ADVERTISEMENT

ವಾರ್ ರೂಮ್‌ಗೆ ಭೇಟಿ ನೀಡಿದ್ದ ವೇಳೆ ಕ್ಷಮೆಯಾಚನೆ: ಅಲ್ಲಗಳೆದ ಸಂಸದ ತೇಜಸ್ವಿಸೂರ್ಯ

​ಪ್ರಜಾವಾಣಿ ವಾರ್ತೆ
Published 7 ಮೇ 2021, 10:49 IST
Last Updated 7 ಮೇ 2021, 10:49 IST
ಸಂಸದ ತೇಜಸ್ವಿ ಸೂರ್ಯ
ಸಂಸದ ತೇಜಸ್ವಿ ಸೂರ್ಯ   

ಬೆಂಗಳೂರು:ಬಿಬಿಎಂಪಿಯ ದಕ್ಷಿಣ ವಲಯದ ಕೋವಿಡ್‌ವಾರ್ಡ್‌ ರೂಮ್‌ಗೆ ಗುರುವಾರ ಸಂಜೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಮುಸ್ಲಿಂ ಸಿಬ್ಬಂದಿಯ ಕ್ಷಮೆ ಕೋರಿದ್ದೇನೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಈ ರೀತಿ ಯಾರದೇ ಕ್ಷಮೆ ಕೇಳಿಲ್ಲ ಎಂದು ತೇಜಸ್ವಿ ಸೂರ್ಯ ಟ್ವಿಟರ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಬೆಡ್ ಬ್ಲಾಕಿಂಗ್ ಹಗರಣವನ್ನು ಬಯಲಿಗೆಳೆದಿದ್ದ ತೇಜಸ್ವಿ ಸೂರ್ಯ, ಈ ವೇಳೆ 17 ಮುಸ್ಲಿಂ ನೌಕರರ ಹೆಸರು ಮಾತ್ರ ಉಲ್ಲೇಖಿಸಿ ನೇರ ಆರೋಪ ಮಾಡಿದ್ದರು. ಆದರೆ, 200ಕ್ಕೂ ಹೆಚ್ಚು ಜನ ಕಾರ್ಯನಿರ್ವಹಿಸುವ ಈ ವಾರ್ ರೂಮ್ ನ ಹಾಸಿಗೆ ನಿಯೋಜನೆ ವಿಭಾಗದಲ್ಲಿ ಒಬ್ಬ ಮುಸ್ಲಿಂ ಯುವಕ ಮಾತ್ರ ಕೆಲಸ ಮಾಡುತ್ತಿದ್ದರು. ಬೆಡ್ ಬ್ಲಾಕಿಂಗ್ ಹಗರಣಕ್ಕೂ ಉದ್ದೇಶಪೂರ್ವಕವಾಗಿ ಕೋಮು ಬಣ್ಣ ನೀಡಿದ್ದಾರೆ ಎಂದು ಸಂಸದರ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು.

‘ಸಂಸದ ತೇಜಸ್ವಿ ಸೂರ್ಯ ಗುರುವಾರ ಸಂಜೆ ವಾರ್‌ ರೂಮ್‌ಗೆ ಭೇಟಿ ನೀಡಿದ್ದು ನಿಜ. ಆ ಕ್ಷಣದಲ್ಲಿ ನಾನು ಸ್ಥಳದಲ್ಲಿ ಇರಲಿಲ್ಲ. ಯಾರೂ ಈ ವಿಷಯವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ಧೈರ್ಯದಿಂದ ಇರಿ ಎಂದು ಸಂಸದರು ವಿಶ್ವಾಸ ತುಂಬಿದ್ದಾಗಿ ಸಿಬ್ಬಂದಿ ನನಗೆ ತಿಳಿಸಿದರು’ ಎಂದು ವಾರ್‌ ರೂಮ್‌ಗೆ ಗುತ್ತಿಗೆ ಸಿಬ್ಬಂದಿ ಪೂರೈಸಿರುವ ಕ್ರಿಸ್ಟಲ್‌ ಏಜೆನ್ಸಿಯ ಯೋಜನಾ ವ್ಯವಸ್ಥಾಪಕ ಶಿವು ನಾಯ್ಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಕರಣದ ನಂತರ ಬಹಳಷ್ಟು ಸಿಬ್ಬಂದಿ ಕೆಲಸಕ್ಕೆ ಬರುತ್ತಿರಲಿಲ್ಲ. ಈ ಸಂದರ್ಭದಲ್ಲಿ ರಜೆ ಹಾಕುವುದು ಬೇಡ. ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಕರ್ತವ್ಯಕ್ಕೆ ಹಾಜರಾಗಿ ಎಂದು ಸಂಸದರು ಹೇಳಿದರು ಎಂದು ಸಿಬ್ಬಂದಿ ತಿಳಿಸಿದರು’ ಎಂಬುದಾಗಿ ಅವರು ಹೇಳಿದರು.

