ADVERTISEMENT

Karnataka Bypoll Results: ಮಸ್ಕಿಯಲ್ಲಿ ಕಾಂಗ್ರೆಸ್, ಬಸವಕಲ್ಯಾಣದಲ್ಲಿ ಬಿಜೆಪಿ

ಉಪಚುನಾವಣೆ

​ಪ್ರಜಾವಾಣಿ ವಾರ್ತೆ
Published 2 ಮೇ 2021, 9:06 IST
Last Updated 2 ಮೇ 2021, 9:06 IST
ಕರ್ನಾಟಕ ಉಪಚುನಾವಣೆ
ಕರ್ನಾಟಕ ಉಪಚುನಾವಣೆ   

ಬೆಂಗಳೂರು: ಮಸ್ಕಿ ಹಾಗೂ ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತ ಎಣಿಕೆ ಪೂರ್ಣಗೊಂಡಿದೆ. ಮಸ್ಕಿಯಲ್ಲಿ ಕಾಂಗ್ರೆಸ್‌ ಮತ್ತು ಬಸವ ಕಲ್ಯಾಣದಲ್ಲಿ ಬಿಜೆಪಿ ಜಯಭೇರಿ ಸಾಧಿಸಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ಜಿದ್ದಾಜಿದ್ದಿಯ ಹಣಾಹಣಿಗೆ ಸಾಕ್ಷಿಯಾಗಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸತೀಶ ಜಾರಕಿಹೊಳಿ ಮತ್ತು ಮಂಗಲಾ ಅಂಗಡಿ ನಡುವೆ ಹಗ್ಗಜಗ್ಗಾಟ ಮುಂದುವರಿದಿದೆ.

ಕಾಂಗ್ರೆಸ್‌ ಅಭ್ಯರ್ಥಿ ಸತೀಶ ಜಾರಕಿಹೊಳಿ 10 ಸಾವಿರ ಮತಗಳ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಎಣಿಕೆ ಆರಂಭವಾದ್ದರಿಂದ ಇಷ್ಟು ಪ್ರಮಾಣದಲ್ಲಿ ಮುನ್ನಡೆ ಸಾಧಿಸಿದ್ದು ಇದೇ ಮೊದಲು.

2,52,104 ಮತಗಳನ್ನು ಪಡೆದಿರುವ ಅವರು, ಬಿಜೆಪಿಯ ಮಂಗಲಾ ಅಂಗಡಿ ಅವರನ್ನು ಹಿಂದಿಕ್ಕಿದ್ದಾರೆ. ಮಂಗಲಾ 2,42,079 ಮತಗಳನ್ನು ಗಳಿಸಿದ್ದಾರೆ.

ADVERTISEMENT
ಸತೀಶ ಜಾರಕಿಹೊಳಿ ಮತ್ತು ಮಂಗಲಾ ಸುರೇಶ ಅಂಗಡಿ

ಕೋವಿಡ್ ಕಾರಣದಿಂದಾಗಿ ಕಡಿಮೆ ಸಿಬ್ಬಂದಿ ನಿಯೋಜಿಸಿರುವುದರಿಂದಾಗಿ ಮತ ಎಣಿಕೆಯ ವೇಗ ಹಿಂದಿನ ಚುನಾವಣೆಗಳ ಮತ ಎಣಿಕೆಯಷ್ಟು ಪ್ರಮಾಣದಲ್ಲಿಲ್ಲ.

ಬಸವಕಲ್ಯಾಣ: 20,629 ಮತಗಳ ಅಂತರದಿಂದ ಶರಣು ‌ಸಲಗರ ಭರ್ಜರಿ ಗೆಲುವು

ಬಸವ ಕಲ್ಯಾಣ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶರಣು ‌ಸಲಗರ 20,629 ಮತಗಳ ಅಂತರದಿಂದ ಭರ್ಜರಿ ಗೆಲುವು ‌ಸಾಧಿಸಿದರು.

ಇಲ್ಲಿನ ಬಿ.ವಿ. ಭೂಮರೆಡ್ಡಿ ‌ಕಾಲೇಜಿನಲ್ಲಿ‌ ಮತ ಎಣಿಕೆ ನಡೆಯಿತು. ಮೊದಲ ಸುತ್ತಿನಿಂದಲೇ ಶರಣು ಮುನ್ನಡೆ ‌ಕಾಯ್ದುಕೊಂಡಿದ್ದರು. ಚುನಾವಣಾಧಿಕಾರಿ ಡಾ. ಆರ್. ರಾಮಚಂದ್ರನ್ ಪ್ರಮಾಣಪತ್ರ ನೀಡಿದರು.

