ADVERTISEMENT

Bengaluru Stampede | ದುರಂತಕ್ಕೆ ಸರ್ಕಾರವೇ ಹೊಣೆ: ಟೀಕೆಗಳ ಸುರಿಮಳೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 23:30 IST
Last Updated 4 ಜೂನ್ 2025, 23:30 IST
<div class="paragraphs"><p>ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ</p></div>

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ

   

ಬೆಂಗಳೂರು: ‘ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕಾಲ್ತುಳಿತಕ್ಕೆ ಸರ್ಕಾರವೇ ಹೊಣೆ. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು’ ಎಂದು ಬಿಜೆಪಿಯ ಹಲವು ನಾಯಕರು ಒತ್ತಾಯಿಸಿದ್ದಾರೆ.

ಕಾಲ್ತುಳಿತಕ್ಕೆ ಸಿಲುಕಿ, ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಗರಿಕರ ಕ್ಷೇಮ ವಿಚಾರಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ‘ವಿಜಯೋತ್ಸವದ ವೇಳೆ ನಿರೀಕ್ಷೆ ಮೀರಿ ಜನರು ಬಂದಿದ್ದಾರೆ. ಕಾಲ್ತುಳಿತಕ್ಕೆ ಸಿಲುಕಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಕೆಲವರು ಸಾವು–ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇಂತಹ ದುರಂತಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ’ ಎಂದು ದೂರಿದರು.

ADVERTISEMENT

ಸಂಭ್ರಮಾಚರಣೆಗೆ ಸೇರಬಹುದಾದ ಜನರ ಲೆಕ್ಕಾಚಾರವನ್ನು ಸರಿಯಾಗಿ ಅಂದಾಜಿಸದೇ ಇರುವುದರಿಂದ ಇಂತಹ ದುರಂತ ನಡೆದಿದೆ. ಸೂಕ್ತ ವ್ಯವಸ್ಥೆ ಮಾಡಿಕೊಂಡು ಮತ್ತೊಂದು ದಿನ ಸಂಭ್ರಮಾಚರಣೆ ಹಮ್ಮಿಕೊಳ್ಳಬಹುದಿತ್ತು. ಸರ್ಕಾರದ ಆತುರದ ನಿರ್ಧಾರವೇ ದುರಂತಕ್ಕೆ ಕಾರಣ. ಇದಕ್ಕೆ ಯಾರು ಹೊಣೆ? ರಾಜ್ಯ ಸರ್ಕಾರ ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ಘೋಷಿಸಬೇಕು. ಸೂಕ್ತ ಚಿಕಿತ್ಸೆ ಕೊಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

‘ಸರ್ಕಾರಿ ಪ್ರಾಯೋಜಿತ ಕೊಲೆ’

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತದಿಂದ ಸಂಭವಿಸಿದ ಸಾವುಗಳು ಸರ್ಕಾರಿ ಪ್ರಾಯೋಜಿತ ಕೊಲೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ದೂರಿದರು.

ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡವರ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನಡುವಿನ ಮುಸುಕಿನ ಗುದ್ದಾಟ ಕ್ರೆಡಿಟ್‌ವಾರ್‌ ರೂಪ ತಾಳಿದ್ದೇ  ಬುಧವಾರದ ಸಂಭ್ರಮಾಚರಣೆಯ ಅವ್ಯವಸ್ಥೆಗೆ ಕಾರಣಾವಾ ಎಂಬ ಅನುಮಾನ ಮೂಡುತ್ತಿವೆ. ಸ್ಥಳದಲ್ಲಿದ್ದು ವ್ಯವಸ್ಥೆಯ ಮೇಲುಸ್ತುವಾರಿ ನೋಡಿಕೊಳ್ಳಬೇಕಾದ ಬೆಂಗಳೂರು ಉಸ್ತುವಾರಿ ಸಚಿವರೂ ಆದ ಉಪಮುಖ್ಯಮಂತ್ರಿ ಫೋಟೊ ತೆಗೆಸಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಹೋಗುತ್ತಾರೆ. ಕಡೆಯ ಕ್ಷಣದವರೆಗೂ ಮೆರವಣಿಗೆ ಮಾಡಬೇಕೋ, ಬೇಡವೋ ಎನ್ನುವ ಸ್ಪಷ್ಟತೆಯೇ ಪೊಲೀಸರಿಗೆ ಇರಲಿಲ್ಲ ಎಂದು ದೂರಿದರು.

ಲಕ್ಷಾಂತರ ಜನರು ಸೇರುವ ಕ್ರೀಡಾಂಗಣದ ಬಳಿ ಆಂಬುಲೆನ್ಸ್‌, ಅಗ್ನಿಶಾಮಕ ವಾಹನ ಸೇರಿದಂತೆ ಯಾವುದೇ ಮುಂಜಾಗ್ರತಾ ವ್ಯವಸ್ಥೆ ಇರಲಿಲ್ಲ. ಇದಕ್ಕೆಲ್ಲಾ ಯಾರು ಹೊಣೆ? ತಮ್ಮ ಪ್ರಚಾರದ ತೆವಲಿಗೆ ಅಮಾಯಕರನ್ನು ಬಲಿ ತೆಗೆದುಕೊಂಡ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಕಿಂಚಿತ್ತಾದರೂ ಮಾನವೀಯತೆ, ಆತ್ಮಸಾಕ್ಷಿ ಇದ್ದರೆ ಕೊಡಲೇ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.