ಈ ಸಂಬಂಧ ಪ್ರತಿಕ್ರಿಯೆ ಪಡೆಯಲು ತೇಜಸ್ವಿ ಸೂರ್ಯ ಅವರಿಗೆ ಹಲವು ಬಾರಿ ಕರೆ ಮಾಡಲಾಯಿತು. ಅವರು ಸ್ವೀಕರಿಸಲಿಲ್ಲ.

ಬಿಬಿಎಂಪಿ ಬೆಡ್ ಹಂಚಿಕೆ ಸಾಫ್ಟ್‌ವೇರ್‌ನಲ್ಲಿ ಸುಧಾರಣೆ: ತೇಜಸ್ವಿ ಸೂರ್ಯ
ಕೋವಿಡ್–19 ಸೋಂಕಿತರಿಗೆ ಬಿಬಿಎಂಪಿಯ ಬೆಡ್ ಹಂಚಿಕೆಗೆ ಸಂಬಂಧಿಸಿದ ಸಾಫ್ಟ್‌ವೇರ್‌ನಲ್ಲಿ ಸುಧಾರಣೆ ಮಾಡಲಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಬಿಬಿಎಂಪಿಯ ಬೆಡ್ ಹಂಚಿಕೆ ಕುರಿತು ಹಿರಿಯ ಅಧಿಕಾರಿಗಳು ಮತ್ತು ತಂತ್ರಜ್ಞಾನ ತಂಡದ ಜತೆ ಎರಡನೇ ಸಭೆ ನಡೆಸಲಾಗಿದೆ. ಸಾಫ್ಟ್‌ವೇರ್‌ನಲ್ಲಿ ಆಗಬೇಕಿರುವ ಸುಧಾರಣೆಯನ್ನು ಅಂತಿಮಗೊಳಿಸಲಾಗಿದೆ’ ಎಂದು ಉಲ್ಲೇಖಿಸಿದ್ದಾರೆ.

ಈಚೆಗೆ ತೇಜಸ್ವಿ ಸೂರ್ಯ ಅವರು, ಬೆಡ್ ಬ್ಲಾಕಿಂಗ್ ಹಗರಣವನ್ನು ಬಯಲಿಗೆಳೆದಿದ್ದರು.

ಮುಂದಿನ 100 ಗಂಟೆಯೊಳಗೆ ಇದನ್ನು ಅನುಷ್ಠಾನಗೊಳಿಸುವ ಗುರಿ ನಿಗದಿಪಡಿಸಿದ್ದೇವೆ. ಈ ಪೈಕಿ ಕೆಲವು ಬದಲಾವಣೆಗಳು ನಾಳೆಯಿಂದಲೇ ಜಾರಿಗೆ ಬರಲಿವೆ ಎಂದು ಅವರು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಬೆಡ್‌ ಹಂಚಿಕೆ ವ್ಯವಸ್ಥೆಯಲ್ಲಿನ ಅಕ್ರಮವನ್ನು ಸರಿಪಡಿಸುವ ಯತ್ನಕ್ಕೆ ಬೆಂಬಲ ನೀಡಿದ ಮುಖ್ಯಮಂತ್ರಿ ಬಿ.ಎ.ಎಸ್.ಯಡಿಯೂರಪ್ಪನವರಿಗೆ ಧನ್ಯವಾದಗಳು. ಅವರ ನಾಯಕತ್ವದಡಿ ದೃಢವಾದ, ಪರಿಣಾಮಕಾರಿ ಮತ್ತು ಪಾರದರ್ಶಕ ಸೇವೆಯನ್ನು ಬೆಂಗಳೂರಿನ ಜನತೆಗೆ ನೀಡಲಿದ್ದೇವೆ ಎಂದು ತೇಜಸ್ವಿ ಸೂರ್ಯ ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.