ನಂತರ ‌ಸುದ್ದಿಗಾರರೊಂದದಿಗೆ ಮಾತನಾಡಿದ ಶರಣು, ಈ ಕ್ಷಣದಿಂದಲೇ ಕ್ಷೇತ್ರದ ಜನತೆಯ‌ ಕೋವಿಡ್ ‌ಸಂಕಷ್ಟಗಳಿಗೆ ಸ್ಪಂದಿಸುತ್ತೇನೆ. ಪಕ್ಷ ನನ್ನ ಮೇಲೆ ವಿಶ್ವಾಸ ಇಟ್ಟು ಗೆಲ್ಲಿಸಿದೆ. ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.

ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ ‌ಖೂಬಾ ಠೇವಣಿ ‌ಕಳೆದುಕೊಂಡರು‌ ಎಂದು ವ್ಯಂಗ್ಯವಾಡಿದರು.

ಶರಣು ಸಲಗರ ಮತ್ತು ಮಾಲಾ ನಾರಾಯಣರಾವ್

ಮಸ್ಕಿ: ಕಾಂಗ್ರೆಸ್‌ನ ಬಸನಗೌಡ ಗೆಲುವು

ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ 24 ಸಾವಿರ ಅಂತರದೊಂದಿಗೆ ಬಹುತೇಕ ಗೆಲುವು ಸಾಧಿಸಿದ್ದಾರೆ. ಇನ್ನು ಮೂರು ಸುತ್ತಿನ ಮತಗಳ ಎಣಿಕೆ ಮಾತ್ರ ಬಾಕಿ ಇದೆ.

ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅವರು ಪಕ್ಷ ಬದಲಿಸಿ ಸೋಲು ಅನುಭವಿಸಿದಂತಾಗಿದೆ.‌ ಕಾಂಗ್ರೆಸ್ ‌ಬಿಟ್ಟು‌ ಶಾಸಕ ಸ್ಥಾನಕ್ಕೆ‌ ರಾಜೀನಾಮೆ ನೀಡಿರುವುದು ಕ್ಷೇತ್ರದಲ್ಲಿ ‌ವಿರೋಧಿ ಅಲೆಗೆ ಕಾರಣವಾಗಿತ್ತು.

ಸೋಲುವುದು ನಿಶ್ಚಿತ ‌ಎನ್ನುವುದನ್ನು ಅರಿತು ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಅವರು ಮತ ಎಣಿಕೆ ಕೇಂದ್ರದಿಂದ ಹೊರ ನಡೆದರು.

'ಕ್ಷೇತ್ರದಲ್ಲಿ ವಿರೋಧಿ ಅಲೆ ಎದ್ದಿರುವುದು ಗೊತ್ತಾಗುತ್ತಿದೆ. ಅಭಿವೃದ್ಧಿ ಕೆಲಸಗಳನ್ನು ಮಾಡಿದಾಗ್ಯೂ ಜನರು ಬೆಲೆ ಕೊಟ್ಟಿಲ್ಲ. ನಿರೀಕ್ಷಿತ ಮತಗಟ್ಟೆಯಲ್ಲೂ ಬಿಜೆಪಿಗೆ ಮತಗಳು ಬಂದಿಲ್ಲ' ಎಂದು ಪ್ರತಾಪಗೌಡ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸೋಲಿಗೆ ಏನು ಕಾರಣ ಎಂಬುದು ಆನಂತರ ಪಕ್ಷದ ಹಿರಿಯರು ಕುರಿತು ಚರ್ಚಿಸಲಿದ್ದಾರೆ. ಪಕ್ಷದ ‌ತೀರ್ಮಾನಕ್ಕೆ ಬದ್ಧವಾಗಿದ್ದೇನೆ' ಎಂದರು.

ಪ್ರತಾಪಗೌಡ ಬಿಜೆಪಿ ಮತ್ತು ಬಸನಗೌಡ ತುರ್ವಿಹಾಳ

ಇನ್ನಷ್ಟು ಓದು....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.