ADVERTISEMENT

ಶಿವಮೊಗ್ಗ ಲೋಕಸಭಾ ಉಪ ಚುನಾವಣೆ: ರಾಘವೇಂದ್ರ, ಮಹಿಮ ನಾಮಪತ್ರ ಸಲ್ಲಿಕೆ

ಮಾಜಿ ಮುಖ್ಯಮಂತ್ರಿಗಳ ಪುತ್ರರ ಮಧ್ಯೆ ತ್ರಿಕೋನ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2018, 12:02 IST
Last Updated 15 ಅಕ್ಟೋಬರ್ 2018, 12:02 IST
ಬಿ.ವೈ. ರಾಘವೇಂದ್ರ,  ಮಹಿಮ ಪಟೇಲ್‌
ಬಿ.ವೈ. ರಾಘವೇಂದ್ರ, ಮಹಿಮ ಪಟೇಲ್‌   

ಶಿವಮೊಗ್ಗ:ಲೋಕಸಭಾ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿ ಬಿ.ವೈ. ರಾಘವೇಂದ್ರ, ಜೆಡಿಯುನಿಂದ ಮಹಿಮ ಪಟೇಲ್‌ ಸೋಮವಾರ ನಾಮಪತ್ರ ಸಲ್ಲಿಸಿದರು.

ತಂದೆ ಬಿ.ಎಸ್. ಯಡಿಯೂರಪ್ಪ, ಪತ್ನಿ ತೇಜಸ್ವಿನಿ ಜತೆ ಶಿವಮೊಗ್ಗ ನಗರದ ಹಲವು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ಸಮಯದಲ್ಲಿ ಯಡಿಯೂರಪ್ಪ ಹಾಜರಿರಲಿಲ್ಲ. ಶಾಸಕರಾದ ಕೆ.ಎಸ್. ಈಶ್ವರಪ್ಪ, ಹರತಾಳು ಹಾಲಪ್ಪ,ವಿಧಾನ ಪರಿಷತ್ ಮಾಜಿ ಸದಸ್ಯಎಂ.ಬಿ. ಭಾನುಪ್ರಕಾಶ್ ಉಪಸ್ಥಿತರಿದ್ದರು.

ಮಹಿಮ ಪಟೇಲ್‌ ಬೆಂಬಲಿಗರ ಜತೆ ಬಂದು ಮಧ್ಯಾಹ್ನ ನಾಮಪತ್ರ ಸಲ್ಲಿಸಿದರು.

ADVERTISEMENT

ಕಾಂಗ್ರೆಸ್–ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಅ. 16ರಂದು ಉಮೇದುವಾರಿಕೆ ಸಲ್ಲಿಸಲಿದ್ದಾರೆ.

ಮಾಜಿ ಮುಖ್ಯಮಂತ್ರಿಗಳ ಪುತ್ರರ ಮಧ್ಯೆ ತ್ರಿಕೋನ ಸ್ಪರ್ಧೆ

ಈ ಬಾರಿಯ ಉಪ ಚುನಾವಣೆಯಲ್ಲಿ ಸ್ಪರ್ಧಿಸಿರುವ ಮಧು ಬಂಗಾರಪ್ಪ, ಮಹಿಮ ಪಟೇಲ್‌ ಹಾಗೂ ರಾಘವೇಂದ್ರ ಮೂವರೂ ಮಾಜಿ ಮುಖ್ಯಮಂತ್ರಿಗಳ ಪುತ್ರರು.

ಮಧು ಅವರ ತಂದೆ ಬಂಗಾರಪ್ಪ 1990–92ರಲ್ಲಿ, ಮಹಿಮ ತಂದೆ ಜೆ.ಎಚ್‌. ಪಟೇಲ್‌ 1996–99ರಲ್ಲಿ, ರಾಘವೇಂದ್ರ ತಂದೆ ಬಿ.ಎಸ್. ಯಡಿಯೂರಪ್ಪ 2008–11ರಲ್ಲಿ ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಈ ಮೂವರೂ ಹಿಂದೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಸಂಸತ್ ಪ್ರವೇಶಿಸಿರುವುದು ಮತ್ತೊಂದು ವಿಶೇಷ. ಈಗ ಅವರ ಮಕ್ಕಳು ಪರಸ್ಪರ ಮುಖಾಮುಖಿಯಾಗಿದ್ದಾರೆ.

ಬಿಜೆಪಿ ವಿರುದ್ಧ ಜೆಡಿಎಸ್–ಕಾಂಗ್ರೆಸ್‌ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಿಕೊಂಡ ಪರಿಣಾಮ ಮಧು ಬಂಗಾರಪ್ಪ, ರಾಘವೇಂದ್ರ ಮಧ್ಯೆ ನೇರ ಸ್ಪರ್ಧೆ ನಿರೀಕ್ಷಿಸಲಾಗಿತ್ತು. ಮಹಿಮ ಅವರ ಅನಿರೀಕ್ಷಿತ ಪ್ರವೇಶ ತ್ರಿಕೋನ ಸ್ಪರ್ಧೆಗೆ ನಾಂದಿ ಹಾಡಿದೆ.

ಇಂದು ನಗರಕ್ಕೆ ಗಣ್ಯರ ದಂಡು

ಮಧು ಬಂಗಾರಪ್ಪ ನಾಮಪತ್ರ ಸಲ್ಲಿಸುವ ವೇಳೆ ಹಾಜರಿರಲು ಕಾಂಗ್ರೆಸ್– ಜೆಡಿಎಸ್ ಮುಖಂಡರ ದಂಡು ಶಿವಮೊಗ್ಗಕ್ಕೆ ಬರುತ್ತಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ಡಿ.ಕೆ. ಶಿವಕುಮಾರ್, ಡಿ.ಸಿ. ತಮ್ಮಣ್ಣ, ಆರ್‌.ವಿ. ದೇಶಪಾಂಡೆ, ಜಯಮಾಲಾ ಬರುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.