಜನವರಿ ಮೊದಲ ವಾರದಿಂದ ಆರಂಭವಾಗುವ ನಿರೀಕ್ಷೆಯಿದೆ.

ಇನ್ನೂ, ಬೀದಿ ನಾಯಿಗಳನ್ನು ಹಿಡಿದು ಆಶ್ರಯ ತಾಣಗಳಿಗೆ ಹಸ್ತಾಂತರಿಸುವ ಕುರಿತು ‘ಪ್ರಜಾವಣಿ’ ಜೊತೆ ಪಶು ವೈದ್ಯರಾದ ಡಾ. ಎಂ. ರವಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ADVERTISEMENT

ಪ್ರಶ್ನೆ: ಬೀದಿ ನಾಯಿಗಳನ್ನು ಆಶ್ರಯ ತಾಣಗಳಲ್ಲಿ ಬಿಡುವುದರಿಂದ ಅವುಗಳ ಸ್ವಾತಂತ್ರ್ಯ ಕಸಿದುಕೊಂಡಂತೆ ಆಗುವುದಿಲ್ಲವೆ?

ಉತ್ತರ: ಖಂಡಿತವಾಗಿಯೂ ಇಲ್ಲ. ಯಾಕೆಂದರೆ ಆಶ್ರಯ ತಾಣಗಳು ಅಂದರೆ ಚಿಕ್ಕ ಚಿಕ್ಕ ಬೋನ್‌ಗಳಲ್ಲ. ಅದು 10 ರಿಂದ 15 ಎಕರೆಯ ವಿಶಾಲವಾದ ಮೈದಾನ. ಅಲ್ಲಿ ಬೀದಿ ನಾಯಿಗಳನ್ನು ಸ್ವತಂತ್ರವಾಗಿ ಬಿಡಲಾಗುತ್ತದೆ. ಹಾಗಾಗಿ, ಅವುಗಳ ಸ್ವಾತಂತ್ರ್ಯ ಕಿತ್ತುಕೊಂಡಂತೆ ಆಗುವುದಿಲ್ಲ. ಸುಪ್ರಿಂಕೋರ್ಟ್ ಕೂಡ ಈ ಎಲ್ಲಾ ಅಂಶಗಳನ್ನು ಗಮನಿಸಿ ತೀರ್ಪು ನೀಡಿದೆ ಎಂದರು.

ಪ್ರಶ್ನೆ: ಬೀದಿ ನಾಯಿಗಳ ಹೆಚ್ಚಳಕ್ಕೆ ಕಾರಣಗಳೇನು?

ಉತ್ತರ: ಬೀದಿ ನಾಯಿಗಳ ಹೆಚ್ಚಳಕ್ಕೆ ಪ್ರಮುಖ ಕಾರಣವೆಂದರೆ, ಅವುಗಳನ್ನು ನಿಯಂತ್ರಣ ಮಾಡದಿರುವುದು. ಹಾಗೂ ಪರಿಣಾಮಕಾರಿಯಾಗಿ ಸಂತಾನ ಹರಣ ಚಿಕಿತ್ಸೆಗಳನ್ನು ನೀಡದಿರುವುದು. ಮಾತ್ರವಲ್ಲ, ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಅಗತ್ಯಕ್ಕೆ ಬೇಕಾಗಿರುವಷ್ಟು ಪಶು ವೈದ್ಯರ ಕೊರತೆ ಇರುವುದರಿಂದ ಅವುಗಳ ನಿಯಂತ್ರಣ ಸಾಧ್ಯವಾಗುತ್ತಿಲ್ಲ.

ಪ್ರಶ್ನೆ: ಬೀದಿ ನಾಯಿಗಳ ಆಶ್ರಯ ತಾಣಗಳಲ್ಲಿ ನಾಯಿಗಳು ಎಷ್ಟು ಸುರಕ್ಷಿತ?

ಉತ್ತರ: ಈಗಿರುವ ಮಾಹಿತಿ ಪ್ರಕಾರ, ಅಲ್ಲಿ ಎಲ್ಲಾ ರೀತಿಯ ವೈದ್ಯಕೀಯ ಸಿಬ್ಬಂದಿಯನ್ನು ನೇಮಕ ಮಾಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಹಾಗಿರುವಾಗ, ಅವುಗಳು ಹೊರಗಡೆ ಓಡಾಡುವಾಗ ಅಪಘಾತ ಹಾಗೂ ಅನಾರೋಗ್ಯದಿಂದ ಬಳಲಿ ಸಾಯುವುದಕ್ಕಿಂತ ಆಶ್ರಯ ತಾಣಗಳು ಹೆಚ್ಚು ಸುರಕ್ಷಿತ ಎನ್ನಬಹುದು.

