
ಬೆಂಗಳೂರು: ‘ಚುನಾವಣಾ ರಾಜಕೀಯದಲ್ಲಿ ಮತದಾರರು ನೀಡಿದ ಸೋಲು ಗೆಲುವಿನ ತೀರ್ಪಿಗೆ ತಲೆ ಬಾಗಿದ್ದೇನೆ ಹೊರತು, ಅಧಿಕಾರಕ್ಕಾಗಿ ಪಕ್ಷ- ಸಿದ್ದಾಂತವನ್ನು ಬದಲಾಯಿಸಿಲ್ಲ’ ಎಂದು ಸಂಸದ ಜಗದೀಶ್ ಶೆಟ್ಟರ್ ಅವರಿಗೆ ಕಾಂಗ್ರೆಸ್ ಮುಖಂಡ ಬಿ.ಕೆ ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.
‘ಜಗದೀಶ ಶೆಟ್ಟರ್ ಅವರೇ...ನನ್ನ ಇಡೀ ಚುನಾವಣಾ ರಾಜಕೀಯ ಜೀವನದಲ್ಲಿ ಎಂದೂ ಜಾತಿಯ ಹೆಸರಿನಲ್ಲಿ, ಹಣ ಬಲದ ಮೇಲೆ ಚುನಾವಣೆ ಎದುರಿಸಿಲ್ಲ. ಮುಂದೆಯೂ ಜಾತಿ,ಧರ್ಮ, ಹಣಬಲ, ತೋಳ್ಬಲದ ಮೇಲೆ ಚುನಾವಣೆ ನಡೆಸುವುದೂ ಇಲ್ಲ. ಗ್ರಾಮ ಪಂಚಾಯಿತಿ ಚುನಾವಣೆಯನ್ನೂ ಎದುರಿಸದೇ ನೇರವಾಗಿ ಗುಜರಾತಿನಲ್ಲಿ ಮುಖ್ಯಮಂತ್ರಿಯಾದವರ ಹೆಸರಿನ ಮೇಲೆಯೇ ಸಂಸದರಾಗಿ ಚುನಾವಣಾ ರಾಜಕೀಯದ ಸೋಲು ಗೆಲುವಿನ ಬಗ್ಗೆ ಮಾತಾಡುವುದು ಹಾಸ್ಯಾಸ್ಪದ’ ಎಂದು ಹೇಳಿದ್ದಾರೆ.
‘ಸಂಘಕ್ಕೂ ರಾಜಕೀಯಕ್ಕೂ ಸಂಬಂಧವೇ ಇಲ್ಲ ಎಂದು ನವರಂಗಿ ಆಟವಾಡುವಾಗ ಗೋಸುಂಬೆ ನಾಟಕ ಯಾಕೆ? ದೇಶದಲ್ಲೇ ಮಾದರಿ ಚುನಾವಣೆ ನಡೆಸಿ ಗೆಲ್ಲುವ ನಿಮ್ಮ ಚುನಾವಣಾ ತಂತ್ರಗಾರಿಕೆ ಬಗ್ಗೆ ಮಾತಾಡುವುದು ಬೇಡ ಬಿಡಿ. ಅದರ ಬಗ್ಗೆ ಬಹಿರಂಗ ಚರ್ಚೆಗೆ ಆಹ್ವಾನಿಸಬೇಡಿ’ ಎಂದು ಪರೋಕ್ಷವಾಗಿ ಕುಟುಕಿದ್ದಾರೆ.
‘ಚುನಾವಣೆ ರಾಜಕೀಯಕ್ಕೂ, ಪ್ರಜಾಪ್ರಭುತ್ವದ ಪ್ರಕ್ರಿಯೆಗೂ, ಸಂಘ ಪರಿವಾರದ ಸಂಬಂಧಗಳ ಬಗ್ಗೆ ಚರ್ಚೆಗೆ ನಾನು ಸಿದ್ಧವಿದ್ದೇನೆ. ಇದರ ಬಗ್ಗೆ ಹಾದಿ ಬೀದಿಯಲ್ಲಿ ಮಾತಾಡೋದು ಬೇಡ. ಸಂಘ ಪರಿವಾರದ ಕರಾಳ ಇತಿಹಾಸವನ್ನು ದಾಖಲೆ ಸಮೇತ ಬಿಚ್ಚಿಡಲು ನಾನು ಸಿದ್ಧ. ಅದಕ್ಕಾಗಿ ಬಹಿರಂಗ ಚರ್ಚೆಗೆ ವೇದಿಕೆಯಾಗಲಿ. ಒಂದಿಷ್ಟು ತಯಾರಿ-ತಾಲೀಮುಗಳೊಂದಿಗೆ ಬಿಜೆಪಿ ನಾಯಕರಾದಿಯಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರನ್ನೂ ಕರೆದುಕೊಂಡು ಬನ್ನಿ’ ಎಂದು ಸವಾಲೆಸೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.