ADVERTISEMENT

ಡ್ರಗ್ಸ್ ದಂಧೆ | ಎಷ್ಟೇ ಪ್ರಭಾವಿಗಳಿದ್ದರೂ ಶಿಕ್ಷೆಗೆ ಒಳಪಡಿಸುತ್ತೇವೆ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 11:53 IST
Last Updated 3 ಸೆಪ್ಟೆಂಬರ್ 2020, 11:53 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ    

ಬೆಂಗಳೂರು: ‘ಡ್ರಗ್ಸ್‌ ದಂಧೆಯಲ್ಲಿ ಎಷ್ಟೇ ದೊಡ್ಡ ವ್ಯಕ್ತಿಗಳು ಅಥವಾ ಪ್ರಭಾವಿಗಳು ಭಾಗಿಯಾಗಿದ್ದರೂ ಅವರನ್ನು ಶಿಕ್ಷೆಗೆ ಒಳಪಡಿಸುತ್ತೇವೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಡ್ರಗ್ಸ್ ದಂಧೆಯಲ್ಲಿ ರಾಜಕೀಯ ನಾಯಕರ ಮಕ್ಕಳ ಪಾತ್ರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳ ಆಧಾರದಲ್ಲಿ ತನಿಖೆ ನಡೆಸುತ್ತಿದ್ದೇವೆ. ಅಗತ್ಯಬಿದ್ದರೆ ವಿಚಾರಣೆಗೆ ಕರೆಸುತ್ತೇವೆ. ಹೊಸ ಹೊಸ ಸಾಕ್ಷ್ಯಗಳು ಸಿಗುತ್ತಿವೆ. ಯಾವುದೇ ರಂಗದವರಿರಲಿ, ಪ್ರಭಾವಿಗಳಾಗಿರಲಿ ಅವರು ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿದ್ದರೆ ಅವರನ್ನು ವಿಚಾರಣೆಗೆ ಒಳಪಡಿಸುತ್ತೇವೆ. ಶಿಕ್ಷೆಗೂ ಒಳಪಡಿಸುತ್ತೇವೆ’ ಎಂದು ಸ್ಪಷ್ಟಪಡಿಸಿದರು.

‘ಡ್ರಗ್ಸ್ ವಿರುದ್ದ ಕಾರ್ಯಾಚರಣೆ ಆರು ತಿಂಗಳುಗಳಿಂದ ನಡೆಯುತ್ತಿದೆ. ಎನ್‌ಸಿಬಿಯವರು ಟ್ವೀಟ್ ಮಾಡಿದ ಬಳಿಕ ಅನೇಕ ಜನ ೀ ಬಗ್ಗೆ ಮಾತನಾಡಲು ಆರಂಭಿಸಿದರು. ಡ್ರಗ್ಸ್ ಸಂಬಂಧ ಹೇಳಿಕೆ ಕೊಟ್ಟವರನ್ನೂ ಕರೆದು ವಿಚಾರಣೆ ಮಾಡುತ್ತಿದ್ದೇವೆ. ನಮ್ಮದೇ ಆದ ಮಾಹಿತಿಯಿಂದ ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಜಾಲ ಪತ್ತೆಗೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಬೆಂಗಳೂರಿನಲ್ಲಿ ರೇವ್ ಪಾರ್ಟಿಗಳಲ್ಲಿ ಭಾಗಯಾದವರ ಬಗ್ಗೆಯೂ ತನಿಖೆ ನಡೆಯುತ್ತಿದ್ದು, ಸಾಕ್ಷ್ಯಗಳನ್ನು ಕಲೆ ಹಾಕಲಾಗುತ್ತಿದೆ’ ಎಂದರು.

ADVERTISEMENT

‘ಮುಂದಿನ ದಿನಗಳಲ್ಲಿ ಡ್ರಗ್ಸ್ ಮಾಫಿಯಾವನ್ನು ಮಟ್ಟ ಹಾಕಲು ಕ್ರಮ ಕೈಗೊಳ್ಳಲಾಗುತ್ತದೆ. ಇದನ್ನು ಕೇವಲ ಸಿಸಿಬಿ ಪೊಲೀಸರು ಮಾತ್ರ ಅಲ್ಲ,. ಪ್ರತಿ ಠಾಣೆಗಳಲ್ಲೂ ಈ ಕೆಲಸ ನಡೆಯಲಿದೆ. ಈ ಸಂಬಂಧ ಸೂಚನೆ ನೀಡಲಾಗಿದೆ. ದೊಡ್ಡ ಕಾರ್ಯಾಚರಣೆ ಮಾಡಲು ತಿಳಿಸಿದ್ದೇನೆ’ ಎಂದರು.

ನಟಿಗೆ ರಾಗಿಣಿ ಅವರಿಗೆ ನೊಟೀಸ್ ಕೊಟ್ಟರೂ ವಿಚಾರಣೆಗೆ ಬಾರದಿರುವ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ನಮ್ಮ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಅವರು ಅ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾರೆ. ಊಹಾಪೋಹದ ಮೇಲೆ ಯಾರ ಹೆಸರು ಹೇಳುವುದಿಲ್ಲ. ಸಾಕ್ಷ್ಯವನ್ನು ಆಧಾರ ಇಟ್ಟುಕೊಂಡು ನೋಟಿಸ್ ಕೊಡುತ್ತಾರೆ. ಈ ದಂಧೆಯ ಹಿಂದೆ ಯಾರೇ ಇದ್ದರೂ ಕ್ರಮ ತೆಗೆದುಕೊಳ್ಳುವುದು ಖಚಿತ’ ಎಂದೂ ಹೇಳಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.