ಪ್ರಶ್ನೆ: ಆಶ್ರಯ ತಾಣಗಳ ಸ್ಥಾಪನೆಯಿಂದ ಬೀದಿ ನಾಯಿ ಸಮಸ್ಯೆ ಬಗೆಹರಿಯುತ್ತದೆಯೇ?

ಉತ್ತರ: ಆಶ್ರಯ ತಾಣಗಳನ್ನು ಸ್ಥಾಪನೆಯಿಂದ ಪೂರ್ಣ ಪ್ರಮಾಣದಲ್ಲಿ ಬೀದಿ ನಾಯಿಗಳ ಸಮಸ್ಯೆ ಬಗೆಹರಿಯುತ್ತದೆ ಎಂದು ಹೇಳಲಾಗದು. ಆದರೆ, ಶೇ 75 ರಿಂದ 80ರಷ್ಟು ಸಮಸ್ಯೆಯನ್ನು ನಿಯಂತ್ರಿಸಬಹುದು. ಸರ್ಕಾರ ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ. ಹಾಗಾಗಿ, ಆಶ್ರಯ ತಾಣಗಳ ಸ್ಥಾಪನೆ ಒಂದು ಉತ್ತಮ ನಿರ್ಧಾರ.

ಪ್ರಶ್ನೆ: ಬೆಂಗಳೂರಿನಲ್ಲಿರುವ ಬೀದಿ ನಾಯಿಗಳಿಗೆ ಆಶ್ರಯ ತಾಣಗಳ ಸಂಖ್ಯೆ ಸಾಕೇ?

ಉತ್ತರ: ಬೀದಿ ನಾಯಿಗಳ ಆಶ್ರಯ ತಾಣಗಳ ಸಂಖ್ಯೆ ಸಾಕೆ ಎಂಬುದರ ಕುರಿತು ನನ್ನ ಬಳಿ ನಿಕರವಾದ ಉತ್ತರವಿಲ್ಲ. ಸರ್ಕಾರ ಬೆಂಗಳೂರಿನ ಯಾವ ಯಾವ ಭಾಗಗಳಲ್ಲಿ ಎಷ್ಟು ಆಶ್ರಯ ತಾಣಗಳನ್ನು ನಿರ್ಮಾಣ ಮಾಡಲಿದೆ ಎಂಬುದನ್ನು ಮೊದಲು ನೋಡಬೇಕು. ಅದು ತಿಳಿದ ಬಳಿಕ ಆ ಸಂಖ್ಯೆ ಸಾಲುತ್ತದೆಯಾ? ಇಲ್ಲವಾ ಎಂಬುದನ್ನು ನೋಡಬೇಕಿದೆ.

ಪ್ರಶ್ನೆ: ಬೀದಿ ನಾಯಿಗಳಿಂದ ಮಕ್ಕಳು ಸೇರಿದಂತೆ ಜನರ ರಕ್ಷಣೆ ಹೇಗೆ?

ಉತ್ತರ: ಖಂಡಿತವಾಗಿಯೂ ಈಗ ಸರ್ಕಾರ ತೆಗೆದುಕೊಂಡಿರುವ ಆಶ್ರಯ ತಾಣದ ನಿರ್ಧಾರ ಉತ್ತಮವಾಗಿದೆ. ಏಕೆಂದರೆ, ನಾಯಿಗಳಿಗೆ ವರ್ಷಕ್ಕೊಮ್ಮೆ ರೇಬಿಸ್ ಚುಚ್ಚುಮದ್ದು ನೀಡಿ ಸುಮ್ಮನಾಗಿಬಿಡುತ್ತೇವೆ. ಆದರೆ, ವರ್ಷ ಕಳೆದ ಬಳಿಕ ಆ ನಾಯಿಯನ್ನು ಗುರುತಿಸಿ ಪುನಃ ಅದಕ್ಕೆ ರೇಬಿಸ್‌ ಚುಚ್ಚುಮದ್ದು ನೀಡುವುದು ಸುಲಭವಲ್ಲ. ಒಂದು ಬಾರಿ ನೀಡುವ ರೇಬಿಸ್ ಚುಚ್ಚುಮದ್ದಿಗೆ ಒಂದು ವರ್ಷದವರೆಗೆ ಶಕ್ತಿ ಇರುತ್ತದೆ. ಆದರೆ, ವರ್ಷ ಕಳೆದ ಬಳಿಕ ಬೇರೆ ನಾಯಿಯಿಂದ ಸೋಂಕು ತಗುಲಬಹುದು. ಆದರೆ, ಆಶ್ರಯ ತಾಣಗಳನ್ನು ಸ್ಥಾಪಿಸುವುದರಿಂದ ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಬಗೆಹರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.