ಸರಿಯಾದ ಪೂರ್ವಸಿದ್ಧತೆ ಇಲ್ಲದೆ, ಪೊಲೀಸರಿಗೆ ಸಮಯ ಕೊಡದೆ ಅಭಿನಂದನಾ ಸಮಾರಂಭ ನಡೆಸಿದ್ದೇ ಈ ಅನಾಹುತಕ್ಕೆ ಕಾರಣ. ಮೃತರ ಕುಟುಂಬಗಳಿಗೆ ತಲಾ ₹25 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಉನ್ನತ ತನಿಖೆಗೆ ಆಗ್ರಹ

ಪೂರ್ವಸಿದ್ಧತೆ ಮಾಡಿಕೊಳ್ಳದೆ ಅವಸರದಲ್ಲಿ ಎರಡು ಕಾರ್ಯಕ್ರಮ ಆಯೋಜನೆ ಮಾಡಿದ್ದು, ದೊಡ್ಡ ಸಂಖ್ಯೆಯಲ್ಲಿ ಜನರು ಸೇರಲು ಅವಕಾಶ ಮಾಡಿಕೊಟ್ಟಿದ್ದು ದುರಂತಕ್ಕೆ ಕಾರಣ. ಘಟನೆ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಬೇಕು ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ.

ಈ ಕುರಿತ್ ‘ಎಕ್ಸ್‌’ ಮಾಡಿರುವ ಅವರು, ‘ಹಿಂದೆ ವಿಶ್ವಕಪ್‌ ಗೆದ್ದಾಗ ಮುಂಬೈನಲ್ಲಿ ಮೆರವಣಿಗೆ ಮಾಡುವ ಮುಖಾಂತರ ಜನರಿಗೆ ಅಲ್ಲಲ್ಲಿ‌ ಕ್ರಿಕೆಟ್ ಆಟಗಾರರನ್ನು ನೋಡಲು ಅವಕಾಶ ಕಲ್ಪಿಸಲಾಗಿತ್ತು. ಇದರಿಂದ ನೂಕುನುಗ್ಗಲಿಗೆ ಅವಕಾಶವೇ ಇರಲಿಲ್ಲ’ ಎಂದು ಸ್ಮರಿಸಿದ್ದಾರೆ.

ಸಂಭ್ರಮದ ವೇಳೆ ನಡೆದ ಸಾವಿನ ಘಟನೆ ದಿಗ್ಭ್ರಮೆ ಮೂಡಿಸಿದೆ. ಬೇಜವಾಬ್ದಾರಿ ಸರ್ಕಾರದಿಂದ ಸಂಭ್ರಮೋತ್ಸವಕ್ಕೆ ಸೂತಕದ ಛಾಯೆ ಆವರಿಸಿದೆ.
–ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ
ಆಟಗಾರರ ಅಭಿನಂದನಾ ಸಮಾರಂಭ, ತೆರೆದ ವಾಹನದ ಮೆರವಣಿಗೆ ಪೂರ್ವ ನಿರ್ಧರಿತವಾಗಿದ್ದರೂ, ಸರ್ಕಾರ ಸಂಪೂರ್ಣ ವಿಫಲವಾಗಿದೆ.
–ವಿ. ಸೋಮಣ್ಣ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ
ಸಂಭ್ರಮಾಚರಣೆ ಮೊದಲೇ ಆಯೋಜನೆ ಆಗಿತ್ತು. ಆದರೂ ಭದ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ಇದು ನಿರ್ಲಕ್ಷ್ಯಕ್ಕೆ ಸಾಕ್ಷಿ, ಅಭಿಮಾನಿಗಳ ಸಾವಿಗೆ ಸರ್ಕಾರವೇ ಹೊಣೆ.
–ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ಸಮಾರಂಭವನ್ನು ಸರ್ಕಾರವು ಪೂರ್ವಸಿದ್ಧತೆ, ಭದ್ರತೆ ಜೊತೆ ಆಯೋಜಿಸಬಹುದಿತ್ತು. ಅಸಮರ್ಥ ಆಡಳಿತದಿಂದ ಅಮಾಯಕರು ಸಾವನ್ನಪ್ಪಿದ್ದಾರೆ.
–ಅರವಿಂದ ಬೆಲ್ಲದ, ವಿಧಾನಸಭೆ ವಿರೋಧ ಪಕ್ಷದ ಉಪನಾಯಕ
ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ನೈತಿಕ ಹೊಣೆ ಹೊರಬೇಕು. ಮೃತರ ಕುಟುಂಬದವರಿಗೆ ಸರ್ಕಾರ ₹25 ಲಕ್ಷ ಪರಿಹಾರ ನೀಡಬೇಕು.
–ಮಹೇಶ ಟೆಂಗಿನಕಾಯಿ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.