ADVERTISEMENT

ಅನ್ನ ಭಾಗ್ಯಕ್ಕೆ ಕನ್ನ: ಅನರ್ಹರಿಂದ ₹11.91 ಕೋಟಿ ವಸೂಲಿ

3.17 ಲಕ್ಷ ಎಎವೈ, ಬಿಪಿಎಲ್‌ ಪಡಿತರ ಚೀಟಿ ರದ್ದು

ರಾಜೇಶ್ ರೈ ಚಟ್ಲ
Published 13 ಆಗಸ್ಟ್ 2022, 2:50 IST
Last Updated 13 ಆಗಸ್ಟ್ 2022, 2:50 IST
ಸಚಿವ ಉಮೇಶ ಕತ್ತಿ
ಸಚಿವ ಉಮೇಶ ಕತ್ತಿ   

ಬೆಂಗಳೂರು: ಅಂತ್ಯೋದಯ ಅನ್ನ ಯೋಜನೆ (ಎಎವೈ) ಮತ್ತು ಬಿಪಿಎಲ್‌ ಪಡಿತರ ಚೀಟಿಯನ್ನು ಅಕ್ರಮವಾಗಿ ಪಡೆದು ಬಡವರ ‘ಅನ್ನ ಭಾಗ್ಯ’ಕ್ಕೆ ಕನ್ನ ಹಾಕಿದವರನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕುಗೊಳಿಸಿರುವ ಆಹಾರ ಇಲಾಖೆ, ಅಂಥವರಿಂದ ₹11.91 ಕೋಟಿ ದಂಡ ವಸೂಲಿ ಮಾಡಿದೆ.

2021ರ ಜ.30ರಿಂದ ಇದೇ ಜೂನ್‌ 30ರವರೆಗೆ ಈ ಕಾರ್ಯಾಚರಣೆ ನಡೆಸಿರುವ ಇಲಾಖೆ, ತಹಶೀಲ್ದಾರ್‌ಗಳ ಮೂಲಕ ನೋಟಿಸ್‌ ಜಾರಿ ಮಾಡಿ ಕ್ರಮ ತೆಗೆದುಕೊಂಡಿದೆ. ಅನರ್ಹರು ಹೊಂದಿದ್ದ ಒಟ್ಟು 3.17 ಲಕ್ಷ ಪಡಿತರ ಚೀಟಿಗಳನ್ನು ಈ ಅವಧಿಯಲ್ಲಿ ರದ್ದುಪಡಿಸಿದೆ. ಈ ಪೈಕಿ, ಕೆಲವು ಪಡಿತರ ಚೀಟಿಗಳನ್ನು ಎಪಿಎಲ್‌ಗೆ ಪರಿವರ್ತಿಸಲಾಗಿದೆ.

ಬೆಳಗಾವಿ, ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಅನರ್ಹ ಪಡಿತರ ಚೀಟಿ ಹೊಂದಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಜಿಲ್ಲೆಗಳಲ್ಲಿ
₹1 ಕೋಟಿಗೂ ಹೆಚ್ಚು ದಂಡ ವಸೂಲಿ ಮಾಡಲಾಗಿದೆ.

ADVERTISEMENT

ಈ ಮಧ್ಯೆ, ಸಾರಿಗೆ ಇಲಾಖೆಯ ನೆರವು ಪಡೆದು ನಾಲ್ಕು ಚಕ್ರದ ವೈಯಕ್ತಿಕ ವಾಹನ ಹೊಂದಿರುವ 12,584 ಎಎವೈ, ಬಿಪಿಎಲ್‌ ಪಡಿತರ ಚೀಟಿದಾರರನ್ನು ಗುರುತಿಸಿರುವ ಇಲಾಖೆ, ಅಂಥವರ ವಿರುದ್ಧವೂ ಕಾರ್ಯಾಚರಣೆ ಆರಂಭಿಸಿದೆ.

ಸರ್ಕಾರದ ಮಾನದಂಡಗಳ ಪ್ರಕಾರ, ಆದಾಯ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರು, 3 ಹೆಕ್ಟೇರ್‌ಗಿಂತ ಹೆಚ್ಚು ಜಮೀನು ಹೊಂದಿದವರು, ₹1.20 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿದವರು ಮತ್ತು ನಾಲ್ಕು ಚಕ್ರದ ವೈಯಕ್ತಿಕ ವಾಹನ ಇರುವವರು ಎಎವೈ ಅಥವಾ ಬಿಪಿಎಲ್‌ ಪಡಿತರ ಚೀಟಿ ಪಡೆಯಲು ಅರ್ಹರಲ್ಲ. ಈ ನಿಯಮಗಳನ್ನು ಉಲ್ಲಂಘಿಸಿ ಈ ಪಡಿತರ ಚೀಟಿ ಹೊಂದಿದವರನ್ನು ‘ಅನರ್ಹರು’ ಎಂದು ಇಲಾಖೆ ಪಟ್ಟಿ ಮಾಡಿದೆ.

‘ನಾಲ್ಕು ಚಕ್ರಗಳ ವಾಹನ ಹೊಂದಿರುವ ಎಎವೈ ಮತ್ತು ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ಕುಟುಂಬಗಳ ಮಾಹಿತಿ ನೀಡುವಂತೆ ಸಾರಿಗೆ ಇಲಾಖೆಯನ್ನು ಕೋರಲಾಗಿತ್ತು. ಪಡಿತರ ಚೀಟಿಗೆ ಜೋಡಣೆಯಾದ ಆಧಾರ್ ಸಂಖ್ಯೆಯ ಆಧಾರದಲ್ಲಿ ಅಂಥ ವಾಹನ ಹೊಂದಿರುವವರ ಪಟ್ಟಿಯನ್ನು ಇಲಾಖೆ ನೀಡಿದೆ. ಅಂಥವರಿಗೂ ಸ್ವಯಂ ಪ್ರೇರಣೆಯಿಂದ ಪಡಿತರ ಚೀಟಿ ಹಿಂದಿರುಗಿಸಲು ಹಲವು ಬಾರಿ ಅವಕಾಶ ನೀಡಲಾಗಿದೆ. ಇಲಾಖೆಯ ಸೂಚನೆಗೆ ಸ್ಪಂದಿಸದವರಿಗೆ ಇದೀಗ 2021ರ ಜುಲೈ 12ರಂದು ನೀಡಿದ್ದ ಆದೇಶದಂತೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ದಾಖಲೆಗಳು, ಹೆಸರಿನ ವ್ಯತ್ಯಾಸ ಗೊಂದಲ ಇದ್ದಲ್ಲಿ ಸ್ಥಳ ಪರಿಶೀಲಿಸುವ ಅಧಿಕಾರವನ್ನು ಅಧಿಕಾರಿಗಳಿಗೆ ನೀಡಲಾಗಿದೆ’ ಎಂದೂ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.